ಮುಖ್ಯಮಂತ್ರಿ ಸದಾನಂದ ಗೌಡರಿಂದ ಗಿನಿಸ್ ದಾಖಲೆ?

'ಮುಖ್ಯಮಂತ್ರಿ ಕುರ್ಚಿಯಲ್ಲಿರುವುದು ಬೇಡ. ಬದಲಿಗೆ ನಮ್ಮ ಬಣದ ಜದೀಶ್ ಸೆಟ್ಟರ್ ಅವರನ್ನೇ ಸಿಎಂ ಮಾಡಬೇಕು ಎಂದು ಪಟ್ಟು ಹಿಡಿದಿರುವ ಮಾಜಿ ಸಿಎಂ ಯಡಿಯೂರಪ್ಪ ಬೆಂಬಲಿತ ಬಣದಲ್ಲಿ 9 ಸಚಿವರು ಶುಕ್ರವಾರ ರಾಜೀನಾಮೆ ನೀಡಿರುವ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಳಿ ಈಗ 80 ಖಾತೆಗಳ ಹೊರೆ ಬಿದ್ದಿದೆ. ಮುಖ್ಯಮಂತ್ರಿಯೊಬ್ಬರು ಇಷ್ಟೊಂದು ಕತ್ತೆ ಭಾರ ಹೊರುತ್ತಿರುವುದು ಇದೇ ಮೊದಲು. ಅದ್ದರಿಂದ ಇದು ಗಿನ್ನಿಸ್ ದಾಖಲೆಯಾ? ಎಂಬುದನ್ನು ಗಿನ್ನಿಸ್ ಸಂಸ್ಥೆಯೇ ಖಚಿತಪಡಿಸಬೇಕು.
ಸಾಮಾನ್ಯವಾಗಿ ಮುಖ್ಯಮಂತ್ರಿಯೊಬ್ಬರು ಅಧಿಕಾರ ವಹಿಸಿಕೊಂಡಾಗ ಭಿನ್ನಮತ ತಲೆದೋರಿದ್ದರೆ ಒಂದಷ್ಟು ದಿನಗಳ ಕಾಲ ಎಲ್ಲ ಖಾತೆಗಳನ್ನೂ ತಮ್ಮಲ್ಲೇ ಉಳಿಸಿಕೊಂಡು, ನಿಧಾನಕ್ಕೆ ಸಂಪುಟ ವಿಸ್ತರಣೆ ಧೈರ್ಯಕ್ಕೆ ಕೈಹಾಕುತ್ತಾರೆ. ಆದರೆ ಪ್ರಚಲಿತ ರಾಜಕೀಯ ಬೇಗುದಿಯಲ್ಲಿ ಸದಾನಂದ ಗೌಡರು ಬಹುತೇಕ ನಿರ್ಗಮನದ ಘಟ್ಟ ತಲುಪಿರುವಾಗ ತಮ್ಮ ಹೆಗಲ ಮೇಲೆ ಬರೋಬ್ಬರಿ 80 ಖಾತೆಗಳ ಭಾರ ಹೊತ್ತಿದ್ದಾರೆ. ಇದಲ್ಲವೆ ಪರಿಸ್ಥಿತಿಯ ವ್ಯಂಗ್ಯ ಅಂದರೆ!?
ಹಣಕಾಸು, ಕಂದಾಯ, ಸಹಕಾರ, ಗಣಿ, ಅರಣ್ಯ, ಪ್ರವಾಸೋದ್ಯಮ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ, ಮಹಿಳಾ ಮತ್ತು ಮಕ್ಕಳ ಕಲ್ಯಾಣ, ಮಾಹಿತಿ ತಂತ್ರಜ್ಞಾನ, ಪರಿಸರ, ವಿಜ್ಞಾನ, ಬಂದರು ಮತ್ತು ಒಳಾಡಳಿತ, ಮುಜರಾಯಿ, ಸಾಂಖ್ಯಿಕ, ಬೆಂಗಳೂರು ನಗರಾಭಿವೃದ್ಧಿ, ವಾರ್ತಾ ಮತ್ತು ಪ್ರಸಾರ, ಅಲ್ಪಸಂಖ್ಯಾತರ ಅಭಿವೃದ್ಧಿ, ವಕ್ಫ್, ಆಂತರಿಕ ಭದ್ರತೆ, ಮೂಲಸೌಕರ್ಯ, ಯುವಜನ ಮತ್ತು ಕ್ರೀಡೆ ಹಾಗೂ ಗೃಹ ಇಲಾಖೆಯ ಗುಪ್ತಾಚಾರ ವಿಭಾಗ ಮುಖ್ಯಮಂತ್ರಿ ಅವರೇ ನೋಡಿಕೊಳ್ಳುತ್ತಿದ್ದಾರೆ.
ಇದೀಗ ರಾಜಿನಾಮೆ ಸಲ್ಲಿಸಿರುವ 8 ಸಚಿವರ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್, ಅಬಕಾರಿ, ಲೋಕೋಪಯೋಗಿ, ಜಲಸಂಪನ್ಮೂಲ, ಬೃಹತ್ ಕೈಗಾರಿಕೆ, ವಸತಿ, ಕೃಷಿ, ಪಶುಸಂಗೋಪನೆ, ಲಾಟರಿ, ಸಣ್ಣ ಉಳಿತಾಯ, ಗ್ರಂಥಾಲಯ ಖಾತೆಗಳು ಸೇರ್ಪಡೆಗೊಂಡರೆ ಬಹುಶಃ ಭಾರತ ದೇಶದ ಇತಿಹಾಸದಲ್ಲಿ ಇಷ್ಟೊಂದು ಖಾತೆಗಳ ಉಸ್ತುವಾರಿ ನೋಡಿಕೊಂಡ ಏಕೈಕ ಮುಖ್ಯಮಂತ್ರಿ ಎಂಬ ಹೆಗ್ಗಳಿಕೆಗೆ ಸದಾನಂದ ಗೌಡ ಭಾಜನರಾಗಲಿದ್ದಾರೆ.
ಸದಾನಂದಗೌಡರು ದಿನದ ಇಪ್ಪತ್ನಾಲ್ಕು ಗಂಟೆ ಕೆಲಸ ಮಾಡಿದರೆ, 80ರಲ್ಲಿ ಪ್ರತಿ ಖಾತೆಗೂ ಅವರು ಮೀಸಲಿಡಬಹುದಾದ ಸಮಯ ಎಷ್ಟು ಎಂಬುದನ್ನು ನೀವೇ ಲೆಕ್ಕ ಹಾಕಿಕೊಳ್ಳಿ. ನಿನ್ನೆಯಷ್ಟೇ ನಿಮಿಷಾಂಬ ಮತ್ತು ತಾಯಿ ಚಾಮುಂಡಿಯ ಆಶೀರ್ವಾದ ಪಡೆದು ಬಂದಿರುವ ಸದಾನಂದ ಗೌಡರು ದೈತ್ಯ ಬಲದೊಂದಿಗೆ ಅಷ್ಟೂ ಖಾತೆಗಳನ್ನು ನಾಡಿನ ಜನತೆಯ ಹಿತದೃಷ್ಟಿಯಿಂದ ಯಶಸ್ವಿಯಾಗಿ ಹೊರಲಿ ಎಂದು ಆಶಿಸುತ್ತಾ ...












Click it and Unblock the Notifications