ರೆಡ್ಡಿಗೆ ಜೈಲೇ ಶಾಶ್ವತ, ಇಡಿ ಉರುಳಿಗೆ ಸಿಕ್ಕಿದೆ ಕೊರಳು

ಅಕ್ರಮ ಆಸ್ತಿ ಗಳಿಕೆ, ಮನಿ ಲಾಂಡ್ರಿಂಗ್, ಅದಿರು ಸುಂಕ ವಂಚನೆ ಇತರೆ ಆರೋಪಗಳ ಮೇಲೆ ಗಾಲಿ ರೆಡ್ಡಿ ಹಾಗೂ ಕುಟುಂಬದ ಮೇಲೆ ಪ್ರಕರಣ ದಾಖಲಿಸಿಕೊಳ್ಳಲು ಜಾರಿ ನಿರ್ದೇಶನಾಲಯ ಮುಂದಾಗಿದೆ. ಈ ನಿಟ್ಟಿನಲ್ಲಿ ಈಗಾಗಲೇ ಕೋರ್ಟಿಗೆ ಅಧಿಕೃತವಾಗಿ ಅರ್ಜಿ ಹಾಕಲಾಗಿದೆ.
ಕೇಂದ್ರ ಹಣಕಾಸು ಇಲಾಖೆ ಅಧೀನದಲ್ಲಿ ಬರುವ ಜಾರಿ ನಿರ್ದೇಶನಾಲಯ ರೆಡ್ಡಿ ವಿರುದ್ಧ ಎಫ್ಐಆರ್ ಮಾದರಿಯಲ್ಲಿ ಇಸಿಐಆರ್(enforcement case information report) ದಾಖಲಿಸಲಿದೆ.
ಇಡಿ ತನಿಖೆಯಿಂದ ಏನಾಗಲಿದೆ?: ಗಾಲಿ ರೆಡ್ಡಿಯ ಸಮಸ್ತ ಆಸ್ತಿ ಇಡಿ ವಶಕ್ಕೆ ಬರಲಿದೆ. ಬಳ್ಳಾರಿ ರೆಡ್ಡಿಗಳ ಸ್ಥಿರಾಸ್ಥಿ ಚರಾಸ್ಥಿಗಳನ್ನು ಜಪ್ತಿ ಮಾಡಿ ಮೌಲ್ಯ ಹಾಕಲಾಗುತ್ತದೆ. ರೆಡ್ಡಿ ಅವರ ಬಂಗಲೆ, ಕಾರು, ನಗ ನಾಣ್ಯ, ಐಷಾರಾಮಿ ಕಾರುಗಳು, ವಿದೇಶದ ಬ್ಯಾಂಕ್ ನಲ್ಲಿರುವ ನಗದು ಸೇರಿದಂತೆ ಎಲ್ಲವೂ ಇಡಿ ಕೈಗೆ ಸಿಗಲಿದೆ.
ಸದ್ಯಕ್ಕೆ ಅಸೋಸಿಯೇಟೆಡ್ ಮೈನಿಂಗ್ ಕಂಪನಿಯ ಅದಿರು ರಫ್ತು, ಸುಂಕ ವಂಚನೆ ಬಗ್ಗೆ ತನಿಖೆ ನಡೆಸಲು ಅನುಮತಿ ಕೋರಿ ಸಿಬಿಐ ನ್ಯಾಯಾಲಯದಲ್ಲಿ ಮನವಿ ಸಲ್ಲಿಸಲಾಗಿದೆ.
ರೆಡ್ಡಿಗೆ ಜೈಲು ಶಾಶ್ವತವೇ? : ಜಾರ್ಖಂಡಿನ ಮಾಜಿ ಮುಖ್ಯಮಂತ್ರಿ ಮಧು ಕೋಡಾ ಮಾದರಿಯಲ್ಲಿ (2 ವರ್ಷದಿಂದ) ದೀರ್ಘ ಕಾಲ ಜೈಲಿನಲ್ಲಿ ಉಳಿಯುವುದು ರೆಡ್ಡಿಗೆ ಅನಿವಾರ್ಯವಾಗಲಿದೆ. ಇದೇ ರೀತಿ ಅಕ್ರಮ ಆಸ್ತಿ ಗಳಿಕೆ ಆರೋಪ ಹೊತ್ತಿರುವ ಜಗನ್ ಮೋಹನ್ ರೆಡ್ಡಿಗೂ ಇಡಿ ಬಿಸಿ ತಟ್ಟಲಿದೆ.
2010ರಿಂದ ಆದಾಯ ತೆರಿಗೆ ಇಲಾಖೆ ಲೆಕ್ಕ, ಆಲಿ ಖಾನ್ ಮನೆಯಲ್ಲಿ ಸಿಕ್ಕ ದಾಖಲೆಗಳು, ಎಎಂಸಿ, ಒಎಂಸಿ ಬಗ್ಗೆ ಸಿಬಿಐ ಕಲೆ ಹಾಕಿರುವ ಮಾಹಿತಿ ಎಲ್ಲವೂ ಇಡಿ ಕೈಗೆ ಸೇರಿದೆ.
ರೆಡ್ಡಿ ಕಂಪನಿಯ ತಂತ್ರ: ಒಡೆತನದ ಓಎಂಸಿ ಸಂಸ್ಥೆಯಿಂದ ಸುಮಾರು 65,82,341 ಟನ್ ನಷ್ಟು ಅದಿರನ್ನು ಅಕ್ರಮವಾಗಿ ಸಾಗಾಟ ಮಾಡಿದ ಆರೋಪವಿದೆ. ಎಂಸಿಪಿಎಲ್ ವಿದೇಶದಲ್ಲಿ ಬಿಜೆಆರ್ ಇಂಟರ್ ನ್ಯಾಷನಲ್ ಹೋಲ್ಡಿಂಗ್ ಲಿ ಹಾಗೂ ಜಿಎಲ್ ಎ ಟ್ರೇಡಿಂಗ್ ಕಂಪನಿ ಆರಂಭಿಸಿದೆ. ರಫ್ತು ಸುಂಕ ತಪ್ಪಿಸಿಕೊಳ್ಳಲು ಪತ್ನಿ ಹೆಸರಿನ ಕಂಪನಿಗೆ ಬಳ್ಳಾರಿಯಿಂದ ಎಎಂಸಿ ಕಂಪನಿ ಅಡಿಯಲ್ಲಿ ಮಾರಾಟ ಮಾಡಲಾಗಿದೆ.
2007 ರಿಂದ 2009ರವರೆಗೆ 215 ಕೋಟಿ ರಫ್ತು ಸುಂಕ ವಂಚನೆ ಹಾಗೂ ಸಕ್ರಾರಕ್ಕೆ ಓಎಂಸಿಯಿಂದ 5100 ಕೋಟಿ ಮತ್ತು ಎಎಂಸಿ ಯಲ್ಲಿ 480 ಕೋಟಿ ರು ನಷ್ಟ ಉಂಟಾಗಿದೆ ಎಂದು ಕೋರ್ಟಿಗೆ ಸಲ್ಲಿಸಿರುವ ಚಾರ್ಚ್ ಶೀಟ್ ನಲ್ಲಿ ಹೇಳಲಾಗಿದೆ. ಆದರೆ, ಅಸಲಿ ಮೊತ್ತ ಇಡಿ ತನಿಖೆಗೆ ಇಳಿದರೆ ಬಯಲಾಗಲಿದೆ.
ಓಬಳಾಪುರಂ ಪ್ರಕರಣಕ್ಕೆ ಸಂಬಂಧಿಸಿದಂತೆ ಗಾಲಿ ಜನಾರ್ದನ ರೆಡ್ಡಿ ವಿರುದ್ಧ ಡಿ.3ರಂದು ಆಂಧ್ರಪ್ರದೇಶ ಕೋರ್ಟಿಗೆ ಚಾರ್ಚ್ ಶೀಟ್ ಸಲ್ಲಿಸಲಾಗಿತ್ತು. ನಂತರ ಕೆಲ ತಿಂಗಳು ಬಿಟ್ಟು ಇಡಿ ಎಲ್ಲಾ ದಾಖಲೆಗಳನ್ನು ಕೋರ್ಟಿನಿಂದ ಪಡೆದುಕೊಂಡು ತನಿಖೆಗೆ ಅನುಮತಿ ಕೋರಿತ್ತು. ನಂತರ ಬೆಂಗಳೂರಿನ ಸಿಬಿಐ ತಂಡದಿಂದ ಅಸೋಸಿಯೇಟೆಡ್ ಮೈನಿಂಗ್ ಕಂಪನಿ ಬಗ್ಗೆ ಮಾಹಿತಿ ಕಲೆ ಹಾಕಿದ ಇಡಿ ಈಗ ಇಸಿಐಆರ್ ದಾಖಲಿಸಿ ತನಿಖೆ ಕೈಗೊಳ್ಳಲು ಮುಂದಾಗಿದೆ.












Click it and Unblock the Notifications