ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್ ಸೇರಿದ ಥಟ್ ಅಂತ ಹೇಳಿ

ಜನವರಿ 4ರ 2002ರಿಂದ ಇಂದಿನವರೆಗೆ ಒಂದೂ ಬಿಡುವು ತೆಗೆದುಕೊಳ್ಳದಂತೆ ಥಟ್ ಅಂತ ಹೇಳಿ ಕಾರ್ಯಕ್ರಮ ಪ್ರಸಾರವಾಗಿದ್ದಕ್ಕೆ ಈ ಪ್ರಶಸ್ತಿ ಲಭಿಸಿದೆ. ಪ್ರಾರಂಭವಾದಾಗ ವಾರದಲ್ಲಿ ಮೂರು ದಿನ ಬರುತ್ತಿದ್ದ ಕಾರ್ಯಕ್ರಮ ಈಗ ವಾರದಲ್ಲಿ ಐದು ದಿನ ಪ್ರಸಾರವಾಗುತ್ತಿದೆ. ಕಾರ್ಯಕ್ರಮದ ರೂವಾರಿಯಾಗಿರುವ ಡಾ. ನಾ. ಸೋಮೇಶ್ವರ ಮತ್ತು ತಂಡಕ್ಕೆ ಒನ್ಇಂಡಿಯಾ ಕನ್ನಡದ ಅಭಿನಂದನೆಗಳು.
ಜೂನ್ 30, 2011ರವರೆಗೆ 1,756 ಎಪಿಸೋಡುಗಳನ್ನು ಥಟ್ ಅಂತ ಹೇಳಿ ಕಾರ್ಯಕ್ರಮ ಪೂರೈಸಿದೆ ಎಂದು ಲಿಮ್ಕಾ ಬುಕ್ ಆಫ್ ರೆಕಾರ್ಡ್ಸ್‌ನ ಪುಸ್ತಕದ ಸಂಪಾದಕರಾಗಿರುವ ವಿಜಯ ಘೋಷ್ ಅವರು ಪ್ರಮಾಣಪತ್ರದಲ್ಲಿ ತಿಳಿಸಿದ್ದಾರೆ.
ಕನ್ನಡ ನಾಡು, ನುಡಿಯ ಬಗ್ಗೆ ಜ್ಞಾನದಾಹ ಹೆಚ್ಚಿಸುತ್ತಿರುವ ಈ ಕಾರ್ಯಕ್ರಮದಲ್ಲಿ ಯಾರು ಬೇಕಾದರೂ ಭಾಗವಹಿಸಬಹುದು. ಕನ್ನಡ ಪುಸ್ತಕ ಓದುವ ಅಭಿರುಚಿ ಇದ್ದರೆ ಈ ರಸಪ್ರಶ್ನೆಯಲ್ಲಿ ಭಾಗವಹಿಸಿ ಮತ್ತು ನಾನಾ ಲೇಖಕರು ಬರೆದಿರುವ ನಾನಾ ಬಗೆಯ ಕನ್ನಡ ಪುಸ್ತಕಗಳನ್ನು ಬಹುಮಾನವಾಗಿ ಗೆಲ್ಲಿರಿ. ಥಟ್ ಅಂತ ಹೇಳಿ ಕಾರ್ಯಕ್ರಮ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ 10.30ರಿಂದ 11 ಗಂಟೆಯವರೆಗೆ ಪ್ರಸಾರವಾಗುತ್ತದೆ.
ಸದ್ಯ ಎಲ್ಲರ ಕಣ್ಣು ಕೋಟಿ ರು. ಗೆಲ್ಲುವ ಆಮಿಷ ಒಡ್ಡುವ ಸುವರ್ಣ ವಾಹಿನಿಯಲ್ಲಿ ಬರುತ್ತಿರುವ ಕನ್ನಡದ ಕೋಟ್ಯಧಿಪತಿ ಕಾರ್ಯಕ್ರಮದ ಮೇಲೆ ಬಿದ್ದಿದೆ. ಆದರೆ, ಉತ್ತಮ ಕನ್ನಡ ಪುಸ್ತಕಗಳನ್ನು ಓದುವ ಅಭಿರುಚಿ ಬೆಳೆಸುತ್ತಿರುವ ಡಾ. ನಾ. ಸೋಮೇಶ್ವರ್ ಅವರ 'ಥಟ್ ಅಂತ ಹೇಳಿ' ಕಾರ್ಯಕ್ರಮ ಕೋಟಿ ಕೋಟಿ ಕನ್ನಡಿಗರ ಹೃದಯ ಗೆದ್ದಿದೆ. ಡಾ. ನಾ. ಸೋಮೇಶ್ವರ ಅವರಿಗೆ ಥಟ್ ಅಂತ ಒಂದು ಕಂಗ್ರಾಟ್ಸ್ ಹೇಳಿಬಿಡಿ.












Click it and Unblock the Notifications