ಆ ದೇವಸ್ಥಾನದ ಕಳ್ಳತನವ CCTV ದಾಖಲಿಸಿತ್ತು!

ಇಂತಿಪ್ಪ ಆಧುನಿಕ ಲೋಕದಲ್ಲಿ ಹೆಚ್ಚು ಜನ-ಧನ-ಕನಕದಿಂದ ತುಂಬಿತುಳುಕುತ್ತಿರುವ ಪ್ರಮುಖ ದೇವಾಲಯಗಳಲ್ಲಿ CCTV ಎಂಬ ಗ್ಯಾಜೆಟ್ ಇದ್ಬಿಟ್ರೆ ಆ ಬಿಳಿಗಿರಿ ರಂಗನಾಥನ ಆಣೆಗೂ ಕಳ್ಳಕಾಕರರ, ಮನೆಗಳ್ಳರನ್ನು ಸಲೀಸಾಗಿ ಹಿಡೀಬಹುದು. ಅದು ಹೇಗೆ ಅಂತ ಕೇಳ್ತೀರಾ... ಅದಕ್ಕಿಲ್ಲಿದೆ ನಿದರ್ಶನ ನೋಡಿ, ಅಲ್ಲಲ್ಲ ಸದ್ಯಕ್ಕೆ ಓದಿಕೊಳ್ಳಿ.
ಪುಣೆಯ ಕೊತ್ರುಡು ದೇಗುಲದ ಕಳ್ಳತನ ಪತ್ತೆ ಹಚ್ಚಿದ CCTV: ಇಲ್ಲಿನ ಮಾತೋಬಾ ದೇವಸ್ಥಾನದಲ್ಲಿ ಕಾಣಿಕೆ ಪೆಟ್ಟಿಗೆಯಿಂದ ಐನಾತಿ ಕಳ್ಳನೊಬ್ಬ ಒಂದು ಲಕ್ಷ ರುಪಾಯಿ ಕದ್ದಿದ್ದ. ದೇವಸ್ಥಾನದಲ್ಲಿ CCTV ಕಾರ್ಯನಿರ್ವಹಿಸುತ್ತಿತ್ತು. ಆದರೆ ಅದು ಕಳ್ಳನಿಗೆ ಗೊತ್ತಾಗಿರಲಿಲ್ಲ. ಸರಿ, ಪ್ರಕರಣದ ತನಿಖೆಗೆ ಬಂದ ಪೊಲೀಸರು ಕೈಕಟ್ಟಿಕೊಂಡು ಕುಳಿತು, ಕಳ್ಳತನ ನಡೆದ ಶುಕ್ರವಾದಂದು (ಮೇ 4) ದಾಖಲಾಗಿದ್ದ ಇಡೀ CCTV ವಿಡಿಯೋವನ್ನು ವೀಕ್ಷಿಸಿದ್ದಾರೆ.
ಸುನೀಲ್ ವಿಠ್ಠಲ ಭಿಲಾರೆ (30) ಎಂಬ ಖದೀಮನೊಬ್ಬ ಮಧ್ಯಾಹ್ನದ ವೇಳೆ ದೇವಸ್ಥಾನದಲ್ಲಿ ಯಾರೂ ಇಲ್ಲದಾಗ ಸಾವಕಾಶವಾಗಿ ಕಳ್ಳತನ ಮಾಡುತ್ತಿರುವುದು CCTVಯಲ್ಲಿ ದಾಖಲಾಗಿತ್ತು. ಸುತ್ತಿಗೆ ಮತ್ತು ಉಳಿಯಿಂದ ಕೆಲಸ ಆಗೊಲ್ಲ ಅಂತ ಗೊತ್ತಾದಾಗ ವಾಪಸಾದ ಕಳ್ಳ ಚೂಪಾದ, ದೊಡ್ಡ ಆಯುಧ ತಂದು ಕೆಲಸ ಪೂರ್ತಿಗೊಳಿಸುತ್ತಾನೆ. ಅದನ್ನು ಪರಾಂಬರಿಸಿದ ಪೊಲೀಸರು ಸ್ಥಳೀಯ ನಿವಾಸಿ ಸುನೀಲನನ್ನು ಬಂಧಿಸಿದ್ದಾರೆ.












Click it and Unblock the Notifications