ಬೆಂಗಳೂರಿನಲ್ಲಿ ಆಟೋ ದರ ಏರಿಕೆ, 2 ಕಿ.ಮೀ.ಗೆ 20 ರು.

ಎರಡು ಕಿ.ಮೀ. ನಂತರ ಪ್ರತಿ ಕಿ.ಮೀ.ಗೆ 11 ರು. ನೀಡಬೇಕಾಗುತ್ತದೆ. ಈ ಮೊದಲು ಕನಿಷ್ಠ ದರದ ನಂತರ ಪ್ರತಿ ಕಿ.ಮೀ.ಗೆ 9 ರು. ನಿಗದಿಪಡಿಸಲಾಗಿತ್ತು. ಈ ದರಗಳು ಬೆಂಗಳೂರಿನ ವ್ಯಾಪ್ತಿಯಲ್ಲಿ ಮಾತ್ರ ಜಾರಿಗೆ ಬರಲಿವೆ. [ಆಟೋ ಬಿಟ್ಹಾಕಿ ಸೈಕಲ್ ತುಳಿಯಿರಿ]
ಆಟೋ ಗ್ಯಾಸ್ ಸಿಲಿಂಡರ್ ಬೆಲೆಯಲ್ಲಿ ಏರಿಕೆಯಾಗಿದ್ದರಿಂದ ಆಟೋದರವನ್ನು ಏರಿಸಬೇಕೆಂದು ಬೆಂಗಳೂರಿನ ಆಟೋ ಚಾಲಕರ ಸಂಘ ಸರಕಾರದ ಮುಂದೆ ಬೇಡಿಕೆಯನ್ನು ಇಟ್ಟಿತ್ತು. ಕನಿಷ್ಠ ದರವನ್ನು 17 ರು.ನಿಂದ 24 ರು.ಗೆ ಏರಿಸಬೇಕೆಂದು ಆಟೋ ಚಾಲಕರು ಆಗ್ರಹಿಸಿದ್ದರು.
ಈ ನಿಟ್ಟಿನಲ್ಲಿ ಸಾರ್ವಜನಿಕರಿಂದ ಆಟೋ ದರ ಏರಿಸಬೇಕೋ ಬೇಡವೋ ಎಂಬ ಬಗ್ಗೆ ಅಭಿಪ್ರಾಯ ಸಂಗ್ರಹಿಸಿ ನಂತರ ನಿರ್ಧಾರ ತೆಗೆದುಕೊಳ್ಳುವುದಾಗಿ ಬೆಂಗಳೂರಿನ ಜಿಲ್ಲಾಧಿಕಾರಿ ಹೇಳಿದ್ದರು. ಮಾ.7ರವರೆಗೆ ಅಭಿಪ್ರಾಯ ನೀಡಲು ಕಾಲಾವಕಾಶ ಸಾರ್ವಜನಿಕರಿಗೆ ನೀಡಲಾಗಿತ್ತು.
ಆಟೋ ದರ ಯಾವುದೇ ಕಾರಣಕ್ಕೂ ಏರಿಸಬಾರದು, ಆಟೋ ಚಾಲಕರು ಉತ್ತಮ ಸೇವೆ ಸಲ್ಲಿಸುವಂತೆ ಮೊದಲು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕೆಂದು ಸಾರ್ವಜನಿಕರು ಒನ್ಇಂಡಿಯಾ ಕನ್ನಡ ತಾಣದಲ್ಲಿ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಆದರೂ, ಒತ್ತಡ ತಂತ್ರಕ್ಕೆ ಮಣಿದಿರುವ ಸರಕಾರ ಕಡೆಗೂ ದರ ಏರಿಸಿದೆ. ಕಳೆದ ಬಾರಿ ಆಟೋ ದರ ಏರಿಸಿದ್ದು ಆಗಸ್ಟ್ 1, 2010ರಂದು. ಆಗ ಕನಿಷ್ಠ ದರವನ್ನು 14 ರು.ನಿಂದ 17 ರು.ಗೆ ಏರಿಸಲಾಗಿತ್ತು.
ಆಟೋ ದೂರುಗಳು : ಕರೆದಲ್ಲಿ ಬರದಿದ್ದರೆ, ಹೆಚ್ಚಿಗೆ ಹಣ ಕಿತ್ತುಕೊಂಡರೆ, ಕೆಟ್ಟದಾಗಿ ವರ್ತಿಸಿದರೆ, ಅಪರಿಚರನ್ನು ಹತ್ತಿಸಿಕೊಂಡರೆ ಸಾರ್ವಜನಿಕರು ಮಾಡಬೇಕಾಗಿರುವುದು ಇಷ್ಟೇ. ಆಟೋರಿಕ್ಷಾದ ನಂಬರ್ ದಾಖಲಿಸಿಕೊಂಡು, ನೇರವಾಗಿ ಮುಂದೆ ನಮೂದಿಸಿರುವ ನಂಬರಿಗೆ ದೂರು ನೀಡಿರಿ - 080-25588444, 080-25588555.












Click it and Unblock the Notifications