ಸೂಪರ್‌ಮಾರ್ಕೆಟ್ಟುಗಳಲ್ಲಿ ಫುಡ್ ಕೂಪನ್ನಿಗೆ ಮನ್ನಣೆ

ಫುಡ್ ವರ್ಲ್ಡ್, ಸೂಪರ್ ಮಾರ್ಕೆಟ್, ಬಿಗ್ ಮಾರ್ಕೆಟ್, ಹೋಂ, ಮೋರ್, ರಿಲಯನ್ಸ್ ಮುಂತಾದ ಮಾಲ್ ಗಳು ಮತ್ತು ನಿಗದಿತ ಹೋಟೆಲ್ ಗಳಲ್ಲಿ ಈ ಕೂಪನ್ ಬಳಸುವುದು ಸಾಮಾನ್ಯ. ಆಹಾರ ಸಂಬಂಧಪಟ್ಟ ಪದಾರ್ಥಗಳಿಗೆ ಮಾತ್ರ ಇದನ್ನು ಬಳಸಿಕೊಳ್ಳ ಬೇಕು ಎನ್ನುವ ನಿಯಮವಿದ್ದರೂ ಆಹಾರೇತರ ಪದಾರ್ಥಗಳನ್ನೂ ಈ ಕೂಪನ್ ಮೂಲಕ ಖರೀದಿಸುವವರ ಸಂಖ್ಯೆ ಕಮ್ಮಿಯೇನೂ ಇಲ್ಲ.
ವಿಷಯಕ್ಕೆ ಬರುವುದಾದರೆ ಕಳೆದ ಕೆಲ ದಿನ ಅಥವಾ ತಿಂಗಳಿಂದ ಫುಡ್ ಬಜಾರ್ ಅಥವಾ ಮಾಲ್ ಗಳು ಈ ಕೂಪನ್ ತೆಗೆದು ಕೊಳ್ಳುವುದನ್ನು ಏಕಾಏಕಿ ಹಿಂದಕ್ಕೆ ಪಡೆದು ಕೊಂಡಿದ್ದವು. ಇದರಿಂದ ಕೂಪನ್ ಖರೀದಿಸಿರುವ ಬಹಳಷ್ಟು ಮಂದಿ ತೊಂದರೆ ಅನುಭವಿಸುವಂತಾಗಿತ್ತು. ಎಂ. ಕೆ. ಅಹಮದ್ ಮುಂತಾದ ಕೆಲ ರಿಟೈಲ್ ಮಳಿಗೆಗಳು ಮಾತ್ರ ಕೂಪನ್ ತೆಗೆದುಕೊಳ್ಳುವುದನ್ನು ಹಿಂದಕ್ಕೆ ಪಡೆದುಕೊಂಡಿರಲಿಲ್ಲ.
ಫುಡ್ ವರ್ಲ್ಡ್, ಬಿಗ್ ಬಜಾರ್, ರಿಲಯನ್ಸ್ ಮುಂತಾದ ಮಳಿಗೆಗಳ ಜೊತೆಗೆ ಸಣ್ಣಪುಟ್ಟ ದಿನಸಿ ಅಂಗಡಿಗಳು ಕೂಡಾ ಕೂಪನ್ ತೆಗೆದುಕೊಳ್ಳುವುದನ್ನು ವಾಪಸ್ ತೆಗೆದುಕೊಂಡ ಕಾರಣವೇನಂದರೆ ಅಕೋರ್ ಟಿಕೆಟ್ ರೆಸ್ಟೋರೆಂಟ್ ಮತ್ತು ಸೊಡೆಕ್ಸೊ ಪಾಸ್ ನೀಡುವ ಕಂಪನಿಗಳು ಅಂಗಡಿದಾರರಿಗೆ ಸರಿಯಾದ ಸಮಯಕ್ಕೆ ಹಣ ಹಿಂದಿರುಗಿಸದೇ ಇರುವುದು. ಹೀಗಾಗಿ ಸಾಮೂಹಿಕವಾಗಿ ಮಾಲ್ ಗಳು ಕೂಪನ್ ವ್ಯವಹಾರವೇ ಬೇಡವೆಂದು ಬಹಿಷ್ಕರಿಸಿದ್ದವು.
ಆದರೆ ಈ ಸಮಸ್ಯೆಗೆ ಸದ್ಯದಲ್ಲೇ ತೆರೆ ಬೀಳಲಿದೆ. ಅಕೋರ್ ಟಿಕೆಟ್ ರೆಸ್ಟೋರೆಂಟ್ ಮತ್ತು ಸೊಡೆಕ್ಸೊ ಪಾಸ್ ಸಂಸ್ಥೆಗಳು ನಿಗದಿತ ಸಮಯಕ್ಕೆ ಸರಿಯಾಗಿ ಹಣ ಪಾವತಿಸುವುದಾಗಿ ಲಿಖಿತ ಭರವಸೆ ನೀಡಿರುವ ಹಿನ್ನಲೆಯಲ್ಲಿ ಫುಡ್ ಬಜಾರ್, ಮಾಲ್ ಅಥವಾ ಇತರ ದಿನಸಿ ಅಂಗಡಿಗಳು ಮತ್ತೆ ಕೂಪನ್ ತೆಗೆದುಕೊಳ್ಳುವುದನ್ನು ಮುಂದುವರಿಸಲಿದೆ ಎಂದು ರಿಲಯನ್ಸ್ ಫ್ರೆಷ್ ಶಾಖೆಯ ವ್ಯವಸ್ಥಾಪಕರು ಕನ್ನಡ ಒನ್ ಇಂಡಿಯ ವರದಿಗಾರರಿಗೆ ಶುಕ್ರವಾರ ತಿಳಿಸಿದರು.












Click it and Unblock the Notifications