ನಿಮ್ಮ ಮಕ್ಕಳು ಶಾಲೆಗೆ ಹೋಗಿ ಏನು ಮಾಡುತ್ತಾರೆ?

What your kid does in school?
ಬೆಂಗಳೂರು, ನ. 26 : ಅಂಗಿ ಚಡ್ಡಿ ಹಾಕಿ, ಟೈ ಕತ್ತಿಗೆ ಏರಿಸಿ, ಶೂ ಪಾಲಿಶ್ ಮಾಡಿ, ಟೈಮಿಗೆ ಸರಿಯಾಗಿ ತಿಂಡಿಯನ್ನು ಬಾಯಿಗೆ ತುರುಕಿ, ಗೇಟಿನ ಬಳಿ ಬಂದು ಟಾಟಾ ಮಾಡಿ ನಿರಾಳರಾಗುವ ಅಪ್ಪ ಅಮ್ಮಂದಿರಿಗೆ ತನ್ನ ಮಗ ಅಥವಾ ಮಗಳು ಶಾಲೆಗೆ ಹೋಗಿ ಏನು ಮಾಡುತ್ತಾರೆ ಎಂಬ ಅರಿವಿರುತ್ತದೆಯೆ?

ಬೆನ್ನುಬಿದ್ದುಹೋಗುವ ಬ್ಯಾಗನ್ನು ಏರಿಸಿಕೊಂಡು ಹೋಗಿ ಉಸ್ಸಂತ ಸಂಜೆ ಮರಳುವ ಮಕ್ಕಳು ಚೆನ್ನಾಗಿ ಪಾಠ, ನೀತಿಪಾಠ ಕಲಿತು ಬಂದಿರುತ್ತಾರೆ ಎಂದೇ ಅಂದುಕೊಂಡಿರುತ್ತಾರೆ. ಪ್ರಥಮ ಸ್ಥಾನ ಪಡೆಯದಿದ್ದರೆ ಹೋಗಲಿ, ಫೇಲಂತೂ ಆಗಬಾರದು ಮತ್ತು ಉತ್ತಮ ನಡತೆಗಳನ್ನು ಕಲಿತುಕೊಂಡು ಬರಲಿ ಎಂಬ ಉದ್ದೇಶವನ್ನೇ ಹೊಂದಿರುತ್ತಾರೆ.

ತಿಂಗಳಿಗೆ, ಎರಡು ತಿಂಗಳಿಗೊಮ್ಮೆ ಪೇರೆಂಟ್ಸ್ ಮೀಟಿಂಗ್ ಇರುತ್ತದಾದರೂ ಹೋಗಿ ತಮ್ಮ ಮಕ್ಕಳು ಹೇಗೆ ಅಧ್ಯಯನ ನಡೆಸುತ್ತಾರೆ, ಟೆಸ್ಟ್ ಗಳಲ್ಲಿ ಎಷ್ಟು ಅಂಕ ಪಡೆದಿದ್ದಾರೆ, ಹೇಗೆ ವ್ಯವಹರಿಸುತ್ತಾರೆ ಮುಂತಾಗಿ ತಿಳಿದುಕೊಂಡು ಬರುವ ತಂದೆ ತಾಯಂದಿರು ಎಷ್ಟು ಮಂದಿ?

ಮಗು ಒಂದು ಹಂತಕ್ಕೆ ಬರುವವರೆಗೆ ಶಾಲೆಗೆ ಹೋಗಿ ತಿಳಿದುಕೊಂಡು ಬರುವ ಉತ್ಸಾಹ ಮತ್ತು ಆಸಕ್ತಿಯಿರುತ್ತದೆ. ದೊಡ್ಡವರಾದಂತೆ, ರೆಕ್ಕೆಗಳು ಬಲಿತಂತೆ ಹಾರಿಹೋಗಲು ಬಿಟ್ಟುಬಿಡುತ್ತಾರೆ. ಸ್ವತಂತ್ರವಾಗಿ ಹಾರಾಡಿಕೊಂಡಿರಲಿ, ಸ್ವಂತವಾಗಿ ನಿಭಾಯಿಸಿಕೊಳ್ಳುವುದನ್ನು ಕಲಿತುಕೊಳ್ಳಲಿ ಎಂದು ಸ್ವಾತಂತ್ರ್ಯ ನೀಡಿಬಿಡುತ್ತಾರೆ. ಮುಂದೆ?

ಮುಂದೇನು? ಪಾಕೆಟ್ ಮನಿ ಸಿಗುತ್ತದೆ, ಸ್ನೇಹಿತರ ಬಳಗ ದೊಡ್ಡದಾಗಿರುತ್ತದೆ, ಮೋಜು ಮಸ್ತಿ ಮಜಾ, ಆಗಾಗ ಕದ್ದುಮುಚ್ಚಿ ಸಿಗರೇಟು, ಕೈಯಲ್ಲಿ ಮಲ್ಟಿಮೀಡಿಯಾ ಫೆಸಿಲಿಟಿ ಇರುವ ಮೊಬೈಲು, ಎಂಎಂಎಸ್ಸುಗಳು, ಇಂಟರ್ನೆಟ್ ಸರ್ಫಿಂಗ್, ಸಿಡಿ ಡಿವಿಡಿಗಳು. ಹುಚ್ಚು ಹುಡುಗರಿಗೆ ನೂರಾಯೆಂಟು ಅವಕಾಶಗಳು, ಕಲಿಯುವುದಕ್ಕಲ್ಲ ಹಾಳಾಗುವುದಕ್ಕೆ!

ಕರ್ನಾಟಕದ ಶಾಲೆಗಳಲ್ಲಿ ಮೊಬೈಲುಗಳನ್ನು ತರುವುದು ನಿಷೇಧಿಸಲಾಗಿದೆಯಾದರೂ, ಅವರ ಬ್ಯಾಗುಗಳನ್ನು ಎಷ್ಟು ಶಾಲೆಗಳು ಚೆಕ್ ಮಾಡುತ್ತವೆ. ಎಂತೆಂಥ ಮೊಬೈಲುಗಳಿರುತ್ತವೆ? ಮೊಬೈಲಲ್ಲಿ ಎಂತೆಂಥ ಎಂಎಂಎಸ್ಸುಗಳಿರುತ್ತವೆ? ಯಾರಿಂದ ಯಾರ್ಯಾರಿಗೆ ಹರಿದಾಡುತ್ತವೆ? ಪುಸ್ತಗಳ ಮಧ್ಯದಲ್ಲಿ ಎಂತೆಂಥ ಬಣ್ಣದ ಚಿತ್ರಗಳು ಅವಿತುಕೊಂಡಿರುತ್ತವೆ?

ಇದೆಲ್ಲ ಯಾಕೆ ಹೇಳಬೇಕಾಯಿತೆಂದರೆ ಗುಜರಾತ್ ರಾಜ್ಯದ ಅಹ್ಮದಾಬಾದ್ ಶಾಲೆಯೊಂದರಲ್ಲಿ ಅಶ್ಲೀಲ ಸಿಡಿ ಇಟ್ಟುಕೊಂಡಿದ್ದ ವಿದ್ಯಾರ್ಥಿ ಮತ್ತು ಅಶ್ಲೀಲ ಎಂಎಂಎಸ್ ಬಚ್ಚಿಟ್ಟುಕೊಂಡಿದ್ದ ವಿದ್ಯಾರ್ಥಿನಿ ಶಾಲಾಧಿಕಾರಿಗಳ ಕೈಗೆ ಸಿಕ್ಕುಬಿದ್ದಿದ್ದಾರೆ. ವಿದ್ಯಾರ್ಥಿಗೆ ಟಿಸಿ ಕೊಟ್ಟು ಹೊರಹಾಕಲಾಗಿದೆ.

ಇನ್ನೇನು ಹೊಸ ವರ್ಷ ಹತ್ತಿರ ಬರುತ್ತಿದೆ. ಕ್ರಿಸ್ಮಸ್ ರಜೆಗೆ, ಹೊಸ ವರ್ಷ ಮುಂಚಿನ ದಿನ ಮಕ್ಕಳು ಎಲ್ಲಿ ಹೋಗಿ ಏನು ಮಾಡುತ್ತಾರೆ, ಯಾರ ಜೊತೆ ಇರುತ್ತಾರೆ ಯಾರಿಗಾದರೂ ಗೊತ್ತಿರತ್ತಾ? ಇದರರ್ಥ ಗೂಢಚಾರಿಕೆ ಮಾಡಬೇಕಂತಿಲ್ಲ. ಆದರೆ, ಮಕ್ಕಳ ಬಗ್ಗೆ ಹೆತ್ತವರು, ಅದರಲ್ಲೂ ಕೆಲಸಕ್ಕೆ ಹೋಗುವವರು ಒಂದು ಕಣ್ಣಿಡುವುದು ಮೇಲು. ಏನಂತೀರಿ?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+