ದೀಪಾವಳಿ ಕೊಡುಗೆ: ಎಟಿಎಂನಲ್ಲೂ ಚಿನ್ನ ಲಭ್ಯ!

ಮುಂಬೈನಲ್ಲಿ ಚಿನ್ನದ ಮೆಡಾಲಿಯನ್, ನಾಣ್ಯ ಹಾಗೂ ಆಭರಣ ನೀಡುವ ಎಟಿಎಂ ಕ್ಲಿಕ್ ಆದ ಮೇಲೆ ದೇಶದ ವಿವಿಧ ಮಾಲ್, ವಿಮಾನ ನಿಲ್ದಾಣ ಹಾಗೂ ದೇಗುಲಗಳಲ್ಲಿ ಈ ರೀತಿ ಎಟಿಎಂ ಸ್ಥಾಪಿಸಲು ಗೀತಾಂಜಲಿ ಗ್ರೂಪ್ ಚಿಂತಿಸಿದೆ.
ಮುಂದಿನ ಮೂರು ವರ್ಷಗಳಲ್ಲಿ ಸುಮಾರು 75ಕ್ಕೂ ಅಧಿಕ ಚಿನ್ನ ನೀಡುವ ಎಟಿಎಂ ತಲೆ ಎತ್ತಲಿದೆ.
ಚಿನ್ನದ ಎಟಿಎಂ ಸ್ಥಾಪನೆಗೆ ಸುಮಾರು 50 ಕೋಟಿ ರು ಸುರಿದಿರುವ ನಮ್ಮ ಸಂಸ್ಥೆ ಈ ಯೋಜನೆಯಿಂದ ಸುಮಾರು 450-500 ಕೋಟಿ ರು ನಿರೀಕ್ಷೆ ಇಟ್ಟುಕೊಂಡಿದ್ದೇವೆ ಎಂದು ಗೀತಾಂಜಲಿ ಸಂಸ್ಥೆ ಮುಖ್ಯ ನಿರ್ವಾಹಕ ಸಂಜೀವ್ ಅಗರ್ ವಾಲ್ ಹೇಳುತ್ತಾರೆ.
ಗ್ರಾಹಕ ಸ್ನೇಹಿ ಎಟಿಎಂ: ಈ ಯಂತ್ರ ಸಂಪೂರ್ಣ ಗ್ರಾಹಕ ಸ್ನೇಹಿಯಾಗಿದೆ. ಸುಮಾರು 36 ವೈವಿಧ್ಯಮಯ ವಿನ್ಯಾಸ ಹಾಗೂ ಬೆಲೆಯ ಆಭರಣಗಳ ಪಟ್ಟಿ ಸಿಗಲಿದೆ. 1 ಸಾವಿರ ರು ಮುಖಬೆಲೆಯಿಂದ 30,000 ರೂ ಬೆಲೆಯ ತನಕ ಖರೀದಿಗೆ ಅವಕಾಶ ಇರುತ್ತದೆ.
ದೀಪಾವಳಿ ಹಬ್ಬದ ಸಮಯದಲ್ಲಿ ಆಪ್ತರಿಗೆ ಗಿಫ್ಟ್ ನೀಡಲು ಟೈಮ್ ಸಿಗದಿದ್ದರೆ ನಮ್ಮ ಎಟಿಎಂಗೆ ಬಂದು ನಿಮಿಷಗಳಲ್ಲಿ ನಿಮ್ಮ ಖರೀದಿ ಮುಗಿಸಿಕೊಂಡು ಸಂತೋಷದಿಂದ ತೆರಳಬಹುದು. ಗ್ರಾಹಕರ ಅಭಿಪ್ರಾಯಗಳನ್ನು ಸಂಗ್ರಹಿಸಿ ಈ ರೀತಿ ಎಟಿಎಂಗಳನ್ನು ಇನ್ನಷ್ಟು ಹೆಚ್ಚಿಸಲಾಗುವುದು ಎಂದು ಸಂಜೀವ್ ಹೇಳಿದ್ದಾರೆ.
ಅರಬ್ ಸಂಯುಕ್ತ ಗಣರಾಷ್ಟ್ರದ ಅಬುಧಾಬಿಯ ಹೋಟೆಲ್ ಒಂದರಲ್ಲಿ ವಿಶ್ವದ ಮೊದಲ ಚಿನ್ನ ಮಾರಾಟ ಯಂತ್ರವನ್ನು ಸ್ಥಾಪಿಸಲಾಗಿತ್ತು, ಈ ಎಟಿಎಂ ಜನರನ್ನು ಅಪಾರವಾಗಿ ಆಕರ್ಷಿಸುತ್ತಿದೆ.












Click it and Unblock the Notifications