ಸದ್ಯ! ಪೆಸಿಫಿಕ್ ಸಾಗರದಲ್ಲಿ ಬಿತ್ತು ನಿಷ್ಕ್ರಿಯ ನಾಸಾ ಉಪಗ್ರಹ

ಉಪಗ್ರಹ ಭೂಕಕ್ಷೆ ಪ್ರವೇಶಿಸಿದ ನಿಖರ ಸಮಯ ಹಾಗೂ ಬಿದ್ದ ಸ್ಥಳ ಯಾವುದೆಂಬುದರ ಕುರಿತು ಖಚಿತ ಮಾಹಿತಿ ಇನ್ನೂ ಗೊತ್ತಾಗಿಲ್ಲ. 6 ಟನ್ ತೂಕದ ಈ ಉಪಗ್ರಹ ಪಶ್ಚಿಮ ಕೆನಡಾದಲ್ಲಿ ಬಿದ್ದಿದೆ ಎನ್ನಲಾಗಿದೆ.
ಉಪಗ್ರಹ ದೈತ್ಯ ಗಾತ್ರದ್ದಾಗಿದ್ದರೂ ಭೂ ಕಕ್ಷೆ ಪ್ರವೇಶಿಸುವಷ್ಟರಲ್ಲಿ ಸುಟ್ಟು ಕರಕಲಾಗಿ 500 ಕೆಜಿ ಗೆ ಇಳಿದಿರುವ ಸಾಧ್ಯತೆ ಇದೆ. 800 ಕಿಮೀ ವಿಸ್ತಾರದ ಪ್ರದೇಶದಲ್ಲಿ ಚದುರಿದಂತೆ ಬಿದ್ದಿರುವ ಸಂಭವ ಇದೆ. ಭೂಮಿಯ ಶೇ.70ರಷ್ಟು ಭಾಗ ನೀರಿನಿಂದ ಕೂಡಿರುವುದರಿಂದ ಆ ಉಪಗ್ರಹ ಸಮುದ್ರದಲ್ಲಿಯೇ ಬಿದ್ದಿರಬಹುದು ಎಂದು ವಿಜ್ಞಾನಿಗಳು ಅಂದಾಜಿಸಿದ್ದಾರೆ.
ಮೇಲ್ಮೈ ವಾತಾವರಣ ಸಂಶೋಧನಾ ಉಪಗ್ರಹದ (ಯುಎಆರ್ಎಸ್) ಭಗ್ನಾವಶೇಷಗಳು ಮುಂದಿನ ಕೆಲವು ದಿನಗಳಲ್ಲಿ (ಸೆ.23) ಭೂಮಿಗೆ ಬಡಿಯುವ ನಿರೀಕ್ಷೆಯಿದೆ. ಅದು ಯಾವುದಾದರೂ ಸಾಗರ, ಸಮುದ್ರದಲ್ಲಿ ಬೀಳುವ ಸಾಧ್ಯತೆಗಳು ದಟ್ಟವಾಗಿವೆ ಎಂದು ಅಮೆರಿಕದ ನಾಸಾ ವಿಜ್ಞಾನಿಗಳು ಎಚ್ಚರಿಸಿದ್ದರು.
ನಿಷ್ಕ್ರಿಯ ಉಪಗ್ರಹ ಅಮೆರಿಕದ ಆಸ್ತಿಯಂತೆ!:
ಬಾಹ್ಯಾಕಾಶದಿಂದ ಧರೆಗುಳಿದಿರುವ ಯುಎಆರ್‌ಎಸ್ ಉಪಗ್ರಹ ಪ್ರಪಂಚದ ಯಾವುದೇ ಮೂಲೆಯಲ್ಲಿ ಬಿದ್ದಿದ್ದರೂ ಅದು ಅಮೆರಿಕಕ್ಕೇ ಸೇರಿದ್ದಾಗಿರುತ್ತದೆ. 1967ರ ಹೊರ ಬಾಹ್ಯಾಕಾಶ ಒಪ್ಪಂದದ ಪ್ರಕಾರ, ಭೂಮಿಯ ಯಾವುದೇ ಕಡೆ ಬೀಳುವ ತನ್ನ ಉಪಗ್ರಹಗಳಿಗೆ ಅಮೆರಿಕವೇ ವಾರಸುದಾರ. ಸಂಬಂಧಪಟ್ಟ ದೇಶದಿಂದ ಅವಶೇಷಗಳನ್ನು ಅಮೆರಿಕ ವಾಪಸ್ ಪಡೆಯಬಹುದಾಗಿದೆ. ಜತೆಗೆ ಉಪಗ್ರಹದಿಂದ ಯಾವುದೇ ಜೀವ ಅಥವಾ ಆಸ್ತಿ ಪಾಸ್ತಿಗೆ ಹಾನಿಯಾಗಿದ್ದರೆ ಅದಕ್ಕೆ ಅಮೆರಿಕ ಪರಿಹಾರ ನೀಡಬೇಕಾಗುತ್ತದೆ.












Click it and Unblock the Notifications