ಬಾಬ್ರಿ ಮಸೀದಿ ಧ್ವಂಸಕ್ಕೆ ವಿದೇಶಿಯರ ಸುಪಾರಿ :ಸಿಬಿಐ
ನವದೆಹಲಿ, ಸೆ.23 : ಬಾಬ್ರಿ ಮಸೀದಿ ನೆಲಸಮಗೊಳಿಸಲು ಸ್ಥಳೀಯ ಬಲಪಂಥೀಯ ಗುಂಪುಗಳಿಗೆ ವಿದೇಶಿ ಮೂಲದ ಕೆಲವು ಬಲಪಂಥೀಯ ಸಂಘಟನೆಗಳಿಂದ ಆರ್ಥಿಕ ನೆರವು ಸಿಕ್ಕಿತ್ತು ಎಂಬ ಮಹತ್ವದ ವಿಷಯವೊಂದನ್ನು ಸಿಬಿಐ ಹೊರ ಹಾಕಿದೆ.
ಸಿಬಿಐ ತನ್ನ ಸಂಪೂರ್ಣ ವರದಿಯನ್ನು ಸೆಪ್ಟೆಂಬರ್ ತಿಂಗಳ ಕೊನೆಗೆ ಗೃಹ ಸಚಿವಾಲಯಕ್ಕೆ ಸಲ್ಲಿಸಲಿದೆ.
"ಮಸೀದಿ ನೆಲಸಮ ಕಾರ್ಯಾಚರಣೆಗಾಗಿ ಕೆಲವು ವಿದೇಶಿ ಬಲಪಂಥೀಯ (ಹಿಂದೂ ಪರ) ಸಂಘಟನೆಗಳು ಸಾಕಷ್ಟು ಆರ್ಥಿಕ ನೆರವು ನೀಡಿವೆ. ಈ ಹಣವು ಇಲ್ಲಿಗೆ ಹವಾಲದ ಮೂಲಕ ಬಂದು, ನೆಲಸಮ ಕಾರ್ಯಕ್ಕೆ ವಿನಿಯೋಗವಾಗಿದೆ'' ಎಂದು ಸಿಬಿಐ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಒಂದು ಅಂದಾಜಿನ ಪ್ರಕಾರ ಮಸೀದಿ ನೆಲಸಮಕ್ಕಾಗಿ ವಿದೇಶದಿಂದ 120 ರಿಂದ 150 ಕೋಟಿ ರೂಪಾಯಿ ಹರಿದು ಬಂದಿದೆ. ಆದರೆ ಮಸೀದಿ ನೆಲಸಮ ಕಾರ್ಯಾಚರಣೆಗೆ ಇದಕ್ಕಿಂತಲೂ ಅಧಿಕ ಹಣ ವ್ಯಯಿಸಲಾಗಿತ್ತು ಎಂದು ಸಿಬಿಐ ಮೂಲಗಳು ಹೇಳಿವೆ.
ವರದಿಯಲ್ಲಿ ಹಣ ನೀಡಿದ ಮಂದಿ ಮತ್ತು ಸಂಘಟನೆಗಳ ಹೆಸರು ಉಲ್ಲೇಖಗೊಂಡಿವೆ. ಆದರೆ ಇದುವರೆಗೆ ಅವುಗಳನ್ನು ಸಾರ್ವಜನಿಕಗೊಳಿಸಲಾಗಿಲ್ಲ. ಕೆಲವು ಹೆಸರುಗಳು ಇದೇ ಪ್ರಥಮ ಬಾರಿಗೆ ಹೊಸದಾಗಿ ಸೇರ್ಪಡೆಯಾಗಿವೆ.
ಮಸೀದಿ ನೆಲಸಮಕ್ಕಾಗಿ 10 ಮಂದಿ ಆರ್ಥಿಕ ನೆರವು ನೀಡಿದ್ದಾರೆ ಎಂಬುದನ್ನು ಸಿಬಿಐ ತಿಳಿದುಕೊಂಡಿದೆ. ತನಿಖಾ ಏಜೆನ್ಸಿ ಇನ್ನಷ್ಟೇ ಆರೋಪಪಟ್ಟಿ ದಾಖಲಿಸಬೇಕಿದೆ. ಲಿಬರಾಹನ್ ಆಯೋಗದ ವರದಿ(Liberhan Commission report)ಯನ್ನು ಗೃಹ ಸಚಿವಾಲಯವು 2009ರ ನವೆಂಬರಿನಲ್ಲಿ ಸಿಬಿಐಗೆ ಹಸ್ತಾಂತರಿಸಿತ್ತು .
ನಂತರ ಈ ತನಿಖಾ ಏಜೆನ್ಸಿಯೇ ಬಾಬ್ರಿ ಮಸೀದಿ ನೆಲಸಮ ಕಾರ್ಯಾಚರಣೆಯ ತನಿಖೆ ನಡೆಸುತ್ತಿದೆ. ಸಿಬಿಐ ಡಿಐಜಿ ನೀರಜ್ ಗೋತ್ರು ಅವರೊಂದಿಗೆ ಜಾರಿ ನಿರ್ದೇಶನಾಲಯ ಮತ್ತು ಆದಾಯ ತೆರಿಗೆ ಅಧಿಕಾರಿಗಳು ಸೇರಿಕೊಂಡು ನಡೆಸಿದ ತನಿಖೆಯಿಂದ ವಿಚಾರ ಬೆಳಕಿಗೆ ಬಂದಿದೆ.












Click it and Unblock the Notifications