24 ಗಂಟೆಗಳಲ್ಲಿ ಸ್ವಿಸ್ ಖಾತೆಗಳು ಅಮೆರಿಕ ತೆಕ್ಕೆಗೆ

ಅಮೆರಿಕನ್ನರು ಸ್ವಿಸ್ ಬ್ಯಾಂಕುಗಳಲ್ಲಿ ಶೇಖರಿಸುತ್ತಿರುವ ಹಣ ವಿಪರೀತವಾಗಿ ಹೆಚ್ಚಾಗುತ್ತಿದೆ. ತೆರಿಗೆ ಪಾವತಿಸದ ಈ ಕಪ್ಪು ಹಣದಿಂದ ನಮ್ಮ ಬೊಕ್ಕಸ ಬರಿದಾಗುತ್ತಿದೆ ಎಂದು ಬೆಕ್ಕಸ ಬೆರಗಾಗಿರುವ ಅಮೆರಿಕ ಸರಕಾರ ಮಂಗಳವಾರದ ವೇಳೆಗೆ ನಿಮ್ಮ ಬ್ಯಾಂಕುಗಳಲ್ಲಿರುವ ಅಮೆರಿಕನ್ನರ ಖಾತೆಯ ಅಷ್ಟೂ ವಿವರವನ್ನು ಒಪ್ಪಿಸಬೇಕು ಎಂದು ಕಟ್ಟಾಜ್ಞೆ ನೀಡಿದೆ.
ತಕ್ಷಣ ಕಾಳ ಧನ ಖಾತೆಗಳ ವಿವರ ಒಪ್ಪಿಸದಿದ್ದರೆ ಕ್ರೆಡಿಟ್ ಸ್ಯೂಸ್ಸೆ ಮತ್ತು ಇತರೆ 9 ಬ್ಯಾಂಕುಗಳ ವಿರುದ್ಧ ಕ್ರಮ ಜರುಗಿಸುವುದು ಅನಿವಾರ್ಯವಾಗಲಿದೆ ಎಂದು ಯು ಎಸ್ ಡೆಪ್ಯುಟಿ ಅಟಾರ್ನಿ ಜನರಲ್ ಜೇಮ್ಸ್ ಕೋಲ್ ಪತ್ರ ಬರೆದು ಎಚ್ಚರಿಸಿದ್ದಾರೆ. ಅಂದಹಾಗೆ, ಸ್ವಿಸ್ ಬ್ಯಾಂಕುಗಳಲ್ಲಿ 2 ಟ್ರಲಿಯನ್ ಡಾಲರ್ ವಿದೇಶಿ ಹಣ ಜಮೆಯಾಗಿದೆ.
ಇದರಿಂದ ಸ್ವಿಸ್ ಬ್ಯಾಂಕುಗಳಿಗೆ ಉಂಟಾಗುವ ಲಾಭ ನಷ್ಟಗಳನ್ನು ತುಂಬಿಕೊಡಲು ಅಮೆರಿಕ ಸಿದ್ಧವಾಗಿದೆ ಎಂದೂ ಅವರು ಪತ್ರದಲ್ಲಿ ಭರವಸೆ ನೀಡಿದ್ದಾರೆ. ಸ್ವಿಸ್ ಬ್ಯಾಂಕ್ ಖಾತೆಗಳ ಪರಮ ಗೌಪ್ಯತೆ ಹೊರತಾಗಿಯೂ ಸ್ವಿಸ್ ಮತ್ತು ಅಮೆರಿಕ ಮಧ್ಯೆ ದ್ವಿರಾಷ್ಟ್ರ ತೆರಿಗೆ ಒಪ್ಪಂದ ಅಳವಡಿಸಿಕೊಳ್ಳಲು ಉತ್ಸುಕವಾಗಿವೆ.
ಕುತೂಹಲಕಾರಿ ಸಂಗತಿಯೆಂದರೆ ಕಳೆದ ವರ್ಷ ಯುಬಿಎಸ್ ಬ್ಯಾಂಕ್ ಅಮೆರಿಕದ ಇಂತಹ ಒತ್ತಡಕ್ಕೆ ಮಣಿದು 4,450 ಗ್ರಾಹಕರ ಬ್ಯಾಂಕ್ ಖಾತೆ ವಿವರಗಳನ್ನು ಬಹಿರಂಗಪಡಿಸಿತ್ತು.












Click it and Unblock the Notifications