ಕಾಲೇಜು ಹುಡುಗರು ಕ್ಲಾಸಿಗೆ ಚಕ್ಕರ್, ಚಳವಳಿಗೆ ಹಾಜರ್

ಭ್ರಷ್ಟಾಚಾರದ ಚಳವಳಿ ದೇಶದಾದ್ಯಂತ ತೀವ್ರತೆ ಪಡೆದುಕೊಳ್ಳುತ್ತಿದ್ದು, ಬೆಂಗಳೂರಿನಲ್ಲಿಯೂ ಕಾಲೇಜು ವಿದ್ಯಾರ್ಥಿಗಳೆಲ್ಲ ಕ್ಲಾಸುಗಳಿಗೆ ಚಕ್ಕರ್ ಹಾಕಿ ನಿರಶನದ ತಾಣವಾಗಿರುವ ಫ್ರೀಡಂ ಪಾರ್ಕಿನತ್ತ ಹೆಜ್ಜೆ ಹಾಕುತ್ತಿದ್ದಾರೆ. ಕೈಯಲ್ಲಿ ಹಾರಾಡುತ್ತಿರುವ ಭಾರತದ ಬಾವುಟ, ಅಣ್ಣಾಗೆ ಜೈಕಾರ, ರಾಜಕಾರಣಿಗಳಿಗೆ ಧಿಕ್ಕಾರ. [ಅಣ್ಣಾ ಚಳವಳಿ ಫೋಟೋ ಗ್ಯಾಲರಿ]
ನಿರೀಕ್ಷೆಯಂತೆ ಜಯನಗರದ ಸುತ್ತ ಇರುವ ನ್ಯಾಷನಲ್ ಕಾಲೇಜು, ವಿಜಯಾ ಕಾಂಪೋಸಿಟ್ ಕಾಲೇಜು, ಸುರಾನಾ ಕಾಲೇಜು, ಎನ್ಎಮ್ ಕೆಆರ್ ವಿ ಕಾಲೇಜು, ಎಸ್ಎಸ್ಎಸ್ಆರ್ ವಿ ಕಾಲೇಜು, ಜೈನ್ ಕಾಲೇಜು ವಿದ್ಯಾರ್ಥಿ ವಿದ್ಯಾರ್ಥಿನಿಯರೆಲ್ಲ ಮೆರವಣಿಗೆಯಲ್ಲಿ ಫ್ರೀಡಂ ಪಾರ್ಕಿಗೆ ಹೊರಟಿದ್ದಾರೆ. ಜೊತೆಯಲ್ಲಿ ನಾಲ್ಕಾರು ಪೊಲೀಸರು.
ಜಯನಗರ ಮೂರನೇ ಬ್ಲಾಕ್ ನಲ್ಲಿ ಬಾವುಟ ಮಾರುತ್ತಿರುವವನಿಗೆ ಭರ್ಜರಿ ವ್ಯಾಪಾರ. ಮೆರವಣಿಗೆಯಲ್ಲಿ ಸಾಗುತ್ತಿರುವ ಬಿಸಿರಕ್ತದ ಹುಡುಗರಿಂದ ಅಣ್ಣಾ ಹಜಾರೆಗೆ ಜೈಜೈಕಾರ. ಹಲವರು ಹೋರಾಟದಲ್ಲಿ ತಾವೂ ಭಾಗಿಯಾಗಬೇಕೆಂಬ ಹುಮ್ಮಸ್ಸಿದ್ದರೆ, ಹಿಂದುಳಿದ ಕೆಲ ಲಾಸ್ಟ್ ಬೆಂಚ್ ಹುಡುಗರಿಗೆ ಹ್ಯಾಗಿದ್ರು ಇವತ್ತು ಕ್ಲಾಸಿಲ್ಲ ಮನೆಯತ್ತ ಕಾಲು ಹಾಕೋಣವೆಂಬ ಆತುರ.
"ಎಲ್ಲಿದೆ ಕಣೆ ಫ್ರೀಡಂ ಪಾರ್ಕು. ಅಲ್ಲೀ ತನಕ ನಡೀಬೇಕಾ. ಸ್ವಲ್ಪ ಬ್ಯಾಗು ಹಿಡ್ಕೊಳ್ಳೆ, ತುಂಬಾ ಭಾರ" ಎಂಬ ಮಾತು ನಿಧಾನವಾಗಿ ಕಾಲು ಹಾಕುತ್ತಿದ್ದ ಹುಡುಗಿಯರ ಗುಂಪಿನಿಂದ ಕೇಳಿಬಂದಿತು. ಮಳೆ ಬಂದು ಹುಡುಗರ ಹುಮ್ಮಸ್ಸಿಗೆ ತಣ್ಣೀರು ಎರಚದಿದ್ದರೆ ಸಾಕು.












Click it and Unblock the Notifications