ಡಿವಿಎಸ್ ಸಂಪುಟಕ್ಕೆ ಶೆಟ್ಟರ್ ಬಣ ರಾಜೀನಾಮೆ ಬೆದರಿಕೆ

ಗುರುವಾರವೇ ಸಂಪುಟ ವಿಸ್ತರಣೆ ಮಾಡದಿದ್ದರೆ ಸಚಿವರ ಸಾಮೂಹಿಕ ರಾಜೀನಾಮೆಗೂ ಹಿಂಜರಿಯುವುದಿಲ್ಲ ಎನ್ನುವ ಎಚ್ಚರಿಕೆ ಶೆಟ್ಟರ್ ಬಣದಿಂದ ಮುಖ್ಯಮಂತ್ರಿಗೆ ಹೋಗಿದೆ.
'ಎಲ್ಲ ವಿಚಾರಗಳಲ್ಲೂ ಸೋತಿದ್ದೇವೆ. ಉಪ ಮುಖ್ಯಮಂತ್ರಿ ಸ್ಥಾನವನ್ನೂ ಕೊಡುವುದಿಲ್ಲ ಎಂದು ಅಪಮಾನ ಮಾಡಿದಿರಿ. ಅದೇ ರೀತಿ ಮತ್ತೆ ಮಾಡಿದರೆ ಹೇಗೆ? ನಮ್ಮನ್ನೇ ನಂಬಿದ ಶಾಸಕರನ್ನು ಹೇಗೆ ಸಂತೈಸುವುದು' ಎನ್ನುವುದು ಶೆಟ್ಟರ್ ಅವರ ಪ್ರಶ್ನೆ.
ದೆಹಲಿಯಿಂದ ಸಂಜೆ ನಗರಕ್ಕೆ ವಾಪಸಾದ ಮುಖ್ಯಮಂತ್ರಿ ಸದ್ಯಕ್ಕೆ ಸಂಪುಟ ವಿಸ್ತರಣೆ ಬೇಡ ಎನ್ನುವ ಇಂಗಿತವನ್ನು ವ್ಯಕ್ತಪಡಿಸಿದ್ದರು. ಪರೋಕ್ಷವಾಗಿ ಯಡಿಯೂರಪ್ಪ ಅವರೂ ಬೆಂಬಲ ಸೂಚಿಸಿದ್ದು, ವಿಳಂಬ ನೀತಿಯೇ ಇದಕ್ಕೆ ಪರಿಹಾರ ಎಂದು ಸಲಹೆ ನೀಡಿದ್ದಾರೆ ಎನ್ನಲಾಗಿದೆ.
ಸೋಮವಾರ ಸಂಪುಟ ರಚನೆ ಸಂದರ್ಭದಲ್ಲಿ ನಡೆದ ಮಾತುಕತೆ ಪ್ರಕಾರ ಗುರುವಾರ ಸಂಪುಟ ವಿಸ್ತರಣೆ ಆಗಲೇಬೇಕು ಎನ್ನುವುದು ಈಶ್ವರಪ್ಪ ಅವರ ಪಟ್ಟು. ಇದಕ್ಕೆ ಅಶೋಕ, ಬಾಲಚಂದ್ರ ಜಾರಕಿಹೊಳಿ, ಗೋವಿಂದ ಕಾರಜೋಳ, ಸಿ.ಟಿ.ರವಿ ಸೇರಿದಂತೆ ಇತರ ಪ್ರಮುಖರು ದನಿಗೂಡಿಸಿದ್ದಾರೆ.












Click it and Unblock the Notifications