ಸಂಪುಟ ಪೀಕಲಾಟ: ಡಿವಿಎಸ್ ಮತ್ತೆ ದೆಹಲಿಯತ್ತ ದೌಡು

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಕೆ.ಎಸ್.ಈಶ್ವರಪ್ಪ, ಪಕ್ಷದ ರಾಷ್ಟ್ರೀಯ ಜಂಟಿ ಸಂಘಟನಾ ಕಾರ್ಯದರ್ಶಿ ಸತೀಶ್ ಅವರೊಂದಿಗೆ ಬುಧವಾರ ತಡರಾತ್ರಿವರೆಗೆ ಸದಾನಂದಗೌಡ ಅವರು ನಡೆಸಿದ ಚರ್ಚೆ ಫಲಪ್ರದವಾಗಲಿಲ್ಲ. ಶೆಟ್ಟರ್ ಬಣ ರಾಜೀನಾಮೆ ಬೆದರಿಕೆಯೂ ಹಾಕಿದೆ.
ಈ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ವಿಷಯ ವರಿಷ್ಠರ ಮುಂದೆಯೇ ತೀರ್ಮಾನವಾಗಲಿ ಎಂಬ ಕಾರಣಕ್ಕಾಗಿ ಗುರುವಾರ ಬೆಳಗ್ಗೆ ದೆಹಲಿಗೆ ಹೊರಟು ಬಂದಿದ್ದಾರೆ.
ಅಲ್ಲಿ ವರಿಷ್ಠರ ಜತೆ ಚರ್ಚೆ ನಡೆಸಿ ಮಧ್ಯಾಹ್ನದ ವೇಳೆಗೆ ಬೆಂಗಳೂರಿಗೆ ಹಿಂದಿರುಗಲಿದ್ದಾರೆ (ಬಳ್ಳಾರಿಯಲ್ಲಿ ರೆಡ್ಡಿ ಸೋದರರು ಆಯೋಜಿಸಿರುವ ಸಾಮೂಹಿಕ ವಿವಾಹ ಕಾರ್ಕ್ರಮದಲ್ಲಿ ಪಾಲ್ಗೊಳ್ಳಲು). ವರಿಷ್ಠರು ಸಂಪುಟ ವಿಸ್ತರಣೆಗೆ ಅನುಮತಿ ನೀಡಿದರೆ ಗುರುವಾರ ಸಂಜೆಯೇ ಸಂಪುಟ ವಿಸ್ತರಣೆಯಾಗಲಿದೆ. ಇಲ್ಲದಿದ್ದರೆ ಎರಡು ಮೂರು ದಿನ ಮುಂದಕ್ಕೆ ಹೋಗುವ ಸಾಧ್ಯತೆ ಇದೆ.
ಸಂಪುಟ ವಿಸ್ತರಣೆಗೆ ಅಡ್ಡಿಯಾಗಿರುವುದು ರೆಡ್ಡಿ ಸಹೋದರರ ಒತ್ತಡ ತಂತ್ರ ಎನ್ನಲಾಗಿದೆ. ಅವರು ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕೆಂದು ಒತ್ತಡ ಹಾಕಿದ್ದು, ಈ ಹಿನ್ನೆಲೆಯಲ್ಲಿ ಡಿವಿಎಸ್ ದೆಹಲಿಗೆ ದೌಡಾಯಿಸಿದ್ದಾರೆ.
'ಅಕ್ರಮ ಗಣಿಗಾರಿಕೆಗೆ ಸಂಬಂಧಿಸಿದ ಲೋಕಾಯುಕ್ತ ವರದಿಯಲ್ಲಿ ತಮ್ಮ ವಿರುದ್ಧ ಸುಳ್ಳು ಆರೋಪಗಳನ್ನು ಮಾಡಲಾಗಿದೆ. ಆದ್ದರಿಂದ ಆ ವರದಿಯನ್ನೇ ಆಧರಿಸಿ ತಮ್ಮನ್ನು ಸಂಪುಟಕ್ಕೆ ಸೇರಿಸಿಕೊಳ್ಳದಿರುವ ತೀರ್ಮಾನ ಕೈಗೊಳ್ಳಬಾರದು' ಎಂದು ರೆಡ್ಡಿ ಸಹೋದರರು ಒತ್ತಡ ಹೇರಿದ್ದಾರೆ. ಆದ ಕಾರಣ ಪಕ್ಷದ ವರಿಷ್ಠರು ದೆಹಲಿಗೆ ಬರುವಂತೆ ಸೂಚನೆ ನೀಡಿದ್ದಾರೆ ಎಂದು ಡಿವಿಎಸ್ ಹೇಳಿದ್ದಾರೆ.












Click it and Unblock the Notifications