ಅರಮನೆ ಮೈದಾನದಲ್ಲಿ ಹೊಟೇಲ್ ತಂತ್ರ ಪ್ರದರ್ಶನ

ಅಡುಗೆ ಮನೆಗೆ ಸೀಮಿತವಾಗಿದ್ದ ಆಹಾರದ ರುಚಿ, ಈಗ ಹೊಟೇಲ್ ಉದ್ಯಮವನ್ನೂ ಮೀರಿ ಜಾಗತಿಕ ಮಟ್ಟವನ್ನು ವ್ಯಾಪಿಸಿಕೊಳ್ಳುತ್ತಿದೆ ಎಂಬುದಕ್ಕೆ ಈ ಪ್ರದರ್ಶನ ಪ್ರತ್ಯಕ್ಷ ಸಾಕ್ಷಿಯಾಗಿದೆ. ಇದೇ ವೇಳೆ, ಜಾಗತಿಕ ಮಟ್ಟದ ಆಹಾರ ವೈವಿಧ್ಯತೆಯೊಂದಿಗೆ ಹೊಟೇಲ್ ತಂತ್ರಜ್ಞಾನದ ವಿಶಿಷ್ಟತೆಯನ್ನೂ ಪರಿಚಯಿಸಲಿದೆ. ಪ್ರವಾಸೋದ್ಯಮ ಇಲಾಖೆ ನಿರ್ದೇಶಕ ವಿಶ್ವನಾಥ ರೆಡ್ಡಿ ಮತ್ತು ಪ್ರಧಾನ ಕಾರ್ಯದರ್ಶಿ ಮುನಿಸ್ವಾಮಿ ಈ ವಿಶೇಷ ಪ್ರದರ್ಶನಕ್ಕೆ ಚಾಲನೆ ನೀಡಿದರು.
ಇಡ್ಲಿಯಿಂದ ಆರಂಭಗೊಂಡು ಪಿಸ್ತಾವರೆಗೆ, ಬಟೂರಾದಿಂದ ಹಿಡಿದು ಸುಶಿ ವರೆಗೆ, ದಮ್ ಬಿರಿಯಾನಿಯಿಂದ ತಿರಾಮಿಸು ಎಂಬ ಅಚ್ಚರಿಯವರೆಗೆ ಅಡುಗೆ ಮನೆಯ ರುಚಿ ವಿಸ್ತರಿಸಲ್ಪಡುತ್ತಿದ್ದು, ಇದೆಲ್ಲದಕ್ಕೂ ಈ ಪ್ರದರ್ಶನ ಸೂಕ್ತ ವೇದಿಕೆ ಕಲ್ಪಿಸಿದೆ. ಅಡುಗೆ ಮನೆ, ಬೇಕರಿ, ಆಹಾರ ಸೇವಾ ಉಪಕರಣ, ಪಾನೀಯ, ಹೊಟೇಲ್ ವಿನ್ಯಾಸ, ಗೃಹ ನಿರ್ವಹಣೆಯ ಬಗ್ಗೆ ವಿಶೇಷ ಪೆವಿಲಿಯನ್‌ಗಳಿವೆ.
ಪ್ರದರ್ಶನದಲ್ಲಿ ಬೇಕರಿ ಉತ್ಪನ್ನ ತಯಾರಿಕಾ ಯಂತ್ರೋಪಕರಣಗಳು, ಹೊಟೇಲ್ ಉದ್ಯಮದ ತಂತ್ರಜ್ಞಾನ, ಪ್ರವಾಸೋದ್ಯಮ ಆತಿಥ್ಯ ಪೂರೈಕೆಗಾಗಿ ಹಲವು ವಿಶೇಷತೆಗಳನ್ನು ಕಾಣಬಹುದಾಗಿದೆ. ಉದ್ಯಮವನ್ನು ಮತ್ತಷ್ಟು ಆರೋಗ್ಯಕರವಾಗಿ ಸುಧಾರಿಸುವ ನಿಟ್ಟಿನಲ್ಲಿ ಉದ್ದಿಮೆಗಳ ತಜ್ಞರು ಈ ಸಂದರ್ಭದಲ್ಲಿ ಸಮಾವೇಶ ನಡೆಸಲಿದ್ದಾರೆ.
ಭಾರತ ಹಾಗೂ ವಿದೇಶಗಳ ಸುಮಾರು 200ಕ್ಕೂ ಹೆಚ್ಚು ಕಂಪನಿಗಳನ್ನು ಆಕರ್ಷಿಸುವ ಪ್ರಯತ್ನ ಈ ಪ್ರದರ್ಶನದಿಂದ ಆಗಲಿದ್ದು, ದಕ್ಷಿಣ ಭಾರತದ ಸುಮಾರು 8,000 ವ್ಯಾಪಾರಿಗಳನ್ನು ಸೆಳೆಯಲಿದೆ. ಪ್ರದರ್ಶನದ ಮತ್ತೂಂದು ವಿಶೇಷತೆಯಾಗಿ ಫೆಡರೇಷನ್ ಆಫ್ ಕ್ಯುಲಿನರಿ ಅಸೋಸಿಯೇಷನ್ ಆಯೋಜಿಸಿರುವ 'ದಿ ಚೆಫ್ ಲಾಂಜ್' ಸಹ ಇದೆ.
ಪುಟಾಣಿ ಗೇಮ್ ಥಿಯೇಟರ್: ಮಕ್ಕಳಿಗೆ ಮುದನೀಡಬಲ್ಲ 3ಡಿ ಗೇಮಿಂಗ್ ಥಿಯೇಟರ್ ಪ್ರದರ್ಶನದ ಪ್ರಮುಖ ಆಕರ್ಷಣೆಯಾಗಿದೆ. ಇಬ್ಬರು ಕುಳಿತುಕೊಳ್ಳಬಹುದಾದ ಈ ಪುಟಾಣಿ ಥಿಯೇಟರ್‌ನಲ್ಲಿ ವಿಡಿಯೊ ಗೇಮ್ ಆಡುತ್ತಾ 3ಡಿಯ ಖುಷಿ ಅನುಭವಿಸಬಹುದು.











Click it and Unblock the Notifications