ಪುರುಷ ಪ್ರಾಬಲ್ಯದ ವಿರುದ್ಧ ಸಿಡಿದೆದ್ದ ಸೌದಿ ಓಬವ್ವ

ಸೌದಿ ಅರೇಬಿಯಾದಲ್ಲಿ ಮಹಿಳೆಯರು ಕಾರು ಚಲಾಯಿಸುವ ಹಕ್ಕನ್ನು ಸರಕಾರ ಕಿತ್ತುಕೊಂಡಿದೆ. ಮಹಿಳೆಯರಿಗೆ ಮತ ಚಲಾಯಿಸುವ ಹಕ್ಕೂ ಇಲ್ಲ. ಜೊತೆಗೆ ಪಯಣಿಸಬೇಕಾದರೆ, ಕೆಲಸಕ್ಕೆ ಸೇರಿಕೊಳ್ಳಬೇಕಾದರೂ ಪುರುಷರ ಅನುಮತಿ ಪಡೆಯುವಂಥ ದಯನೀಯ ಸ್ಥಿತಿಯಿದೆ. ಈಗ ಮಹಿಳೆಯರು 'Women2Drive' ಎಂಬ ಅಭಿಯಾನದ ಮುಖಾಂತರ ಸರಕಾರದ ವಿರುದ್ಧವೇ ತಿರುಗಿಬಿದ್ದಿದ್ದಾರೆ.
ಇಂದು ಕೆಲ ಮಹಿಳೆಯರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಊರ ತುಂಬ ಕಾರು ಓಡಿಸಿ ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು. ಇಂಥ ಪ್ರತಿಭಟನೆಯನ್ನು ಸರಕಾರ ನಿರೀಕ್ಷಿಸಿರಲಿಲ್ಲ. ಮಹಿಳೆಯರ ಹಕ್ಕು ವಾಪಸ್ ನೀಡಿದರೆ ಮುಸ್ಲಿಂ ಧರ್ಮಾಧಿಕಾರಿಗಳ ಆಕ್ರೋಶ ಎದುರಿಸಬೇಕಾಗುತ್ತದೆ ಮತ್ತು ಮತ ಚಲಾಯಿಸುವ ಹಕ್ಕುಗಳನ್ನೂ ದಯಪಾಲಿಸಬೇಕಾದ ಸಂದಿಗ್ಧತೆಗೆ ಸರಕಾರ ಸಿಲುಕಿದೆ.
"ನಾವು ಇಟ್ಟ ಹೆಜ್ಜೆಯನ್ನು ಹಿಂದಿಡುವುದಿಲ್ಲ. ನಮ್ಮಿಂದ ಕಿತ್ತುಕೊಳ್ಳಲಾಗಿರುವ ಎಲ್ಲಾ ಹಕ್ಕುಗಳನ್ನು ಇಂದಿನಿಂದಲೇ ಚಲಾಯಿಸುತ್ತೇವೆ. ನಿಷೇಧ ಹಿಂತೆಗೆಯುವವರೆಗೆ ನಮ್ಮ ಪ್ರತಿಭಟನೆ ನಿಲ್ಲುವುದಿಲ್ಲ. ನಾವು ಜಾಸ್ತಿ ಜನ ಇಲ್ಲದಿದ್ದರೂ ಮಳೆ ಪ್ರಾರಂಭವಾಗುವುದು ಒಂದು ಹನಿಯಿಂದಲೇ ಎಂಬುದು ತಿಳಿದಿರಲಿ" ಎಂದು ಪ್ರತಿಭಟನಾಕಾರರೊಬ್ಬರು ಆಕ್ರೋಶದಿಂದ ಹೇಳಿದ್ದಾರೆ.
ಪ್ರತಿಭಟನೆ, ದುಬೈ, ರಿಯಾದ್, ದಮ್ಮಮ್ ಮುಂತಾದೆಡೆಗಳಲ್ಲಿ ನಡೆಯುತ್ತಿದೆ. ಮಹಿಳೆಯರು ತಮ್ಮ ಗಂಡಂದಿರನ್ನು ಪಕ್ಕದಲ್ಲಿ ಕುಳ್ಳಿರಿಸಿಕೊಂಡೇ ಪ್ರತಿಭಟನೆಗೆ ಇಳಿದಿದ್ದಾರೆ. ಮೂಕಪ್ರೇಕ್ಷಕರಾಗಿ ನೋಡುತ್ತಿರುವ ಪೊಲೀಸರು ಸೌದಿ 'ಓಬವ್ವ'ರನ್ನು ಬಂಧಿಸಲು ಮುಂದಾಗಿಲ್ಲ. ಆದರೆ, ಕೆಲ ದಿನಗಳ ಹಿಂದೆ ಡ್ರೈವಿಂಗ್ ಹಕ್ಕು ಕೇಳಿದ ಮಹಿಳೆಯೊಬ್ಬಳನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳಿಸಿದ್ದರು.












Click it and Unblock the Notifications