ಬಾಬಾ ರಾಮದೇವ್ 1,100 ಕೋಟಿ ರು. ಕುಬೇರ!

ಪೂರ್ವ ನಿರ್ಧಾರದಂತೆ ಗುರುವಾರ ಸಂಜೆ ತಮ್ಮ ಆಸ್ತಿಪಾಸ್ತಿಯ ಎಲ್ಲ ವಿವರವನ್ನು ಮಾಧ್ಯಮಗಳಿಗೆ ಬಿಡುಗಡೆ ಮಾಡಿರುವ ರಾಮದೇವ್ ಅವರ ನಿಕಟವರ್ತಿ ಬಾಲಕೃಷ್ಣ, ಈ ಘೋಷಿತ ಆಸ್ತಿಯು ಸಕ್ರಮವಾಗಿದೆ ಎಂದು ತಿಳಿಸಿದ್ದಾರೆ. ಕಾಂಗ್ರೆಸ್ ನಾಯಕರಾದ ದಿಗ್ವಿಜಯ ಸಿಂಗ್ ಮತ್ತಿತರರು ಬಾಬಾ ಸಂಪತ್ತುಗಳ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಬಳಿಕ ಬಾಬಾ ಸೊತ್ತು ವಿವರ ಘೋಷಿಸುವುದಾಗಿ ಹೇಳಿದ್ದರು.
ರಾಮದೇವ್ ಅವರು ನಡೆಸುತ್ತಿರುವ ನಾಲ್ಕು ಟ್ರಸ್ಟ್‌ಗಳ ಒಟ್ಟು ಆಸ್ತಿಯ ಮೊತ್ತ 426.19 ಕೋಟಿ ರುಪಾಯಿ. ಇವುಗಳ ಖರ್ಚು ವೆಚ್ಚದ ಮೊತ್ತ 751.02 ಕೋಟಿ ರುಪಾಯಿ ಎಂದು ತಿಳಿಸಿದ್ದಾರೆ.
ಆದರೆ ಬಾಲಕೃಷ್ಣನ್, ರಾಮದೇವ್ ಅವರ ಸುಪರ್ದಿಯಲ್ಲಿನ ಕಂಪೆನಿಗಳ ಬಗ್ಗೆ ಸಂಪೂರ್ಣ ವಿವರ ನೀಡಲಿಲ್ಲ. ಸರ್ಕಾರದ ನಿಯಮಗಳ ಅನುಸಾರ ನಾವು ತೆರಿಗೆ ಕಟ್ಟುತ್ತಿದ್ದೇವೆ. ಈ ಸಂಗತಿಗಳನ್ನು ಕಂಪನಿಗಳ ರಿಜಿಸ್ಟ್ರಾರ್ ಅವರಲ್ಲಿ ಮಾಹಿತಿ ಕಾಯ್ದೆ ಹಕ್ಕು ಅಡಿ ಪಡೆಯಬಹುದಾಗಿದೆ. ವೆಬ್‌ಸೈಟಿನಲ್ಲಿಯೂ ಮಾಹಿತಿ ದೊರೆಯುತ್ತದೆ' ಎಂದು ಅವರು ಸಮಜಾಯಿಷಿ ನೀಡಿದರು.
ನಾವು ನಮ್ಮ ಆರ್ಥಿಕ ವ್ಯವಹಾರಗಳಲ್ಲಿ ಪಾರದರ್ಶಕತೆ ಇರಬೇಕೆಂದು ಬಯಸುತ್ತೇವೆ. ನಮ್ಮ ಅಧೀನದಲ್ಲಿರುವ ಎಲ್ಲ ಸಂಸ್ಥೆಗಳು ಮತ್ತು ಕಂಪನಿಗಳು ಸರಿಯಾದ ಲೆಕ್ಕಪತ್ರ ಹೊಂದಿವೆ. ಪ್ರತಿ ಎರಡು ವರ್ಷಗಳಿಗೊಮ್ಮೆ ನಮ್ಮ ಟ್ರಸ್ಟ್‌ಗಳ ಲೆಕ್ಕಪತ್ರ ಪರಿಶೀಲನೆ ಆದ ನಂತರ ಸರ್ಕಾರ ನಮ್ಮ ಟ್ರಸ್ಟ್‌ಗಳನ್ನು ನವೀಕರಿಸುತ್ತದೆ. ಏನು ಬಂತು, ಏನು ಹೋಯಿತು, ಯಾರು ಏನು ಕೊಟ್ಟರು, ಏನೆಲ್ಲಾ ಖರ್ಚು ಮಾಡಿದೆವು... ಎಂಬುದನ್ನೆಲ್ಲಾ ಸೂಕ್ತ ದಾಖಲೆಗಳೊದಿಗೆ ಪಾಲಿಸುತ್ತಿದ್ದೇವೆ' ಎಂದು ಬಾಲಕೃಷ್ಣನ್ ಹೇಳಿದರು.
ದಿವ್ಯ ಯೋಗ ಮಂದಿರ ಟ್ರಸ್ಟ್ 249.63 ಕೋಟಿ ರುಪಾಯಿ ಬಂಡವಾಳ ಹೊಂದಿದೆ. ಪತಂಜಲಿ ಯೋಗ ಪೀಠ ಟ್ರಸ್ಟ್ 164.80 ಕೋಟಿ ರು. ಆಸ್ತಿ ಹೊಂದಿದೆ. ಭಾರತ್ ಸ್ವಾಭಿಮಾನ ಟ್ರಸ್ಟ್ 9.97 ಕೋಟಿ ರು. ಮತ್ತು ಆಚಾರ್ಯ ಕುಲ ಶಿಕ್ಷಾ ಸಂಸ್ಥಾನವು 1.79 ಕೋಟಿ ರು. ಆಸ್ತಿಯನ್ನು ಹೊಂದಿವೆ ಎಂದು ವಿವರಿಸಿದರು.












Click it and Unblock the Notifications