ಯುಪಿಎದಿಂದ 85 ಸಾವಿರ ಕೋಟಿ ರು. ಕಲ್ಲಿದ್ದಲು ಹಗರಣ?

ಹಿಂದಿನ ಯುಪಿಎ ಸರಕಾರದ ಅವಧಿಯಲ್ಲಿ ಕಲ್ಲಿದ್ದಲು ಸಚಿವರಾಗಿದ್ದ ಶಿಬು ಸೋರೆನ್ ರಾಜೀನಾಮೆ ನೀಡಿದ ಬಳಿಕ ಆ ಖಾತೆ ಪ್ರಧಾನಿ ಸುಪರ್ದಿಯಲ್ಲಿತ್ತು. ಮೆಟ್ರಿಕ್ ಟನ್ ವೊಂದಕ್ಕೆ ಸುಮಾರು 50 ರೂಪಾಯಿಯಷ್ಟು ಕಡಿಮೆ ಬೆಲೆಗೆ ಕಲ್ಲಿದ್ದಲು ವಿತರಿಸಲಾಗಿದ್ದು ನಾಲ್ಕು ವರ್ಷಗಳಲ್ಲಿ ಹೆಚ್ಚು ಕಮ್ಮಿ 85 ಸಾವಿರ ಕೋಟಿ ರುಪಾಯಿಗಳಷ್ಟು ಅವ್ಯವಹಾರ ನಡೆದಿದೆಯೆಂದು ಬಿಜೆಪಿ ಸಂಸದ ಹಂಸರಾಜ್ ಆರೋಪಿಸಿದ್ದಾರೆ.
ಯುಪಿಎ ಸರಕಾರ 2008ರಲ್ಲಿ ಗಣಿ ತಿದ್ದುಪಡಿ ಮಸೂದೆಯನ್ನು ಮಂಡಿಸಿತು. ಮಸೂದೆ ಪ್ರಕಾರ ಮೊದಲ ಆದ್ಯತೆಯ ಮೂಲಕ ಕಲ್ಲಿದ್ದಲು ಗಣಿಗಾರಿಗೆ ಹರಾಜು ಪ್ರಕ್ರಿಯೆಗೆ ಅವಕಾಶ ನೀಡಲಾಯಿತು. 2010ರಲ್ಲಿ ಸಂಸತ್ ಈ ಮಸೂದೆಗೆ ಅಂಗೀಕಾರ ನೀಡಿತ್ತು. ಆದರೆ ಯುಪಿಎ ಸರಕಾರ ಮಸೂದೆ ಅಂಗೀಕಾರ ಪಡೆಯುವವರೆಗೆ ಮುಕ್ತ ವಿತರಣೆಯನ್ನು ನಿಲ್ಲಿಸದೆ ಬೇಕಾಬಿಟ್ಟಿಯಾಗಿ ಗಣಿಯ ಗುತ್ತಿಗೆ ನೀಡಿತ್ತು ಎಂದು ಬಿಜೆಪಿ ಆರೋಪಿಸಿದೆ.
2006ರಿಂದ ಆರಂಭವಾಗಿ ನಾಲ್ಕು ವರ್ಷಗಳಲ್ಲಿ 51 ಲಕ್ಷ ಕೋಟಿ ಮೌಲ್ಯದ 17 ಶತಕೋಟಿ ಮೆಟ್ರಿಕ್ ಟನ್ ಕಲ್ಲಿದ್ದಲು ಹೊಂದಿರುವ 73 ಬ್ಲಾಕ್ ಗಳನ್ನೂ 143 ಖಾಸಗಿ ಕಂಪನಿಗಳಿಗೆ ಗುತ್ತಿಗೆ ನೀಡಿತ್ತು. ಹಾಗಾಗಿ 2006ರಲ್ಲಿ 51, 2007ರಲ್ಲಿ 19, 2008ರಲ್ಲಿ 41 ಮತ್ತು 2009ರಲ್ಲಿ 32 ಕಂಪನಿಗಳು ಗಣಿ ಗುತ್ತಿಗೆ ಪಡೆದಿದ್ದವು ಎಂದು ಹಂಸರಾಜ್ ಆರೋಪಿಸಿದ್ದಾರೆ.












Click it and Unblock the Notifications