ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಧಿವೇಶನಕ್ಕೆ ಅನುಮತಿ ನೀಡಿ, ಎರಡು ದಿನ ಕಾಯಿರಿ

By Prasad
|
Google Oneindia Kannada News

BS Yeddyurappa and Hansraj Bhardwaj
ಬೆಂಗಳೂರು, ಮೇ. 18 : ರಾಜ್ಯದ ಅಭಿವೃದ್ಧಿಗಾಗಿ ಕೃಷಿ ಬಜೆಟ್ ನಲ್ಲಿ ಘೋಷಿಸಲಾಗಿರುವ ಯೋಜನೆಗಳಿಗೆ ಅನುಮೋದನೆ ಸಿಗಬೇಕಾಗಿದ್ದರೆ ಪೂರ್ಣ ಬಜೆಟ್ ಮಂಡಿಸುವುದು ಅಗತ್ಯವಾಗಿದ್ದು, ಜೂನ್ 2ರಿಂದ ಹತ್ತು ದಿನಗಳ ಕಾಲ ಉಭಯ ಸದನಗಳ ವಿಶೇಷ ಜಂಟಿ ಅಧಿವೇಶನ ನಡೆಸಲು ಅನುಮತಿಯನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಗೆ ಕೋರಿರುವುದಾಗಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.

ಲೋಕಸೇವಾ ಆಯೋಗದ ಕಾರ್ಯಕ್ರಮವೊಂದರಲ್ಲಿ ಹಸ್ತಲಾಘವ ಮಾಡಿದ್ದ ಭಾರದ್ವಾಜ್ ಅವರನ್ನು ರಾಜಭವನದಲ್ಲಿ ಇಂದು ಸುರಿಯುತ್ತಿದ್ದ ಮಳೆಯಲ್ಲಿಯೇ 4 ಗಂಟೆಗೆ ಭೇಟಿ ಮಾಡಿದ ಯಡಿಯೂರಪ್ಪ ಅಧಿವೇಶನ ನಡೆಸಲು ಅನುಮತಿ ಕೋರಿದರು. ನಂತರ ಸಂಜೆ 5.30ಕ್ಕೆ ವಿಧಾನಸೌಧದಲ್ಲಿ ಪತ್ರಿಕಾಗೋಷ್ಠಿ ನಡೆಸಿ ತಮ್ಮಿಬ್ಬರ ನಡುವೆ ನಡೆದ ಮಾತುಕತೆಯ ವಿವರ ನೀಡಿದರು. ರಾಜಭವನಕ್ಕೆ ಶೋಭಾ, ಸುರೇಶ್ ಕುಮಾರ್, ಕಾರಜೋಳ, ಅಶೋಕ್, ಬೊಮ್ಮಾಯಿ ಮುಂತಾದವರು ಮುಖ್ಯಮಂತ್ರಿ ಜೊತೆ ಹೋಗಿದ್ದರು.

ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡಿ ಕಳಿಸಿದ ಪತ್ರಕ್ಕೆ ಕೇಂದ್ರದಿಂದ ಉತ್ತರ ಬಂದ ನಂತರ ವಿಶೇಷ ಅಧಿವೇಶನ ನೀಡುವ ಕುರಿತು ಚಿಂತಿಸುವುದಾಗಿ ಭಾರದ್ವಾಜ್ ಹೇಳಿರುವುದಾಗಿ ಯಡಿಯೂರಪ್ಪ ತಿಳಿಸಿದರು. ಇದೇ ಮೇ 16ರಿಂದಲೇ ಜಂಟಿ ಅಧಿವೇಶನ ಆರಂಭವಾಗಬೇಕಿತ್ತು. ಇದಕ್ಕೆ ರಾಜ್ಯಪಾಲರು ಅನುಮತಿ ನೀಡಿರಲಿಲ್ಲ. ಈ ಅಧಿವೇಶನಕ್ಕೂ ರಾಜ್ಯಪಾಲರಿಂದ ಪೂರಕವಾದ ಪ್ರತಿಕ್ರಿಯೆ ಬಂದಿಲ್ಲ. ಇನ್ನೆರಡು ದಿನಗಳಲ್ಲಿ ಕೇಂದ್ರದಿಂದ ಪತ್ರ ಬರಲಿದ್ದು, ನಂತರ ನಿರ್ಧಾರ ತಿಳಿಸುವುದಾಗಿ ಹೇಳಿದ್ದಾರೆ.

ಯುದ್ಧ ವಿರಾಮ? : ಪ್ರಸ್ತುತ ರಾಜಕೀಯ ಬೆಳವಣಿಗೆಗಳನ್ನು ಗಮನಿಸಿದರೆ, ರಾಜ್ಯಪಾಲರು ವಿಧಾನಸಭೆಯನ್ನು ಅಮಾನತಿನಲ್ಲಿಡಲು ಶಿಫಾರಸು ಮಾಡಿದ್ದು ಗಾಳಿಯಲ್ಲಿ ಗುದ್ದಾಡಿದಂತೆ ಆಗಿದೆ. ಕೇಂದ್ರದ ತಟಸ್ಥ ನೀತಿ ಬಿಜೆಪಿಯವರೂ ಗಲಿಬಿಲಿಯಾಗುವಂತೆ ಮಾಡಿದೆ. ಒಳಗೊಳಗೇ ಜ್ವಾಲಾಮುಖಿ ಕುದಿಯುತ್ತಿದ್ದರೂ ಹೊರಗಡೆ 'ರಾಜಕೀಯದಲ್ಲಿ ಇದೆಲ್ಲ ಸಹಜ' ಎಂಬಂತೆ ಯಡಿಯೂರಪ್ಪ ಮತ್ತು ಭಾರದ್ವಾಜ್ ನಟಿಸುತ್ತಿದ್ದಾರೆ. ಕಾಂಗ್ರೆಸ್ ಮಾತ್ರ ಏನೂ ತಿಳಿಯದೆ ಕಕ್ಕಾಬಿಕ್ಕಿಯಾಗಿದೆ.

ಯಡಿಯೂರಪ್ಪನಂಥ ಸರಕಾರ ದೇಶದಲ್ಲಿಯೇ ಅತಿ ಭ್ರಷ್ಟ ಸರಕಾರ ಎಂದು ಒಂದು ಬಾರಿ ತೆಗಳುವ, ಇನ್ನೊಂದು ಬಾರಿ ಯಡಿಯೂರಪ್ಪ ಭಾರೀ ಕಷ್ಟಜೀವಿ ಎಂದು ಹೊಗಳುವ ರಾಜ್ಯಪಾಲರ ಭಾರದ್ವಾಜ್ ಅವರ ನಡೆನುಡಿಗಳು ರಾಜಕೀಯ ಪಂಡಿತರನ್ನೂ ಕನ್ಫ್ಯೂಸ್ ಮಾಡಿವೆ. ಈ ಕರ್ನಾಟಕ ರಾಜಕೀಯ ನಾಟಕವನ್ನು ನೋಡುತ್ತಿರುವ ಜನತೆ ಏನಾದರೂ ಮಾಡಿಕೊಳ್ಳಲಿ, ಇನ್ನಾದರೂ ಅಭಿವೃದ್ಧಿಯತ್ತ ಗಮನ ನೀಡಲಿ, ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕಲಿ, ಭ್ರಷ್ಟಾಚಾರವನ್ನು ಮಟ್ಟಹಾಕಲಿ ಎಂಬ ನಿಲುವು ತಳೆದಿದ್ದಾರೆ.

English summary
Governor Hansraj Bhardwaj has asked BS Yeddyurappa to wait for two more days to give saction for joint session of both the houses. Will BSY and Bhardwaj declare ceasefire and work towards development of Karnataka and make state corrupt free?
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X