ಪಿಯುಸಿ ಫಲಿತಾಂಶ : ಉಡುಪಿ ಫಸ್ಟ್, ಯಾದಗಿರಿ ಲಾಸ್ಟ್

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು 2010 ಮತ್ತು 2011ರ ಸಾಲಿನ 2ನೇ ಪಿಯುಸಿ ಪರೀಕ್ಷೆ ಫಲಿತಾಂಶವನ್ನು ಮಲ್ಲೇಶ್ವರ 18ನೇ ಅಡ್ಡರಸ್ತೆಯಲ್ಲಿರುವ ಪಿಯು ಬೋರ್ಡ್ ಕಟ್ಟಡದಲ್ಲಿ ಬಿಡುಗಡೆ ಮಾಡಿದರು. ಪದವಿಪೂರ್ವ ಕಾಲೇಜು ಮಂಡಳಿಯ ನಿರ್ದೇಶಕಿ ವಿ ರಶ್ಮಿ ಅವರು ಉಪಸ್ಥಿತರಿದ್ದರು.
ಈ ಬಾರಿ ಒಟ್ಟು ಶೇ.48.98ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಉಡುಪಿ ಜಿಲ್ಲೆ ಪ್ರಥಮ ಸ್ಥಾನ ಪಡೆದಿದ್ದು ಶೇ.87.14ರಷ್ಟು ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ದಕ್ಷಿಣ ಕನ್ನಡ ಹಾಗೂ ಉತ್ತರ ಕನ್ನಡ ಜಿಲ್ಲೆಗಳು ಕ್ರಮವಾಗಿ ದ್ವಿತೀಯ ಮತ್ತು ತೃತೀಯ ಸ್ಥಾನವನ್ನು ಪಡೆದಿವೆ. ಯಾದಗಿರಿ ಜಿಲ್ಲೆ ಕೊನೆಯ ಸ್ಥಾನದಲ್ಲಿದೆ. ವಿದ್ಯಾರ್ಥಿನಿಯರು ಶೇ.56.92ರಷ್ಟು ಮತ್ತು ವಿದ್ಯಾರ್ಥಿಗಳು ಶೇ.42.19ರಷ್ಟು ಪಾಸಾಗಿದ್ದಾರೆ. ಈ ಬಾರಿ ಪರೀಕ್ಷೆ ತೆಗೆದುಕೊಂಡವರ ಸಂಖ್ಯೆ 621,248. ಅವರಲ್ಲಿ ಉತ್ತೀರ್ಣರಾದವರು 339,048. ಶೇಕಡಾ 23.44ರಷ್ಟು ಫ್ರೆಷರ್ ವಿದ್ಯಾರ್ಥಿಗಳು ಪಾಸಾಗಿದ್ದು, ಗ್ರಾಮೀಣ ಪ್ರದೇಶದಲ್ಲಿ ಶೇ.60.27 ಫಲಿತಾಂಶ ದಾಖಲಾಗಿದೆ. ಒಟ್ಟು 12,598 ವಿದ್ಯಾರ್ಥಿಗಳು ಡಿಸ್ಟಿಂಕ್ಷ್‌ನ್ ನಲ್ಲಿ ಪಾಸಾಗಿದ್ದಾರೆ.
ಕಳೆದ ವರ್ಷ ಗೈರುಹಾಜರಾದವರ ಸಂಖ್ಯೆಯನ್ನು ಹೊರತುಪಡಿಸಿದರೆ, ಈ ವರ್ಷ ಉತ್ತೀರ್ಣರಾದವರ ಸಂಖ್ಯೆಯಲ್ಲಿ 1.11ರಷ್ಟು ಹೆಚ್ಚಳವಾಗಿದೆ. ಫಲಿತಾಂಶ ಹೆಚ್ಚಾಗಲು ಗುಣಮಟ್ಟದ ವಿದ್ಯಾಭ್ಯಾಸ ನೀಡಿದ್ದು ಮತ್ತು ಶೇ.80ರಷ್ಟು ಅಟೆಂಡೆನ್ಸ್ ಕಡ್ಡಾಯ ಮಾಡಿದ್ದ ಕಾರಣ ಎಂದು ಅವರು ಹೇಳಿದರು. ಹಾಗೆಯೆ, ಪಾಸಾಗದ ವಿದ್ಯಾರ್ಥಿಗಳನ್ನು ಹೀಯಾಳಿಸದೆ, ಅವರಲ್ಲಿ ಧೈರ್ಯವನ್ನು ತುಂಬಬೇಕಾದ ಜವಾಬ್ದಾರಿ ಪಾಲಕರು, ಶಿಕ್ಷಕರು ಮತ್ತು ಸಮಾಜದ ಬಂಧುಗಳು ಮೇಲಿದೆ ಎಂದು ಅವರು ಹೇಳಿದರು.
ದಟ್ಸ್ ಕನ್ನಡದಲ್ಲಿ ಫಲಿತಾಂಶದ ಸಂಪೂರ್ಣ ವಿವರ ಈಗ ಲಭ್ಯ!
ಇಂದು ಸಂಜೆ 6 ಗಂಟೆಯ ನಂತರ ಅಂತರ್ಜಾಲದಲ್ಲಿ ಫಲಿತಾಂಶ ದೊರೆಯಲಿದ್ದು, ಮೇ 11ರಂದು ಬೆಳಿಗ್ಗೆ 10 ಗಂಟೆಗೆ ಆಯಾ ಕಾಲೇಜುಗಳ ಬೋರ್ಡುಗಳ ಮೇಲೆ ಫಲಿತಾಂಶವನ್ನು ಅಂಟಿಸಲಾಗುತ್ತದೆ ಎಂದು ಕಾಗೇರಿ ನುಡಿದರು. ಮೊಬೈಲ್ ಮುಖಾಂತರವೂ ಫಲಿತಾಂಶ ಮತ್ತು ಅಂಕಗಳನ್ನು ತಿಳಿಯಬಹುದಾಗಿದೆ ಎಂದು ಅವರು ಹೇಳಿದರು.
ರಾಜ್ಯದಲ್ಲಿ ಒಟ್ಟು 3,800 ಕಾಲೇಜುಗಳಿದ್ದು, 1,200 ಕಾಲೇಜುಗಳು ಸರಕಾರದ ಅಧೀನದಲ್ಲಿವೆ. ಏ.17ರಿಂದ 23ರವರೆಗೆ ನಡೆದಿದ್ದ ಪರೀಕ್ಷೆಗೆ ರಾಜ್ಯಾದ್ಯಂತ ಒಟ್ಟು 6.24 ಲಕ್ಷ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಕುಳಿತಿದ್ದರು. ಅವರಲ್ಲಿ 3,03,375 ಕಲಾ ವಿಭಾಗದಲ್ಲಿ, 1,63,866 ವಾಣಿಜ್ಯ ಮತ್ತು 1,56,984 ವಿಜ್ಞಾನ ವಿಭಾಗದಲ್ಲಿ ಪರೀಕ್ಷೆಗೆ ಕುಳಿತಿದ್ದರು.












Click it and Unblock the Notifications