ಪಾಕ್ ಮುಖವಾಡವೂ, ಒಬಾಮಾ ನೊಬೆಲ್ ಶಾಂತಿ ಪ್ರಶಸ್ತಿಯೂ

ಇಸ್ಲಾಮಾಬಾದಿನಿಂದ 150 ಕಿ.ಮೀ. ದೂರದಲ್ಲಿ ಅಬ್ಬೊತ್ತಾಬಾದ್ ಬಳಿ ಲಾಡೆನ್ ನನ್ನು ಸಾಯಿಸುವುದರೊಂದಿಗೆ ಪಾಕಿಸ್ತಾನದ ನಿಜವಾದ ಮುಖ ಜಗಜ್ಜಾಹೀರಾಗಿದೆ. ಥ್ಯಾಂಕ್ಸ್ ಟು ಒಬಾಮಾ ನೇತೃತ್ವದ ಅಮೆರಿಕದ ಸೇಡು ಎಂದೇ ಹೇಳಬಹುದು. ಅಮೆರಿಕ ಗುಪ್ತಚರ ದಳ ಮತ್ತು ಮಿಲಿಟರಿ ಕಾರ್ಯಾಚರಣೆ ಎಷ್ಟು ಖಡಕ್ಕಾಗಿತ್ತೆಂದರೆ ಪಾಕ್ ಬೇಹುಪಡೆ ಐಎಸ್ಐ ಗೇ ಈ ಬಗ್ಗೆ ಮಾಹಿತಿ ನೀಡಿರಲಿಲ್ಲ! ಏಕೆಂದರೆ ಇತ್ತೀಚೆಗಷ್ಟೇ ಭಯೋತ್ಪಾದನೆಯ ಮತ್ತೊಂದು ಮುಖವೇ ಐಎಸ್ಐ ಎಂದು ಅಮೆರಿಕ ಸಾರಿತ್ತು.
ಅಮೆರಿಕದಲ್ಲಿ ಬೃಹತ್ತಾದ ಅವಳಿ ಭವನಗಳು ನೆಲಕ್ಕುರುಳಿದ ಒಂದು ದಶಕದ ಅಂತರದಲ್ಲಿ ಆ ಹೇಯ ಕೃತ್ಯಕ್ಕೆ ಬೀಜ ಬಿತ್ತಿದ್ದ ಉಗ್ರ, ಲಾಡೆನ್ ಇಂದು ನೆಲದ ಮೇಲೆ ಮೈಚಾಚಿ ಬಿದ್ದಿದ್ದಾನೆ. ಇದು ಅಧ್ಯಕ್ಷ ಒಬಾಮಾ ಅವರ ಭರ್ಜರಿ ಗೆಲುವು ಎಂದು ಆಗಲೇ ಬಿಂಬಿಸಲಾಗುತ್ತಿದೆ. ಅದು ನಿಜವೂ ಹೌದು. ಮುಂದಿನ ಬಾರಿಗೂ ಅಧ್ಯಕ್ಷಗಾದಿ ಉಳಿಸಿಕೊಳ್ಳುವ ಪ್ರಯತ್ನದಲ್ಲಿರುವ ಬರಾಕ್ ಒಬಾಮಾಗೆ ಲಾಡೆನ್ ಹತ್ಯೆಯಿಂದ ಅದು ಸಲೀಸಾಗಲಿದೆ.
ಅಲ್ ಖೈದಾ ಮುಖ್ಯಸ್ಥ, 9/11 ದಾಳಿಯ ರೂವಾರಿ ಲಾಡೆನ್ ಖಂಡಿತವಾಗಿಯೂ ನಮ್ಮ ನೆಲದಲ್ಲಿಲ್ಲ. ಇದು ಅಲ್ಲಾ ಮೇಲಾಣೆ ಎಂದು ಪಾಕಿಸ್ತಾನ ಹೇಳುತ್ತಲೇ ಇತ್ತು. ಆದರೀಗ ಲಾಡೆನ್ ಮತ್ತು ಅವನ ಕುಟುಂಬ ವರ್ಗ ರಾಜಧಾನಿ ಇಸ್ಲಾಮಾಬಾದಿಗೆ ಸಮೀಪದಲ್ಲಿಯೇ ಸತ್ತು ಬಿದ್ದಿದೆ.












Click it and Unblock the Notifications