ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೈಗಾ ಸ್ಥಾವರ ಹೊಗೆ ಆತಂಕ ಬೇಡ

By Mahesh
|
Google Oneindia Kannada News

Kaiga Plant, Karwar
ಕೈಗಾ, ಏ.11: ಕೈಗಾ ಅಣು ವಿದ್ಯುತ್ ಸ್ಥಾವರ ಸ್ಥಗಿತಗೊಳಿಸುವುದು ಮಾಮೂಲಿ ಸುದ್ದಿ. ಆದರೆ, ಕಳೆದ ಎರಡು ದಿನಗಳಿಂದ ವಿದ್ಯುತ್ ಸ್ಥಾವರ ಸ್ಥಗಿತಗೊಳ್ಳಲು ಕಾರಣ ಇಲ್ಲಿನ ರಿಯಾಕ್ಟರ್ ನಲ್ಲಿ ಹೊಗೆ ಕಾಣಿಸಿಕೊಂಡಿರುವುದು ಎಂಬ ಆತಂಕಕಾರಿ ವಿಷಯ ಹೊರಬಿದ್ದಿದೆ. ಜಪಾನ್ ಸುನಾಮಿ ದುರಂತದ ನಂತರ ದೇಶದ ಪ್ರಮುಖ ಅಣುಸ್ಥಾವರಗಳ ಸ್ಥಿತಿಗತಿ ಬಗ್ಗೆ ಸರ್ಕಾರ ಪರಿಶೀಲಿಸಿ, ಯಾವುದೇ ತೊಂದರೆ ಕಂಡು ಬಂದಿಲ್ಲ ಎಂದು ಹೇಳಿತ್ತು. ಆದರೆ, ಕೈಗಾ ಸ್ಥಾವರದ ಘಟಕ ಸಂಖ್ಯೆ 3ರ ಚಟುವಟಿಕೆಯನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ.

ಶುಕ್ರವಾರ ಮುಂಜಾನೆ 4:30ರ ಹೊತ್ತಿಗೆ ಕೈಗಾ ಜನರೇಟಿಂಗ್ ಸ್ಟೇಶನ್ (ಕೆಜಿಎಸ್)ನ ಘಟಕ ಸಂಖ್ಯೆ ಮೂರರಲ್ಲಿ ಹೊಗೆ ಪತ್ತೆ ಯಂತ್ರವೊಂದು ಎಚ್ಚರಿಕೆಯ ಸದ್ದನ್ನು ಮೊಳಗಿಸಿತ್ತು. ಕೂಡಲೇ 220 ಮೆಗಾ ವ್ಯಾಟ್ ವಿದ್ಯುತ್ ಉತ್ಪಾದನಾ ಸಾಮರ್ಥ್ಯದ ಘಟಕ ಸಂಖ್ಯೆ 3ನ್ನು ಮುಚ್ಚಲಾಯಿತು ಎಂದು ಅಣುಶಕ್ತಿ ನಿಗಮ ತಿಳಿಸಿದೆ.

ಆದರೆ ಸ್ಥಳದಲ್ಲಿ ಪರಿಶೀಲನೆ ನಡೆಸಿದಾಗ, ಅಲ್ಲಿ ಯಾವುದೇ ಅಸಹಜತೆ, ಘಟಕದ ಕಾರ್ಯಕ್ಷಮತೆಯಲ್ಲಿ ವ್ಯತ್ಯಯ ಕಂಡುಬರಲಿಲ್ಲ ಎಂದು ಸ್ಥಾವರದ ನಿರ್ದೇಶಕ ಜೆ.ಪಿ. ಗುಪ್ತಾ ತಿಳಿಸಿದ್ದಾರೆ. ಮೇ ತಿಂಗಳಿಗೆ ಮುಂಚಿತವಾಗಿ ಸ್ಥಾವರದ ಘಟಕ ಸಂಖ್ಯೆ 3ನ್ನು ತಪಾಸಣೆಗೊಳಿಸುವ ಯೋಜನೆಯಿತ್ತು. ಹಾಗಾಗಿ ಸ್ಥಾವರ ಮುಚ್ಚಿರುವುದರಿಂದ ಪರೀಕ್ಷೆಗಳನ್ನು ಈ ಸಂದರ್ಭದಲ್ಲಿ ನಡೆಸಲಾಗುವುದು ಎಂದು ಗುಪ್ತಾ ಹೇಳಿದರು.

ಎಲ್ಲ ಪರೀಕ್ಷೆಗಳನ್ನು ಪೂರ್ಣಗೊಳಿಸಿದ ಬಳಿಕ, ಎಪ್ರಿಲ್ 17ರೊಳಗೆ ಕೆಜಿಎಸ್ ಘಟಕ ಸಂಖ್ಯೆ 3ನ್ನು ಮರಳಿ ಕಾರ್ಯಪ್ರವೃತ್ತಗೊಳಿಸಲಾಗುವುದು ಎಂದು ಎನ್‌ಪಿಸಿಐಎಲ್ ತಿಳಿಸಿದ್ದಾರೆ. 2007ರ ಮೇ 6ರಂದು ಕೆಜಿಎಸ್‌ನ ಘಟಕ ಸಂಖ್ಯೆ 3 ಕಾರ್ಯಾರಂಭಗೊಂಡಿತ್ತು. ಪ್ರಸ್ತುತ ಸ್ಥಾವರದ ಘಟಕ ಸಂಖ್ಯೆ 1, 2 ಹಾಗೂ 4 ಸುರಕ್ಷಿತವಾಗಿ ಕಾರ್ಯಾಚರಿಸುತ್ತಿದ್ದು, ಅವು ಸುಮಾರು 560 ಮೆಗಾ ವ್ಯಾಟ್ ಅಣುವಿದ್ಯುತ್ ಉತ್ಪಾದಿಸುತ್ತಿದೆ. ಭಾರತದಲ್ಲಿ ಒಟ್ಟು 20 ಅಣು ಸ್ಥಾವರಗಳು ಕಾರ್ಯ ನಿರ್ವಹಿಸುತ್ತಿದ್ದು, ಒಟ್ಟಾರೆ 4780 ಮೆ.ವ್ಯಾ ಸಾಮರ್ಥ್ಯದ ವಿದ್ಯುತ್ ಉತ್ಪಾದನೆಯಾಗುತ್ತಿದೆ.

English summary
A nuclear power reactor at the Kaiga Generating Station (KGS), Karwar, Karnataka was shut down after a smoke detection alarm went off on Saturday, Apr 9. But, no danger in Kaiga as the advanced technology with sensors is being used to prevent any radiation leak in case of an emergency KGS director JP Gupta.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X