'ಲಗಾನ್' ತಂಡ ಬೆಂಬಲಿಸಿ ಬಾಲಿವುಡ್ ಬಂದ್
ಮುಂಬೈ, ಮಾ. 29: ವಿಶ್ವ ಕಪ್ ಕ್ರಿಕೆಟ್ ನಲ್ಲಿ ನೆರೆ'ಹೊರೆ'ಯ ಭಾರತ ಮತ್ತು ಪಾಕಿಸ್ತಾನದ ನಡುವೆ ಮಹಾಸಮರ ಏರ್ಪಟ್ಟಿರುವಾಗ ಬಾಲಿವುಡ್ ಜಗತ್ತು ತನ್ನ ಪ್ರಪಂಚದಲ್ಲೇ ತಾನು ಮುಳುಗಿರಲು ಸಾಧ್ಯವೇ!? ಹಾಗಾಗಿ ಬಾಲಿವುಡ್ ನಾಳೆ (ಮಾರ್ಚ್ 30) ಕೆಲಸ ಮಾಡದಿರಲು ನಿರ್ಧರಿಸಿದೆ. ವಿಶ್ವ ಕಪ್ ಫೈನಲ್ ನಲ್ಲಿ ಸ್ಥಾನ ಪಡೆಯಲು ಭಾರತ ಹೋರಾಟ ನಡೆಸುವುದನ್ನು ಆಸ್ವಾದಿಸಲು ಮತ್ತು ಅದಕ್ಕೆ ಸಂಪೂರ್ಣ ಬೆಂಬಲ ಸೂಚಿಸಲು ಬಾಲಿವುಡ್ ತನ್ನ ದೈನಂದಿನ ಚಟುವಟಿಕೆಗೆ ಕಟ್, ಕಟ್ ಹೇಳಿದೆ.
ಎಲ್ಲ ಮ್ಯಾಚ್ ಗಳಿಗೂ ಸಿದ್ಧಾರ್ಥ ಮಲ್ಯ ಜತೆಗೂಡಿ ಸ್ಟೇಡಿಯಂಗೆ ದಾಳಿಯಿಡುತ್ತಿದ್ದ ಕನ್ನಡತಿ ದೀಪಿಕಾ ಪಡುಕೋಣೆ ಈ ಬಾರಿ ಲಂಡನ್ ನಲ್ಲಿ ಶೂಟಿಂಗ್ ನಲ್ಲಿರುವುದರಿಂದ ಅಲ್ಲಿಂದಲೇ ಮ್ಯಾಚ್ ನೋಡಲಿದ್ದಾರೆ. ಸಿದ್ಧಾರ್ಥ ಬದಲಿಗೆ ಜಾನ್ ಅಬ್ರಹಾಂ ದೀಪಿಕಾಗೆ ಸಾಥ್ ನೀಡಲಿದ್ದಾರೆ. ಖ್ಯಾತ ನಟ ಅಮೀರ್ ಖಾನ್, ಅವರ ಪತ್ನಿ ನಿರ್ದೇಶಕಿ ಕಿರಣ್ ರಾವ್, ಶಿಲ್ಪಾ ಶೆಟ್ಟಿ, ಸುನಿಲ್ ಶೆಟ್ಟಿ, ರಾಹುಲ್ ಬೋಸ್, ಮಿಕಾ ಸಿಂಗ್ ಹೀಗೆ ಇಡೀ ತಾರಾ ಮಂಡಲವೇ ಮೊಹಾಲಿ ಸ್ಟೇಡಿಯಂನಲ್ಲಿ ಮಿನುಗಲಿದೆ.
ಅಮೀರ್ ಖಾನ್ ಬುಧವಾರದಂದು ಬೆಳಗ್ಗೆ 9ರಿಂದ ರಾತ್ರಿ 9ರವರೆಗೆ ರೀಮಾ ಕಗ್ಟಿ ಅವರ ಸಿನಿಮಾ ಚಿತ್ರೀಕರಣದಲ್ಲಿ ಪಾಳ್ಗೊಳ್ಳಬೇಕಿತ್ತು. ಆದರೆ ಬೆಳಗ್ಗೆ ಸ್ವಲ್ಪ ಹೊತ್ತು ಮಾತ್ರ ಶೂಟಿಂಗ್ ಬರ್ತೇನೆ ಅಷ್ಟೆ ಎಂದು ಪರ್ಮಿಶನ್ ತೆಗೆದುಕೊಂಡಿದ್ದಾರೆ. 'ನನ್ನ ಚಿತ್ರದ ನಿರ್ದೇಶಕರೂ ಕ್ರಿಕೆಟ್ ಫ್ಯಾನ್. ಆದ್ದರಿಂದ ಒಂದು ದಿನದ ರಜೆ ದಯಪಾಲಿಸಿದ್ದಾರೆ. ಆಲ್ ಈಜ್ ವೆಲ್' ಎಂದು ಲಗಾನ್ ತಂಡದ ನಾಯಕ ಅಮೀರ್ ಖಾನ್ ಸಂಭ್ರಮಿಸಿದ್ದಾರೆ. ನಾಳೆ ಸ್ಟೇಡಿಯಂನಲ್ಲಿ ಇರುತ್ತೇನೆ, ಅಲ್ಲಿ ಸಿಗೋಣ ಎಂದು ಸಿಕ್ ಸಿಕ್ಕವರಿಗೆಲ್ಲ ಟ್ವೀಟ್ ಮಾಡತೊಡಗಿದ್ದಾರೆ.
ಇನ್ನು ಬಾಲಿವುಡ್ ಬಾದ್ ಷಾ ಶಾರೂಖ್ ಖಾನ್ ಅಕ್ಷಯ್ ಕುಮಾರ್, ಇಮ್ರಾನ್ ಖಾನ್ ಸೇರಿದಂತೆ ಅನೇಕ ಕಲಾವಿದರು ಸ್ಟೇಡಿಯಂ ಗೌಜು ಗದ್ದಲ ಬೇಡ ಎಂದು ಮನೆಗಳಲ್ಲಿ ಹೋಮ್ ಥೇಟರ್ ನಲ್ಲಿ ಪಟ್ಟಾಂಗ ಕೂರಲಿದ್ದಾರೆ. ಮನೆಯಲ್ಲಿ ಫುಲ್ ಪಾರ್ಟಿ ಎಂದು ಶಾರೂಖ್ ಈಗಾಗಲೇ ಘೋಷಿಸಿಯಾಗಿದೆ. ಅಲ್ಲಿಗೆ ಬಾಲಿವುಡ್ ನಲ್ಲಿ ಆಕ್ಷ್ಯನ್, ಕ್ಯಾಮೆರಾ ರೋಲಿಂಗ್ ಗಪ್ ಚುಪ್ ಆಗಲಿವೆ. ಕೊನೆಯ ಘಳಿಗೆಯಲ್ಲಿ ಕಾರ್ಯಕ್ರಮ ಬದಲಾಗಿದ್ದು, ಶಾರೂಖ್ ಪತ್ನಿಯ ಜತೆಗೂಡಿ ಚಾರ್ಟರ್ ಪ್ಲೇನ್ ನಲ್ಲಿ ಮೊಹಾಲಿ ಸ್ಟೇಡಿಯಂನತ್ತ ದೌಡಾಯಿಸುವ ಸಾಧ್ಯತೆ ಇದೆ.
ಪ್ರೀತಿ ಜಿಂಟಾ ಮನೆಮಂದಿಗೆಲ್ಲ ಟಿಕೆಟ್ ಖರೀದಿಸಲು ಶತಪ್ರಯತ್ನ ನಡೆಸಿ, ವಿಫಲಳಾಗಿದ್ದಾಳೆ. ಆದ್ದರಿಂದ ಸ್ಟೇಡಿಯಂ ಸಹವಾಸವೇ ಬೇಡ ಎಂದು ಮ್ಯಾಚ್ ನೋಡಲು ಮನೆಮಂದಿಯನ್ನೆಲ್ಲ ಕರೆದುಕೊಂಡು ಪಂಚತಾರಾ ಹೋಟೆಲ್ ಗೆ ಹೋಗಲು ನಿರ್ಧರಿಸಿದ್ದಾರೆ. ಬಾಬ್ಬಿ ಡಿಯೋಲ್ ಸಹ ಇದೇ ಪ್ಲಾನ್ ಹಾಕಿಕೊಂಡಿದ್ದಾರೆ.
ಆದರೆ ಕಾಯಕವೇ ಕೈಲಾಸ ಎನ್ನುವ ಶಹೀದ್ ಕಪೂರ್ ಮಾತ್ರ ಮೌಸಂ ಶೂಟಿಂಗ್ ನಲ್ಲಿ ಅವಿರತ ದುಡಿಯುಯುತ್ತಿದ್ದಾರೆ. ಅವರಿಗೆ ಬಿಡುವೆಂಬುದೇ ಇಲ್ವಂತೆ. ಅದರೆ ತಮ್ಮ ಖಾಸಗಿ ವಾಹನಕ್ಕೆ ಡಿಶ್ ಆಂಟೆನಾ ತಗಲುಹಾಕಿಕೊಂಡಿದ್ದು ಶೂಟಿಂಗ್ ಕೆ ಬೀಚ್ ಮೆ ಕ್ರಿಕೆಟ್ ಆಸ್ವಾದಿಸಲಿದ್ದಾರಂತೆ!












Click it and Unblock the Notifications