ಭಾರತದ ಬ್ಯಾಟಿಂಗ್ v/s ಪಾಕ್ ಬೌಲಿಂಗ್
ಮೊಹಾಲಿ, ಮಾ. 29: ಭಾರತ ಮತ್ತು ಪಾಕಿಸ್ತಾನ ನಡುವೆ ನಾಳೆ (ಮಾರ್ಚ್ 30) ಮಹಾಕದನ ಏಕಾಧಿಪತ್ಯ ಆಗದೆ ಜಿದ್ದಾಜಿದ್ದಿಯಿಂದ ನಡೆಯುವಂತಾದರೆ ಅದು ಖಂಡಿತ ಭಾರತದ ಬಲಿಷ್ಠ ಬ್ಯಾಟಿಂಗ್ ಮತ್ತು ಪಾಕಿಸ್ತಾನದ ದೈತ್ಯ ಬೌಲಿಂಗ್ ನಡುವಣ ಕದನವಾಗುವುದರಲ್ಲಿ ಯಾವುದೇ ಅನುಮಾನವಿಲ್ಲ. ಉಭಯ ತಂಡಗಳಲ್ಲಿ ಪ್ರತಿಭೆ ತುಂಬಿತುಳುಕುತ್ತಿದೆ. ಭಾರತ ಬ್ಯಾಟಿಂಗ್ ಮಿಂಚಬಹುದಾದರೆ ಪಾಕ್ ಗೆ ಬೌಲಿಂಗ್ ಮತ್ತು ಫೀಲ್ಡಿಂಗ್ ಸಾಥ್ ನೀಡಲಿದೆ ಎಂದು 1975 ಮತ್ತು 1979ರ ವಿಶ್ವ ಕಪ್ ಮುಕುಟ ಧರಿಸಿದ್ದ ಬ್ಯ್ಲಾಕ್ ಕ್ಯಾಟ್ ಕ್ಲೈವ್ ಲಾಯ್ಡ್ ಅವರು ಎರಡೂ ತಂಡಗಳ ಬಲಾಬಲವನ್ನು ತುಲನೆ ಮಾಡಿ, ವಿಶ್ಲೇಷಿಸಿದ್ದಾರೆ.
ಸಚಿನ್ ಉತ್ತಮವಾಗಿ ಬ್ಯಾಟಿಂಗ್ ಮಾಡಿದರೆ ಅನುಮಾನವೇ ಬೇಡ ತಂಡಕ್ಕೆ ಅತ್ಯುತ್ತಮ ಆರಂಭ ದೊರಕಿಸಿಕೊಟ್ಟಂತಾಗುತ್ತದೆ. ಆ ಬಳಿಕ ಯುವರಾಜ (ಸಿಂಗ್) ತನ್ನ ಚಮತ್ಕಾರ ತೋರಲು ಇದ್ದೇ ಇರುತ್ತಾನೆ. ಈ ವಿಶ್ವ ಕಪ್ ನಲ್ಲಿ ಯುವರಾಜನಂತೂ ಅದೇನು ಮಾಂತ್ರಿಕ ಶಕ್ತಿ ಪಡೆದವನಂತೆ ಆಡುತ್ತಿದ್ದಾನೆ ಎಂದು ಅವರು ಷರಾ ಬರೆದಿದ್ದಾರೆ.
'ಭಾರತ-ಪಾಕ್ ನಡುವಣ ಕ್ರಿಕೆಟ್ ಸಮರವೆಂದರೆ ಅದು ಪ್ರೆಷರ್ ಕುಕ್ಕರ್ ಇದ್ದಂತೆ, ಕಿವಿಗಡಚಿಕ್ಕುವ ಬೋರ್ಗರೆತ ಕೇಳಿಬರುತ್ತದೆ. ತಂಡ ಹಾಗೂ ತಂಡದ ಒಂದೆರಡು ಅಗ್ರ ಪಂಕ್ತಿಯ ಆಟಗಾರರಿಗೆ ಇದು ಹೋಮ್ ಪಿಚ್ ನಲ್ಲಿ ಆಡುತ್ತಿರುವುದು ಭಾರತಕ್ಕೆ ಪೂರಕವಾಗಲಿದೆ. ಡೌಟೇ ಇಲ್ಲ. ಇದು ಭಾರತದ ಬ್ಯಾಟಿಂಗ್ v/s ಪಾಕಿಸ್ತಾನದ ಬೌಲಿಂಗ್ ನಡುವಣ ಕದನ' ಎಂದು ಸೆಮಿಫೈನಲ್ ಮಹಾಸಮರಕ್ಕೆ 1987ರಲ್ಲಿ ಇದೇ ವಿಶ್ವ ಕಪ್ ಅನ್ನು ಎತ್ತಿಹಿಡಿದಿದ್ದ ಬ್ಯಾಟಿಂಗ್ ದಿಗ್ಗಜ ಆಸ್ಟ್ರೇಲಿಯಾದ ಅಲನ್ ಬಾರ್ಡರ್ ಮುನ್ನಡಿ ಬರೆದಿದ್ದಾರೆ.
ಇನ್ನು 1992ಲ್ಲಿ ಏಕಾಂಗಿಯಾಗಿ ಹೋರಾಡಿ ಕಪ್ ಎತ್ತಿಹಿಡಿಯುವ ಮೂಲಕ ಅಚ್ಚರಿ ಮೂಡಿಸಿದ್ದ ಬೌಲಿಂಗ್ ಸಾಮ್ರಾಟ ಇಮ್ರಾನ್ ಖಾನ್ ಶ್ರೀಲಂಕಾ-ಪಾಕಿಸ್ತಾನ ೀ ಬಾರಿ ವಿಶ್ವ ಕಪ್ ಗಾಗಿ ಕಾದಾಡಲಿವೆ ಎಂದು ಬೆನ್ನುಡಿ ಬರೆದಿದ್ದಾರೆ. ಇದೇ ವೇಳೆ, 1983 ರಲ್ಲಿ ಅತ್ಯದ್ಭುತ ಪ್ರದರ್ಶನ ನೀಡಿ ಕಪ್ ಗೆಲ್ಲುವತ್ತ ತಂಡವನ್ನು ಮುನ್ನಡೆಸಿದ್ದ ಕಪಿಲ್ ಸಾಬ್ 'ಕನಸು ಯಾರಪ್ಪನ ಮನೆ ಆಸ್ತಿ. ಯಾರು ಬೇಕಾದರೂ ಕನಸು ಕಾಣಬಹುದು. ಆದರೆ ಈ ಮುನ್ನಡಿ, ಬೆನ್ನುಡಿ, ಷರಾಶರಗಳ ಮಧ್ಯೆ ವಾಸ್ತವ ಬೇರೆಯೇ ಇರುತ್ತದೆ. ಎಚ್ಚರಿಕೆಯಿಂದ ಆಡೋಣ' ಎಂಬ ಚೆನ್ನುಡಿ ಬರೆದಿದ್ದಾರೆ.












Click it and Unblock the Notifications