ಫೇಸ್ ಬುಕ್ ಮುಚ್ಚಿ, ಗೂಗಲ್ ಸರ್ಕಲ್ಸ್ ಸುತ್ತಿ

ಫೇಸ್ ಬುಕ್ ಕಿಲ್ಲರ್ ಉತ್ಪನ್ನವನ್ನು ಮೇ 2011ರಲ್ಲಿ ಗೂಗಲ್ ಹೊರತರಲಿದೆ ಎಂದು ಅನೇಕ ಬ್ಲಾಗು, ವೆಬ್ ತಾಣಗಳು ವರದಿ ಮಾಡಿದ್ದವು. ಮಾರ್ಕ್ ಝಕರ್ ಬರ್ಗ್ ಜಾಣ್ಮೆಯಿಂದ ಫೇಸ್ ಬುಕ್ ಬೆಳೆಸುತ್ತಿದ್ದು, ಅನೇಕ ಜಾಹೀರಾತುಗಳನ್ನು ಕಸಿದುಕೊಂಡು ಗೂಗಲ್ ಗೆ ಭಾರಿ ಹೊಡೆತ ನೀಡಿದ್ದ. ಇದಕ್ಕೆ ಪ್ರತಿಯಾಗಿ ಗ್ರಾಹಕ ಸ್ನೇಹಿ ಸಾಮಾಜಿಕ ಜಾಲ ತಾಣ ರೂಪಿಸಿರುವ ಗೂಗಲ್ ಸ್ಯಾನ್ ಫ್ರಾನಿಸ್ಕೋ ಸಮಾವೇಶದಲ್ಲಿ ಹೊಸ ಉತ್ಪನ್ನವನ್ನು ಅನಾವರಣಗೊಳಿಸಲಿದೆ ಎಂದು ನೆಕ್ಸ್ಟ್ ವೆಬ್ ತಂತ್ರಜ್ಞಾನ ಬ್ಲಾಗ್ ಹೇಳಿದೆ.
ಗೂಗಲ್ ಮೂರನೇ ಪ್ರಯತ್ನ: ಫೇಸ್ ಬುಕ್ ಹಾಗೂ ಗೂಗಲ್ ಸಮರ ತೀರಾ ಹೊಸದೇನಲ್ಲ. ಫೇಸ್ ಬುಕ್ ಅಧಿಪತ್ಯವನ್ನು ತೊಡೆದು ಹಾಕಲು ಈ ಹೊಸ ಉತ್ಪನ್ನ ಸರ್ಕಲ್ಸ್ ಗೂಗಲ್ ನ ಮೂರನೇ ಪ್ರಯತ್ನವಾಗಿದೆ. ಆರ್ಕುಟ್, ಗೂಗಲ್ ಬಝ್ ನಿಂದ ಆಗದ ಕೆಲಸ ಸರ್ಕಲ್ಸ್ ನಿಂದ ಆಗುತ್ತದೆ ಎಂದು ಗೂಗಲ್ ನಂಬಿದೆ. ಹಾಗಾಗಿ, ಆಕರ್ಷಕ ವಿನ್ಯಾಸ ಹಾಗೂ ಗ್ರಾಹಕರ ಅಗತ್ಯಕ್ಕೆ ತಕ್ಕಂತೆ ಸರ್ಕಲ್ಸ್ ರೂಪಿಸಲು ಗೂಗಲ್ ಸಾಕಷ್ಟು ಶ್ರಮಪಟ್ಟಿದೆ.
ಗೂಗಲ್ ಸರ್ಕಲ್ಸ್ ಮುಖ್ಯವಾಗಿ ಬಳಕೆದಾರರ ಮಾಹಿತಿ ಗೌಪ್ಯತೆ ಹಾಗೂ ಭದ್ರತೆ ಬಗ್ಗೆ ಹೆಚ್ಚಿನ ನಿಗಾ ವಹಿಸಿದೆ. ಈ ವಿಷಯಗಳಲ್ಲಿ ಫೇಸ್ ಬುಕ್ ಕೊಂಚ ಯಾಮಾರಿದ್ದರಿಂದ ಕೊಂಚ ನಷ್ಟ ಅನುಭವಿಸಿತ್ತು. ಸುರಕ್ಷಿತವಾಗಿ ಹಾಗೂ ಸಂತೋಷವಾಗಿ ನಿಮ್ಮ ಗೆಳಯ ಗೆಳತಿಯರನ್ನು ನಿಮ್ಮ ವೃತ್ತಕ್ಕೆ ಸೇರಿಸಿಕೊಳ್ಳುವಂತೆ ಮಾಡಲು ಗೂಗಲ್ ಸಜ್ಜಾಗಿದೆ. ಆದರೆ, ಸರ್ಕಲ್ಸ್ ಕುರಿತ ವರದಿಯ ಬಗ್ಗೆ ಇದುವರೆವಿಗೂ ಗೂಗಲ್ ವಕ್ತಾರರಿಂದ ಅಧಿಕೃತವಾಗಿ ಯಾವುದೇ ಮಾಹಿತಿ ಹೊರಬಿದ್ದಿಲ್ಲ.












Click it and Unblock the Notifications