Get Updates
Get notified of breaking news, exclusive insights, and must-see stories!

ಹಾಕಿ ಉತ್ಸವಕ್ಕೆ ಕೊಡಗು ಸಜ್ಜಾಗುತ್ತಿದೆ......

Kodava Hockey Fetival
ನಮ್ಮ ರಾಷ್ಟ್ರೀಯ ಕ್ರೀಡೆ ಹಾಕಿಗೆ ಪ್ರೋತ್ಸಾಹ ಸಿಗುತ್ತಿಲ್ಲ ಎಂಬ ಮಾತು ಒಂದೆಡೆ ಕೇಳಿಬರುತ್ತಿದೆಯಾದರೂ ಕೊಡಗಿನಲ್ಲಿ ಮಾತ್ರ ಇದಕ್ಕೆ ಅಪವಾದ ಎಂಬಂತೆ ಕಳೆದ ಹದಿನಾಲ್ಕು ವರ್ಷಗಳಿಂದ ಕೊಡವ ಕುಟುಂಬಗಳು ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಹಾಕಿನಮ್ಮೆ (ಹಾಕಿ ಉತ್ಸವ)ಯನ್ನು ನಡೆಸಿಕೊಂಡು ಬರುತ್ತಿದ್ದು, ಪ್ರಸಕ್ತ ನಡೆಯಲಿರುವ ಹದಿನೈದನೆಯ ವರ್ಷದ ಹಾಕಿ ನಮ್ಮೆಯ ಸಾರಥ್ಯವನ್ನು ಮಚ್ಚಮಾಡ ಕುಟುಂಬ ವಹಿಸಿದೆ.

ಕೊಡಗು ವೀರರ, ಶೂರರ ನಾಡು ಮಾತ್ರವಲ್ಲ, ಕ್ರೀಡಾಪ್ರೇಮಿಗಳ ನೆಲೆವೀಡು ಎನ್ನುವುದಕ್ಕೆ ಇಲ್ಲಿ ವರ್ಷಪೂರ್ತಿ ನಡೆಯುವ ವಿವಿಧ ಕ್ರೀಡಾಕೂಟಗಳೇ ಸಾಕ್ಷಿಯಾಗಿವೆ. ಹಾಗಾಗಿ ಕೊಡಗನ್ನು "ಕರ್ನಾಟಕದ ಪಂಜಾಬ್" ಎಂಬ ಅನ್ವರ್ಥನಾಮದಿಂದ ಕೂಡ ಕರೆಯಲಾಗುತ್ತಿದೆ. ಇಲ್ಲಿ ನಡೆಯುವ ಹಲವಾರು ಕ್ರೀಡಾ ಕೂಟಗಳ ಪೈಕಿ ಕೊಡವ ಕುಟುಂಬಗಳು ನಡೆಸುವ ಹಾಕಿನಮ್ಮೆ (ಹಾಕಿ ಉತ್ಸವ) ಪ್ರಮುಖವಾಗಿದೆಯಲ್ಲದೆ, ದೇಶ ವಿದೇಶಗಳ ಗಮನಸೆಳೆಯುವುದರೊಂದಿಗೆ "ಲಿಮ್ಕಾ ಬುಕ್ ಆಫ್ ರೆಕಾರ್ಡ್"ನಲ್ಲಿ ಸ್ಥಾನಗಿಟ್ಟಿಸಿಕೊಂಡಿದೆ.

ಕೊಡಗಿನಲ್ಲಿ ನಡೆಯುವ ಹಾಕಿ ಉತ್ಸವ ಕೇವಲ ಸೋಲು-ಗೆಲುವಿನ ಲೆಕ್ಕಚಾರದ ಪಂದ್ಯವಲ್ಲ. ಅದು ಕೊಡವ ಸಮುದಾಯದ ಒಗ್ಗಟ್ಟು, ಪ್ರೀತಿ-ವಿಶ್ವಾಸವನ್ನು ಬಲಪಡಿಸುವ, ಯುವ ಸಮೂಹದಲ್ಲಿರುವ ಸುಪ್ತ ಪ್ರತಿಭೆಗಳನ್ನು ಗುರುತಿಸಿ ಅವಕಾಶ ನೀಡುವ, ರಾಷ್ಟ್ರೀಯ-ಅಂತಾರಾಷ್ಟ್ರೀಯ ಕ್ರೀಡಾ ಕಲಿಗಳ ಮೂಲಕ ಯುವ ಪ್ರತಿಭೆಗಳಿಗೆ ತರಬೇತಿ ನೀಡುವ, ಆಟದ ನಿಯಮ, ಶಿಸ್ತು, ಚಾಕಚಕ್ಯತೆಗಳನ್ನು ಪರಿಚಯಿಸುವ, ವಿವಾಹ ಸಂಬಂಧ ಬೆಳೆಸುವ, ಸಂಸ್ಕೃತಿ, ಸಂಪ್ರದಾಯವನ್ನು ಉಳಿಸಿ ಮುಂದುವರೆಸುವ ವೇದಿಕೆಯೆಂದರೆ ಅತಿಶಯೋಕ್ತಿಯಾಗಲಾರದು.

ಇವತ್ತು ಭಾರತದ ಹಾಕಿ ತಂಡದಲ್ಲಿ ಸ್ಥಾನಗಿಟ್ಟಿಸಿಕೊಂಡ ಆಟಗಾರರಲ್ಲದೆ, ಇತರೆ ಕ್ರೀಡೆಯಲ್ಲಿ ತಮ್ಮ ಸಾಮರ್ಥ್ಯ ಮೆರೆದ, ಸೇನೆ, ಪೊಲೀಸ್, ಇನ್ನಿತರ ಇಲಾಖೆಯಲ್ಲಿ ಕಾರ್ಯನಿರ್ವಹಿಸುತ್ತಿರುವವರಿಂದ ಕಾಫಿ ಬೆಳೆಗಾರರ ತನಕ ಎಲ್ಲರೂ ತಮ್ಮ ಕುಟುಂಬಗಳ ಪರ ಆಟವಾಡುವುದು ಹಾಕಿ ನಮ್ಮೆಯ ಮತ್ತೊಂದು ವಿಶೇಷತೆಯಾಗಿದೆ. 1997ರಲ್ಲಿ ವೀರಾಜಪೇಟೆ ತಾಲೂಕಿನ ಕುಗ್ರಾಮ ಕರಡದಲ್ಲಿ ಆರಂಭಗೊಂಡ ಹಾಕಿನಮ್ಮೆ ವರ್ಷದಿಂದ ವರ್ಷಕ್ಕೆ ಅಭಿವೃದ್ಧಿಯ ಪಥದಲ್ಲಿ ಸಾಗುತ್ತಾ ಮುಂದೊಂದು ದಿನ "ಲಿಮ್ಕಾ ಬುಕ್ ಆಫ್ ರೆಕಾರ್ಡ್"ನಲ್ಲಿ ದಾಖಲಾಗುವಷ್ಟರ ಮಟ್ಟಿಗೆ ಗಮನಸೆಳೆಯುತ್ತದೆ ಎಂದು ಯಾರೂ ಯೋಚಿಸಿರಲಿಲ್ಲ.

ಕೊಡವ ಹಾಕಿ ಕಥೆ: ಹಾಕಿನಮ್ಮೆಯ ಹುಟ್ಟು, ಬೆಳವಣಿಗೆ ಎಲ್ಲವೂ ರೋಚಕವೇ... ಇಂತಹವೊಂದು ಕ್ರೀಡಾ ಉತ್ಸವವನ್ನು ಹುಟ್ಟು ಹಾಕಿದ ಗೌರವ ಕೊಡವ ಹಾಕಿ ಆಕಾಡೆಮಿಯ ಸ್ಥಾಪಕ ಅಧ್ಯಕ್ಷ ಪಾಂಡಂಡ ಕುಟ್ಟಪ್ಪ ಅವರಿಗೆ ಸಲ್ಲುತ್ತದೆ.

ಅದು ಹಲವು ದಶಕಗಳ ಹಿಂದಿನ ಕಥೆ. ಆಗಿನ್ನೂ ಕುಟ್ಟಪ್ಪರವರು ಬಾಲಕ. ಅವರನ್ನು ಎಲ್ಲರೂ ಪ್ರೀತಿಯಿಂದ ಕುಟ್ಟಣಿ ಎಂದೇ ಕರೆಯುತ್ತಿದ್ದರು. ಅವರಿಗೆ ಬಾಲ್ಯದಿಂದಲೇ ಹಾಕಿ ಆಟದ ಬಗ್ಗೆ ಎಲ್ಲಿಲ್ಲದ ವ್ಯಾಮೋಹ ಹಾಗಾಗಿ ತಮ್ಮ ವಯಸ್ಸಿನ ಬಾಲಕರನ್ನು ಸೇರಿಸಿಕೊಂಡು ಕಾಡುಮರದಿಂದ ತಾವೇ ಕೆತ್ತಿ ತಯಾರಿಸಿದ ಸ್ಟಿಕ್‌ನ್ನು ಹಿಡಿದು ರಬ್ಬರ್ ಚೆಂಡನ್ನು ನೂಕುತ್ತಾ ಕುಗ್ರಾಮ ಕರಡದ ಮೈದಾನ ತುಂಬಾ ಧೂಳೆಬ್ಬಿಸುತ್ತಾ ಹಾಕಿಆಟವನ್ನಾಡುತ್ತಿದ್ದರು.

ಆದರೆ ಮುಂದೊಂದು ದಿನ ಇದೇ ಬಾಲಕ ಕೊಡಗಿನಲ್ಲಿ ಕೊಡವ ಕುಟುಂಬಗಳ ನಡುವಿನ "ಹಾಕಿನಮ್ಮೆ"ಯ ಹುಟ್ಟಿಗೆ ಕಾರಣನಾಗಿ "ಹಾಕಿನಮ್ಮೆಯ ಜನಕ" ಎಂದೇ ಹೆಸರು ಮಾಡುತ್ತಾನೆ ಎಂಬುವುದನ್ನು ಯಾರೂ ಊಹಿಸಿರಲಿಲ್ಲ. ಹಾಕಿ ಆಟದ ಬಗ್ಗೆ ಉತ್ಸಾಹ ಹೊಂದಿದ್ದ ಅವರು ಮುಂದೆ ಬೆಳೆದು ದೊಡ್ಡವರಾದಾಗ ಕೊಡಗಿನಲ್ಲಿ ಹಾಕಿ ಕ್ರೀಡೆಯನ್ನು ಶಾಶ್ವತವಾಗಿ ಉಳಿಸಿ ಬೆಳೆಸಲು ಕಂಕಣತೊಟ್ಟು ನಿಂತರು.

ಕೊಡಗಿನಲ್ಲಿ ಅಡ್ಡಾಡುವಾಗಲೆಲ್ಲಾ ಮೈದಾನದಲ್ಲಿ ಯುವಕರು ಸ್ಟಿಕ್ ಹಿಡಿದು ಆಡುತ್ತಿದ್ದ ದೃಶ್ಯಗಳು ಕಂಡು ಬರುತ್ತಿತ್ತು. ಈ ಸಂದರ್ಭ ಅವರ ತಲೆಯಲ್ಲಿ ಆಲೋಚನೆಯೊಂದು ಸುಳಿದಾಡ ತೊಡಗಿತ್ತು. ಕೊಡಗಿನಲ್ಲಿ ಕೊಡವ ಕುಟುಂಬಗಳಲ್ಲಿ ಹಲವಾರು ಮಂದಿ ಹಾಕಿ ಕ್ರೀಡೆಯತ್ತ ಒಲವು ಹೊಂದಿದ್ದಾರೆ ಅಂತಹವರಿಗೆ ಹಾಕಿ ಪಂದ್ಯಾವಳಿಯನ್ನು ಏರ್ಪಡಿಸಿ ಏಕೆ ಪ್ರೋತ್ಸಾಹ ನೀಡಬಾರದು ಎಂದು ತಮ್ಮನ್ನು ಪ್ರಶ್ನಿಸಿಕೊಳ್ಳುತ್ತಿದ್ದರಲ್ಲದೆ, ಅದನ್ನು ಕಾರ್ಯರೂಪಕ್ಕೆ ತರುವಲ್ಲಿ ಕಾರ್ಯಪ್ರವೃತ್ತರಾದರು.

ಕೊಡವ ಕುಟುಂಬಗಳ ಆಟಗಾರರಿಗಾಗಿ ಹಾಕಿ ಉತ್ಸವ ನಡೆಸುವ ಬಗ್ಗೆ ಕುಟುಂಬಗಳ ಹಿರಿಯರ, ಉತ್ಸಾಹಿ ಆಟಗಾರರೊಂದಿಗೆ ಚರ್ಚೆ ನಡೆಸಿ ಪ್ರತಿವರ್ಷ ಒಂದೊಂದು ಕುಟುಂಬ ಉತ್ಸವದ ಸಾರಥ್ಯ ವಹಿಸುವಂತೆಯೂ, ಯಾವ ಕುಟುಂಬಗಳು ಪಂದ್ಯಾವಳಿಯ ಸಾರಥ್ಯ ವಹಿಸುತ್ತವೆಯೋ ಆ ಕುಟುಂಬದ ಹೆಸರಿನ ಕಪ್‌ನ್ನು ವಿಜೇತ ತಂಡಕ್ಕೆ ನೀಡಲು ತೀರ್ಮಾನಿಸಲಾಯಿತು. 1997ರಲ್ಲಿ ವೀರಾಜಪೇಟೆಯ ಪುಟ್ಟ ಗ್ರಾಮ ಪಾಂಡಂಡ ಕುಟ್ಟಪ್ಪರವರ ಹುಟ್ಟೂರಾದ ಕರಡದ ಮೈದಾನದಲ್ಲಿಯೇ "ಹಾಕಿನಮ್ಮೆ"ಯನ್ನು ಆರಂಭಿಸಲಾಯಿತು. ಪಾಂಡಂಡ ಕುಟುಂಬವೇ ಸಾರಥ್ಯ ವಹಿಸಿಕೊಂಡಿತು. ಆರಂಭದ ವರ್ಷ ಸುಮಾರು ೬೦ಕುಟುಂಬಗಳು ಪಂದ್ಯಾವಳಿಯಲ್ಲಿ ಭಾಗವಹಿಸಿದ್ದು, ಕಲಿಯಂಡ ಕುಟುಂಬದ ತಂಡ ಕಪ್ ಒಡೆತನ ಸಾಧಿಸಿತು.

1998ರಲ್ಲಿ ಕಡಂಗದಲ್ಲಿ ನಡೆದ ಕೋಡಿರಕಪ್‌ನಲ್ಲಿ 116 ತಂಡಗಳು ಪಾಲ್ಗೊಂಡು ಕುಲ್ಲೇಟಿರ ತಂಡ ವಿಜಯಿಯಾದರೆ, 1999ರಲ್ಲಿ ಕಾಕೋಟುಪರಂಬುನಲ್ಲಿ ನಡೆದ ಬಲ್ಲಚಂಡಕಪ್‌ನಲ್ಲಿ 140 ತಂಡಗಳು ಪಾಲ್ಗೊಂಡಿದ್ದು ಕೂತಂಡ ಹಾಗೂ ಕುಲ್ಲೇಟಿರ ತಂಡಗಳು ಕಪ್‌ನ ಒಡೆತನವನ್ನು ಹಂಚಿಕೊಂಡಿದ್ದವು. 2000ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಚೆಪ್ಪುಡಿರಕಪ್‌ನಲ್ಲಿ 170 ತಂಡಗಳು ಭಾಗವಹಿಸಿದ್ದು ಕೂತಂಡ ತಂಡ ಗೆಲುವು ಪಡೆದಿತ್ತು. 2001ರಲ್ಲಿ ಅಮ್ಮತ್ತಿಯಲ್ಲಿ ನಡೆದ ನೆಲ್ಲಮಕ್ಕಡ ಕಪ್‌ನಲ್ಲಿ 220 ತಂಡಗಳು ಭಾಗವಹಿಸಿದ್ದು ಕೂತಂಡ ತಂಡ ವಿಜಯಿಯಾಗಿತ್ತು. 2002ರಲ್ಲಿ ಹುದಿಕೇರಿಯಲ್ಲಿ ನಡೆದ ಚಕ್ಕೇರಕಪ್‌ನಲ್ಲಿ ೨೫೨ ತಂಡಗಳು ಪಾಲ್ಗೊಂಡಿದ್ದು ಅವುಗಳಲ್ಲಿ ಕುಲ್ಲೇಟಿರ ತಂಡ ಒಡೆತನ ಸಾಧಿಸಿತ್ತು.

2003ರಲ್ಲಿ ನಾಪೋಕ್ಲುನಲ್ಲಿ ನಡೆದ ಕಲಿಯಂಡ ಕಪ್‌ನಲ್ಲಿ 280 ತಂಡಗಳು ಭಾಗವಹಿಸಿದ್ದು ನೆಲ್ಲಮಕ್ಕಡ ತಂಡ ಗೆಲುವು ಸಾಧಿಸಿತ್ತು. 2004ರಲ್ಲಿ ಮಾದಾಪುರದಲ್ಲಿ ನಡೆದ ಮಾಳೆಯಂಡ ಕಪ್‌ನಲ್ಲಿ 235 ತಂಡ ಪಾಲ್ಗೊಂಡು ಕೂತಂಡ ತಂಡ ಗೆಲುವು ಪಡೆದಿತ್ತು. 2005ರಲ್ಲಿ ಮಡಿಕೇರಿಯಲ್ಲಿ ನಡೆದ ಬಿದ್ದಂಡ ಕಪ್‌ನಲ್ಲಿ ೨೨೨ತಂಡಗಳು ಭಾಗವಹಿಸಿ ನೆಲ್ಲಮಕ್ಕಡ ತಂಡ ವಿಜಯಿಯಾಗಿತ್ತು. 2006ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಕಳ್ಳಿಚಂಡ ಕಪ್‌ನಲ್ಲಿ 217 ತಂಡಗಳು ಭಾಗವಹಿಸಿ ಪಳಂಗಂಡ ತಂಡ ಒಡೆತನ ಸಾಧಿಸಿತ್ತು. 207ರಲ್ಲಿ ಕಾಕೋಟುಪರಂಬುನಲ್ಲಿ ನಡೆದ ಮಂಡೇಟಿರ ಕಪ್‌ನಲ್ಲಿ 186 ತಂಡ ಪಾಲ್ಗೊಂಡು ಮಂಡೇಪಂಡ ತಂಡ ಗೆಲುವು ಪಡೆದಿತ್ತು.

2008ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಅಳಮೇಂಗಡ ಕಪ್‌ನಲ್ಲಿ 216 ತಂಡಗಳು ಪಾಲ್ಗೊಂಡು ಅಂಜಪರವಂಡ ಗೆಲುವು ಪಡೆದಿತ್ತು. 2009ರಲ್ಲಿ ಅಮ್ಮತ್ತಿಯಲ್ಲಿ ನಡೆದ ಮಂಡೇಪಂಡ ಕಪ್‌ನಲ್ಲಿ 231ತಂಡಗಳು ಭಾಗವಹಿಸಿ ನೆಲ್ಲಮಕ್ಕಡ ತಂಡ ಒಡೆತನ ಸಾಧಿಸಿತ್ತು. 2010ರಲ್ಲಿ ಪೊನ್ನಂಪೇಟೆಯಲ್ಲಿ ನಡೆದ ಮನೆಯಪಂಡ ಕಪ್‌ನಲ್ಲಿ 214 ತಂಡಗಳು ಭಾಗವಹಿಸಿ ಪಳಂಗಂಡ ತಂಡವು ಗೆಲುವು ಪಡೆಯಿತು.

ಪ್ರಸಕ್ತ ವರ್ಷದ ಹಾಕಿನಮ್ಮೆ ಪೊನ್ನಂಪೇಟೆಯಲ್ಲಿ ಏಪ್ರಿಲ್ 22ರಿಂದ ಆರಂಭವಾಗಿ ಮೇ15ರವರೆಗೆ ನಡೆಯಲಿದ್ದು, ಪಂದ್ಯಾವಳಿಯ ಸಾರಥ್ಯವನ್ನು ಮಚ್ಚಮಾಡ ಕುಟುಂಬ ವಹಿಸಿದೆ. ಪೊನ್ನಂಪೇಟೆಯ ಎರಡು ಶಾಲಾ ಮೈದಾನದಲ್ಲಿ ಪಂದ್ಯಾವಳಿ ನಡೆಯಲಿದ್ದು, ಗ್ಯಾಲರಿ ನಿರ್ಮಾಣ, ಮೈದಾನದ ದುರಸ್ತಿ ಇನ್ನಿತರ ಕೆಲಸ ಕಾರ್ಯಗಳನ್ನು ಆರಂಭಿಸಲಾಗಿದೆ. ಪಂದ್ಯಾವಳಿಯ ಪ್ರಾಯೋಜಕತ್ವವನ್ನು ವಹಿಸಿಕೊಳ್ಳಲು ಕೆಲವು ರಾಷ್ಟ್ರಮಟ್ಟದ ಕಂಪನಿಗಳು ಕೂಡ ಮುಂದೆ ಬಂದಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+