ಐಟಿಡಿಸಿ ಬೇಜವಾಬ್ದಾರಿತನ: 5 ಕೋಟಿ ಪರಿಹಾರಕ್ಕೆ ಆದೇಶ

1978ರ ಮೇ ಬೇಸಿಗೆ ಬೇಗೆಯಲ್ಲಿ ಆ ಪ್ರಮಾದ ನಡೆದಿತ್ತು. ಏನಾಯಿತೆಂದರೆ ಕ್ವೀನ್ಸ್ ಲ್ಯಾಂಡ್ ವಾಟರ್ ಪೊಲೊ ತಂಡದ ಸದಸ್ಯೆ, ಸ್ವಿಮ್ಮಿಂಗ್ ಚಾಂಪಿಯನ್ ಸೂಸನ್ ಲೀಗ್ ಬೀರ್ ಅವರು ದಿಲ್ಲಿ ಪ್ರವಾಸಕ್ಕೆಂದು ಬಂದಿದ್ದರು. ಆಗ ITDC ಉಸ್ತುವಾರಿಯಲ್ಲಿದ್ದ ಪಂಚತಾರಾ ಅಕ್ಬರ್ ಹೋಟೆಲ್ ನಲ್ಲಿ ಅವರು ಉಳಿದುಕೊಂಡಿದ್ದರು. ತಂದೆಯೂ ಜತೆಗೆ ಬಂದಿದ್ದರು. ಅವರು ಮಾಜಿ ಈಜುಪಟು. ಆಗ 17 ವರ್ಷದ ಬಾಲಕಿಯಾಗಿದ್ದ ಸೂಸನ್ ದಿಲ್ಲಿ ಬಿಸಿಲಲ್ಲಿ ಸುತ್ತಾಡಿ ಬಳಲಿದ್ದರು.
ದಣಿವಾರಿಸಿಕೊಳ್ಳಲು ತಾವು ತಂಗಿದ್ದ ಅಕ್ಬರ್ ಹೋಟೆಲ್ ಗೆ ನೇರವಾಗಿ ಬಂದವರೆ ಈಜುಕೊಳಕ್ಕೆ ಧುಮುಕಿದರು. ಪಾಚಿ ಗಲೀಜಿನಿಂದ ತುಂಬಿದ್ದ ಕೊಳದ ತಳದಲ್ಲಿ ಜಾರಿದ ಸೂಸನ್ ತಲೆ ಗೋಡೆಗೆ ಬಡಿಯಿತು. ಅಲ್ಲಿಂದ ಮುಂದೆ ಅವರು ಶಾಶ್ವತವಾಗಿ ಅಂಗವಿಕಲರಾದರು. ಆದರೆ ತ್ರಿವಿಕ್ರಮನಂತೆ ಅವರ ತಂದೆ 33 ವರ್ಷ ನ್ಯಾಯಕ್ಕಾಗಿ ಅಲೆದಾಡಿದರು.
ಕೊನೆಗೂ, 'ಅಂಗಹೀನರಾಗಿ ಬದುಕು ಕಳೆದುಕೊಂಡ ಸೂಸನ್ ಶಿಕ್ಷಣದಿಂದಲೂ ವಂಚಿತರಾದರು. ಮಾನಸಿಕವಾಗಿ ಅವರ ಬದುಕು ನಿಶ್ಚಲವಾಯಿತು. ಇದಕ್ಕೆಲ್ಲ ITDC ಬೇಜವಾಬ್ದಾರಿತನವೇ ಕಾರಣ' ಎಂದು ಹೈಕೋರ್ಟ್ ಜಾಡಿಸಿದೆ. ಪರಿಹಾರಾರ್ಥವಾಗಿ ಸೂಸನ್ ಗೆ 1.82 ಕೋಟಿ ರು. ಅಂದರೆ 1982ರಿಂದ ಶೇ. 6ರ ಬಡ್ಡಿ ದರದಲ್ಲಿ ಒಟ್ಟು 5 ಕೋಟಿ ರು. ಪಾವತಿಸಿ ಎಂದು ಆಜ್ಞಾಪಿಸಿದೆ.











Click it and Unblock the Notifications