ಗೆದ್ದಿತು ಕ್ರಿಕೆಟ್: ಎರಡೂ ತಂಡಕ್ಕೆ ಸಮ್ಮಾನ ಅಂಕ
ಬೆಂಗಳೂರು, ಫೆ. 27 : ವರುಣ ದೇವನಿಗೆ ಅನಂತಾನಂತ ಧನ್ಯವಾದಗಳು. ಎರಡು ದಿನಗಳಿಂದ ಕಾಡಿಸಿ ಪೀಡಿಸಿದ್ದ ವರುಣರಾಯ ಇಂದು ರೋಚಕ ಅಂತ್ಯ ಕಂಡ ಕ್ರಿಕೆಟ್ ಆಟಕ್ಕೆ ಅನುವು ಮಾಡಿಕೊಟ್ಟಿದ್ದಕ್ಕೆ ಥ್ಯಾಂಕ್ಸ್. ಮಳೆ ಸುರಿಯದಿದ್ದರೂ ಹರಿದಿದ್ದು ರನ್ ಹೊಳೆ. 100 ಓವರುಗಳಲ್ಲಿ ಸಿಡಿದದ್ದು 676 ರನ್ ಗಳು. ಇಷ್ಟಾದರೂ ಭಾರತ ಗೆಲ್ಲಲೂ ಇಲ್ಲ, ಇಂಗ್ಲೆಂಡ್ ಸೋಲಲೂ ಇಲ್ಲ. ಗೆದ್ದದ್ದು ಮಾತ್ರ ಕ್ರಿಕೆಟ್! ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪ್ರೇಕ್ಷಕರಿಗೆ ಸಿಕ್ಕಿದ್ದು ಮಾತ್ರ ಭರ್ಜರಿ ಮನರಂಜನೆ.
ಭಾರತ ಮತ್ತು ಇಂಗ್ಲೆಂಡ್ ಗಳೆರಡರ ನಡುವಿನ ಈ ಮಹತ್ವದ ಪಂದ್ಯ ಟೈ ಆಗಿದೆ. 49.5 ಓವರುಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 338 ರನ್ ಗಳಿಸಿ 339 ರನ್ ಗುರಿ ಇಟ್ಟಿದ್ದರೆ, ಇಂಗ್ಲೆಂಡ್ 50 ಓವರುಗಳಲ್ಲಿ 8 ವಿಕೆಟ್ ಕಳೆದುಕೊಂಡು ಗಳಿಸಿದ್ದು ಕೂಡ 338 ರನ್. ಕೊನೆಯ ಕ್ಷಣದವರೆಗೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸಿದ ಈ ಪಂದ್ಯ ಕ್ರಿಕೆಟ್ ಪ್ರಿಯರಿಗೆ ಬಹುಕಾಲದಲ್ಲಿ ನೆನಪಿನಲ್ಲಿ ಉಳಿಯಲಿದೆ.
42 ಓವರುಗಳಾಗುವವರೆಗೆ ಕೇವಲ ಎರಡು ವಿಕೆಟ್ ಕಳೆದುಕೊಂಡು 281 ರನ್ ಗಳಿಸಿದ್ದ ಇಂಗ್ಲೆಂಡ್, ಮೊನಚಿಲ್ಲದ ಭಾರತದ ಬೌಲಿಂಗನ್ನು ಲೀಲಾಜಾಲವಾಗಿ ಎದುರಿಸುತ್ತ ಗೆಲುವಿನತ್ತ ಧಾಪುಗಾಲು ಹಾಕುತ್ತಿತ್ತು. 43ನೇ ಓವರಿನಲ್ಲಿ ಬೌಲಿಂಗ್ ಮಾಡಲು ಬಂದ ಜಾಹೀರ್ ಖಾನ್ ಪಂದ್ಯದ ಗತಿಯನ್ನೇ ಬದಲಾಯಿಸಿದರು. ಎರಡು ಎಸೆತಗಳಲ್ಲಿ ಭರ್ಜರಿಯಾಗಿ ಆಡಿ 171 ರನ್ ಸೇರಿಸಿದ್ದ ನಾಯಕ ಆಂಡ್ರ್ಯೂ ಸ್ಟ್ರಾಸ್ (158) ಮತ್ತು ಇಯಾನ್ ಬೆಲ್ (69) ಅವರನ್ನು ಜಾಹೀರ್ ಬಲಿ ತೆಗೆದುಕೊಂಡರು. ಕೆಲವೇ ಎಸೆತಗಳಲ್ಲಿ ಕಾಲಿಂಗ್ ವುಡ್ ಸಹ ಜಾಹೀರ್ ಸ್ಲೋ ಎಸೆತಕ್ಕೆ ಬೌಲ್ಡ್ ಆದರು.
ಈ ಹಂತದಲ್ಲಿ ಭಾರತ ಗೆಲುವಿನ ಪತಾಕೆ ಹಾರಿಸುತ್ತದೆಂದೇ ಎಲ್ಲರೂ ಭಾವಿಸಿದ್ದರು. ಸ್ಟ್ರಾಸ್ ಮತ್ತು ಬೆಲ್ ಆಡುವರವಗೆ ಶಾಂತವಾಗಿದ್ದ ಕ್ರೀಡಾಂಗಣ, ಆ ಮೂರು ವಿಕೆಟ್ ಬೀಳುತ್ತಿದ್ದಂತೆ ಕೂಗು, ಕೇಕೆಗಳಿಂದ ತುಂಬಿಕೊಂಡಿತು. ಕೊನೆಯ ಮೂರು ಓವರುಗಳಲ್ಲಿ ಇಂಗ್ಲೆಂಡಿಗೆ ಬೇಕಿದ್ದುದು 34 ರನ್. ಬಾಲಂಗೋಚಿಗಳಾದ ಯಾರ್ಡಿ, ಸ್ವಾನ್ ಪಿಯೂಶ್ ಚಾವ್ಲಾ ಅವರ ಓವರಿನಲ್ಲಿ ಒಂದೊಂದು ಸಿಕ್ಸರ್ ಗಳನ್ನೆತ್ತೆ ಪಂದ್ಯಕ್ಕೆ ಜೀವಂತಿಗೆ ತಂದಿತ್ತರು. ಕೊನೆಯ ಓವರಿನಲ್ಲಿ ಇಂಗ್ಲೆಂಡಿಗೆ ಗೆಲ್ಲಲು 14 ರನ್ ಬೇಕಿತ್ತು. ಮುನಾಫ್ ಪಟೇಲ್ ಎಸೆದ ಮೊದಲ ಎಸೆತವನ್ನೇ 10ನೇ ಆಟಗಾರ ಶಹಜಾದ್ ಭರ್ಜರಿಯಾಗಿ ಸಿಕ್ಸರ್ ಎತ್ತಿ ಭಾರತದ ಗೆಲುವಿನ ಆಸೆಯನ್ನು ಮುರುಟಿ ಹಾಕಿದರು.
ಕೊನೆಯ ಎಸೆತ ಇದ್ದಾಗ ಬೇಕಿದ್ದುದು ಕೇವಲ ಎರಡು ರನ್ ಮಾತ್ರ. ಇಡೀ ಕ್ರೀಡಾಂಗಣದ ಹೃದಯವೇ ಢವಢವ ಎನ್ನುತ್ತಿರುವಾಗ ಇಂಗ್ಲೆಂಡ್ 1 ರನ್ ಕಬಳಿಸಿದ್ದರಿಂದ ಪಂದ್ಯ ಟೈ ಆಯಿತು. ಎರಡೂ ತಂಡಗಳಿಗೆ ಗೆಲುವಿನ ಸಮನಾದ ಅವಕಾಶವಿತ್ತು. ಹೀಗಾಗಿ, ಪಂದ್ಯ ಟೈ ಆದದ್ದು ಎರಡೂ ತಂಡಗಳ ಬೆಂಬಲಿಗರಿಗೆ ನಿರಾಶೆ ಉಂಟು ಮಾಡಿದ್ದರೆ ಆಶ್ಚರ್ಯವಿಲ್ಲ. ಇದು, ಪಂದ್ಯದ ನಂತರ ಧೋನಿ ಮತ್ತು ಸ್ಟ್ರಾಸ್ ಅವರ ಮಾತುಗಳಲ್ಲಿಯೂ ವ್ಯಕ್ತವಾಯಿತು.
ಭಾರತದ ಪರ ಸಚಿನ್ ತೆಂಡೂಲ್ಕರ್ ಅವರು ಭರ್ಜರಿ ಶತಕ (120) ಬಾರಿಸಿದರೂ, ಇಂಗ್ಲೆಂಡ್ ಪರ 158 ರನ್ ಪೇರಿಸಿ ತಂಡವನ್ನು ಗೆಲುವಿನ ಹೊಸ್ತಿಲಲ್ಲಿ ತಂದಿತ್ತಿದ್ದ ಆಂಡ್ರ್ಯೂ ಸ್ಟ್ರಾಸ್ ಪಂದ್ಯದ ಪುರುಷೋತ್ತಮ ಪ್ರಶಸ್ತಿಗೆ ಭಾಜನರಾದರು. ಎರಡೂ ತಂಡಗಳು ಒಂದು ಗೆದ್ದು ಈ ಪಂದ್ಯವನ್ನು ಟೈ ಮಾಡಿಕೊಂಡಿದ್ದರಿಂದ 2 ಪಂದ್ಯಗಳಿಂದ 3 ಪಾಯಿಂಟ್ ಗಳಿಸಿವೆ.
ಸಂಕ್ಷಿಪ್ತ ಸ್ಕೋರ್
ಭಾರತ : 49.5 ಓವರಲ್ಲಿ 338 ಆಲೌಟ್ (ಸಚಿನ್ 120, ಗಂಭೀರ್ 51, ಸೆಹ್ವಾಗ್ 35 ; ಬ್ರೆಸ್ನನ್ 48ಕ್ಕೆ 5)
ಇಂಗ್ಲೆಂಡ್ : 50 ಓವರಲ್ಲಿ 8 ವಿಕೆಟ್ಟಿಗೆ 338 (ಸ್ಟ್ರಾಸ್ 158, ಬೆಲ್ 69, ಪೀಟರ್ಸನ್ 31 ; ಜಾಹೀರ್ 64ಕ್ಕೆ 3)












Click it and Unblock the Notifications