ಪಾಕ್ ನಿಂದ ಈರುಳ್ಳಿ ರಫ್ತು ನಿಷೇಧ

ಕಳೆದ ಒಂದು ದಶಕದ ಅವಧಿಯಲ್ಲಿ ಭಾರತವು ಇದೇ ಮೊದಲ ಬಾರಿಗೆ ಪಾಕಿಸ್ತಾನದಿಂದ ಈರುಳ್ಳಿ ಆಮದು ಮಾಡಿಕೊಂಡಿತ್ತು. ಭಾರತವು ಹತ್ತಿ ರಫ್ತಿಗೆ ನಿಷೇಧ ವಿಧಿಸಿರುವುದಕ್ಕೆ ಪ್ರತೀಕಾರವಾಗಿ ಪಾಕಿಸ್ತಾನವು ಈರುಳ್ಳಿ ನಿಷೇದ ಕ್ರಮ ತೆಗೆದುಕೊಂಡಿದೆ ಎನ್ನಲಾಗಿದೆ.
ಪಾಕಿಸ್ತಾನದಿಂದ ಭಾರತಕ್ಕೆ ಪ್ರತಿದಿನ 300 ಟನ್ ಗಳಷ್ಟು ಈರುಳ್ಳಿ ಬರುತ್ತಿತ್ತು. ವಾಘಾ ಗಡಿ ಮೂಲಕ ಬಹುಪಾಲು ಸರಕು ಆಮದಾಗುತ್ತಿತ್ತು. ರಫ್ತು ಕಾರಣದಿಂದ ಪಾಕಿಸ್ತಾನದಲ್ಲಿಯೂ ಈರುಳ್ಳಿ ಬೆಲೆ ಪ್ರತಿ ಕೆಜಿಗೆ 45ರಿಂದ 80 ರುಪಾಯಿಗೆ ಏರಿಕೆಯಾಗಿದೆ.
ಕಳೆದ ತಿಂಗಳು ಭಾರತಕ್ಕೆ ಈರುಳ್ಳಿ ರಫ್ತು ಮಾಡಲು ಆರಂಭಿಸಿದ ನಂತರ ಸ್ಥಳೀಯ ಮಾರುಕಟ್ಟೆಯಲ್ಲಿ ಬೆಲೆ ಏರಿಕೆಯಾಗುತ್ತಿರುವ ಕಾರಣಕ್ಕೆ ಈ ಕ್ರಮ ಕೈಗೊಳ್ಳಲಾಗಿದೆ. ದೇಶದಲ್ಲಿ ಸರಕಿನ ಕೊರತೆ ಉಂಟಾಗದಂತೆ ಮತ್ತು ಬೆಲೆ ಏರಿಕೆಗೆ ಕಡಿವಾಣ ವಿಧಿಸಲು ವಾಣಿಜ್ಯ ಸಚಿವಾಲಯವು ಈ ಕ್ರಮ ಕೈಗೊಂಡಿದೆ ಎಂದು ಪಾಕ್ ಸರ್ಕಾರಿ ವಕ್ತಾರರೊಬ್ಬರು ತಿಳಿಸಿದ್ದಾರೆ.
ಒಪ್ಪಂದದ ಅನ್ವಯ ವಾಘಾ ಗಡಿ ತಲುಪಿರುವ ಸರಕಿಗೆ ಅನುಮತಿ ನೀಡಲು ಪಾಕಿಸ್ತಾನ ಸರ್ಕಾರವನ್ನು ಒತ್ತಾಯಿಸಲಾಗುವುದು ಎಂದು ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಆನಂದ್ ಶರ್ಮಾ ಹೇಳಿಕೆ ನೀಡಿದ್ದಾರೆ.
ಇಸ್ಲಾಮಾಬಾದ್‌ನಲ್ಲಿ ಇರುವ ಹೈಕಮಿಷನರ್ ಜತೆ ಚರ್ಚಿಸಲಾಗುವುದು. ಇಂತಹ ನಿರ್ಧಾರಗಳನ್ನು ಪೂರ್ವಾನ್ವಯಗೊಳಿಸಿ ಜಾರಿಗೆ ತರಬಾರದು. ಈರುಳ್ಳಿ ತುಂಬಿದ ಟ್ರಕ್‌ಗಳಿಗೆ ಗಡಿಯಲ್ಲಿ ಸಂಚಾರ ನಿರ್ಬಂಧ ವಿಧಿಸಬಾರದು ಎಂದು ಹೇಳಿದ್ದಾರೆ.












Click it and Unblock the Notifications