ಈರುಳ್ಳಿ ಬೆಳೆಯಲ್ಲಿ ಏರಿಕೆ, ಬೆಲೆಯಲ್ಲಿ ಇಳಿಕೆ ಸಂಭವ

'ಜಲ್' ಚಂಡಮಾರುತದ ಹೊಡೆತದಿಂದಾಗಿ ಉತ್ಪತ್ತಿಯಲ್ಲಿ ವ್ಯತ್ಯಯವಾಗಿ ಕುಂಠಿತಗೊಂಡಿದ್ದ ಈರುಳ್ಳಿ ಬೆಳೆಯಲ್ಲಿ ಏರಿಕೆ ಕಂಡುಬಂದಿದ್ದು, ಮುಂದಿನ ವಾರದಲ್ಲಿ ಕಡಿಮೆ ದರದಲ್ಲಿ ಈರುಳ್ಳಿಗಳು ಲಭ್ಯವಾಗಲಿವೆ.
ಕಡಿಮೆ ಗುಣಮಟ್ಟದ ಈರುಳ್ಳಿ ಮಾರುಕಟ್ಟೆಯಲ್ಲಿ ಕೆಜಿಗೆ 15ರಿಂದ 20 ರು.ಗೆ ಸಿಗುತ್ತಿದ್ದರೂ ಉತ್ತಮ ತಳಿಯ ಈರುಳ್ಳಿ ಸಾಮಾನ್ಯರಿಂದ ದೂರವಾಗಿಯೇ ಇದೆ. ಉತ್ತಮ ಗುಣಮಟ್ಟದ ಈರುಳ್ಳಿ ಬೆಲೆ ಮಾರುಕಟ್ಟೆಯಲ್ಲಿ ಕೆಜಿಗೆ 35ರಿಂದ 40 ರು. ಇದೆ. ಮಳೆ ಕಡಿಮೆಯಾದ ನಂತರ ಕಳೆದ ತಿಂಗಳಿಂದ ಈರುಳ್ಳಿಯ ಬೆಳೆ ಉತ್ಪತ್ತಿಯಲ್ಲಿ ಏರಿಕೆ ಕಂಡುಬಂದಿದೆ.
ಈರುಳ್ಳಿಯನ್ನು ಹೆಚ್ಚಿಗೆ ಬೆಳೆಯಲಾಗುವ ಹುಬ್ಬಳ್ಳಿ, ರಾಯಚೂರು ಮತ್ತು ಬೆಂಗಳೂರಿನಲ್ಲಿ ಬೆಳೆಯ ಪ್ರಮಾಣದಲ್ಲಿ ಏರಿಕೆ ಕಂಡುಬಂದಿದೆ. ಹೀಗಾಗಿ ಅದರ ಪೂರೈಕೆಯಲ್ಲಿಯೂ ಏರಿಕೆ ಕಂಡುಬರಲಿದೆ ಎಂದು ಮಾರುಕಟ್ಟೆ ತಜ್ಞರು ಹೇಳಿದ್ದಾರೆ. ಬೆಲೆ ಏರಿಕೆಯಿಂದಾಗಿ ಇತ್ತೀಚಿನ ದಿನಗಳಲ್ಲಿ ಈರುಳ್ಳಿ ಕೊಳ್ಳುವವರ ಸಂಖ್ಯೆಯೂ ಗಣನೀಯವಾಗಿ ಕಡಿಮೆಯಾಗಿತ್ತು.
ಈರುಳ್ಳಿ ಬೆಲೆಯಲ್ಲಿನ ದರ ಇಳಿಕೆ ಗ್ರಾಹಕರಲ್ಲಿ ಸಂತಸ ತಂದಿದ್ದರೂ, ಇತರ ಬೆಳೆಗಳು ಗ್ರಾಹಕರ ಜೇಬಿಗೆ ಚುರುಕು ಮುಟ್ಟಿಸುತ್ತಿವೆ. ಕ್ಯಾರಟ್ ಅಂತೂ ಮಾರುಕಟ್ಟೆಯ ಕಿಂಗ್ ಆಗಿ ಮೆರೆದಾಡುತ್ತಿದೆ. ಕೆಲ ದಿನಗಳ ಹಿಂದೆ ಕೆಜಿಗೆ 30 ರು.ಗೆ ಸಿಗುತ್ತಿದ್ದ ಕ್ಯಾರಟ್ ರೇಟ್ ಡಬಲ್ ಆಗಿದೆ. ಕ್ಯಾರಟ್ ಬರೀ ಹದಿನೈದು, ಬರೀ ಹದಿನೈದು ಅಂತ ಕೂಗುತ್ತಿದ್ದ ತಳ್ಳುಗಾಡಿಯವನ ಬಳಿ ಹೋದರೆ ಸಿಗುವುದು ಬರೀ ಕಾಲು ಕೆಜಿ ಮಾತ್ರ!












Click it and Unblock the Notifications