ರಾಜೀವ್ ಚಂದ್ರಶೇಖರ್ ಗೆ ಟಾಟಾ ಖಡಕ್ ಉತ್ತರ

2ಜಿ ತರಂಗಗುಚ್ಛದ ವ್ಯವಹಾರದಲ್ಲಿ ತೊಡಗಿಕೊಳ್ಳಲು ರತನ್ ಟಾಟಾ ಅವರು ಮೂರನೇ ವ್ಯಕ್ತಿಯ (ನೀರಾ ರಾಡಿಯಾ) ಸಹಾಯ ಪಡೆದದ್ದೇಕೆ ಎಂದು ಪ್ರಶ್ನಿಸಿದ್ದರು. ಮತ್ತು ಈ ಅವ್ಯವಹಾರದಿಂದಾಗಿ ದೇಶದ ಬೊಕ್ಕಸಕ್ಕೆ ಸುಮಾರು 19074.8 ಕೋಟಿ ರು.ಯಷ್ಟು ನಷ್ಟವಾಗಿದೆ ಎಂದು ಗಂಭೀರವಾಗಿ ಆರೋಪಿಸಿದ್ದರು. ರತನ್ ಟಾಟಾ ಅಂಥವರು ಬದಲಾವಣೆಯ ಹರಿಕಾರರಾಗಬೇಕೆ ವಿನಃ ಇಂಥ ಹಗರಣಗಳಿಗೆ ಮೇವು ಹಾಕಬಾರದು ಎಂದು ರಾಜೀವ್ ಚಂದ್ರಶೇಖರ್ ಪತ್ರ ಬರೆದಿದ್ದರು.
ರಾಜೀವ್ ಪತ್ರ : ರತನ್ ಟಾಟಾ ಅವರೇ, ಏನ್ ಸ್ವಾಮಿ ಇದೂ?
ಸಾಮಾನ್ಯವಾಗಿ, ಸಾಮಾನ್ಯ ಅಸಾಮಾನ್ಯರೆನ್ನದೆ ಯಾರೇ ಪತ್ರ ಬರೆದರೂ ತಪ್ಪದೆ ಉತ್ತರಿಸುವ ಗುಣವನ್ನು ಹೊಂದಿರುವ ರತನ್ ಟಾಟಾ ಅವರು ರಾಜೀವ್ ಅವರಿಗೆ ಬರೆದ ಉತ್ತರದಲ್ಲಿ ಎಲ್ಲ ಆರೋಪಗಳನ್ನು ಸಾರಾಸಗಟಾಗಿ ತಳ್ಳಿಹಾಕಿದ್ದಾರೆ. 2ಜಿ ಹಗರಣಕ್ಕೆ ಸಂಬಂಧಿಸಿದಂತೆ ಸ್ಪಷ್ಟೀಕರಣ ನೀಡಿರುವ ಟಾಟಾ ಅವರು, ಈ ವ್ಯವಹಾರದಲ್ಲಿ ಟಾಟಾ ಟೆಲಿಸರ್ವೀಸಸ್ ಲಿ. ಯಾವುದೇ ಲಾಭ ಪಡೆದಿಲ್ಲ. ಬದಲಾಗಿ, ಟಾಟಾ ಟೆಲಿಸರ್ವೀಸರ್ ಒಂದೇ ಕಂಪನಿ ದೂರಸಂಪರ್ಕ ಇಲಾಖೆಯ ಎಲ್ಲ ಪ್ರಶ್ನೆಗಳಿಗೆ ಪ್ರತಿಕ್ರಿಯೆ ನೀಡಿದೆ ಮತ್ತು ತರಂಗಗುಚ್ಛವನ್ನು ಹಿಂದಕ್ಕೆ ನೀಡಿದೆ ಎಂದು ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ. [ವಿಡಿಯೋ ನೋಡಿರಿ]
ಎನ್ ಡಿ ಎ ಆಡಳಿತ ಇರುವಾಗಲೇ ದೂರಸಂಪರ್ಕ ಕಂಪನಿಗಳಿಂದ ಹೆಚ್ಚಿನ ಅವ್ಯವಹಾರ ನಡೆದಿತ್ತು. ಅವೇ ಕಂಪನಿಗಳು ಸರಕಾರದ ನೀತಿಯನ್ನು ಉಲ್ಲಂಘಿಸಿದ್ದವು ಎಂದು ಟಾಟಾ ಅವರು ಪ್ರತ್ಯಾರೋಪ ಮಾಡಿದ್ದಾರೆ. ಸರಕಾರ ಅವಕಾಶ ನೀಡಿದಾಗ ಮಾತ್ರ ದೂರಸಂಪರ್ಕ ವ್ಯವಹಾರಗಳಿಗೆ ಟಾಟಾ ಕಂಪನೀ ಕೈಹಾಕಿದೆ ಮತ್ತು ಸರಕಾರದ ನೀತಿಯನ್ನು ಎಂದೂ ಉಲ್ಲಂಘಿಸಿಲ್ಲ ಎಂದು ಪತ್ರದಲ್ಲಿ ನಮೂದಿಸಿದ್ದಾರೆ.
ರಾಜೀವ್ ಚಂದ್ರಶೇಖರ್ ಅವರಿಗೆ ಬಿಜೆಪಿ ಬಗ್ಗೆ ಒಲವಿರುವುದು ಎಲ್ಲರಿಗೂ ತಿಳಿದ ವಿಚಾರ. ಅವರ ಪತ್ರ ರಾಜಕೀಯವಾಗಿ ಪ್ರೇರೇಪಿತವಾಗಿದ್ದು, ಪ್ರಧಾನ ಮಂತ್ರಿ ಡಾ. ಮನಮೋಹನ ಸಿಂಗ್ ಅವರನ್ನು ಮುಜುಗರಕ್ಕೀಡು ಮಾಡಲೆಂದೇ ಬರೆಯಲಾಗಿದೆ ಎಂದು ರತನ್ ಟಾಟಾ ಅವರು ರಾಜೀವ್ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.











Click it and Unblock the Notifications