ಜಿಪಂ ಚುನಾವಣೆ : ಪದಾಧಿಕಾರಿಗಳೊಂದಿಗೆ ಗಡ್ಕರಿ ಚರ್ಚೆ

ಡಿಸೆಂಬರ್ 26 ರಿಂದ ಆರಂಭವಾಗುವ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯತಿ ಚುನಾವಣೆಗೆ ರಣತಂತ್ರ ಹೆಣೆಯಲು ಗಡ್ಕರಿ ಮತ್ತು ಜೈಟ್ಲಿ ಆಗಮಿಸಿದ್ದಾರೆ ಎಂದು ಮೇಲ್ನೋಟಕ್ಕೆ ಹೇಳಲಾಗಿದೆಯಾದರೂ, ಒಳಮರ್ಮ ಮಾತ್ರ ಬೇರೆಯಾಗಿದೆ ಎಂದು ಪಕ್ಷದ ಇನ್ನೊಂದು ವರ್ಗ ಹೇಳುತ್ತಿದೆ. ಇತ್ತೀಚೆಗೆ ಮುಖ್ಯಮಂತ್ರಿ ಸೇರಿದಂತೆ ಸಂಪುಟ ಅನೇಕ ಸಚಿವರ ಮೇಲೆ ಭೂಹಗರಣದ ರಾಡಿ ಮೆತ್ತಿಕೊಂಡಿದ್ದು, ಇದರಿಂದ ಪಕ್ಷಕ್ಕೆ ಹಾನಿಯುಂಟಾಗಿದೆ ಎಂಬುದು ವರಿಷ್ಠರ ಅಸಮಾಧಾನ. ಹೀಗಾಗಿ ಪಕ್ಷಕ್ಕೆ ಆಗಿರುವ ಹಾಗೂ ಆಗುತ್ತಿರುವ ಡ್ಯಾಮೇಜ್ ಕಂಟ್ರೋಲ್ ಗಾಗಿ ಗಡ್ಕರಿ, ಅರುಣ್ ಜಪ ಮಾಡುವುದು ಖಾತ್ರಿಯಾಗಿದೆ.
ಮುಖ್ಯವಾಗಿ ಕೆಐಎಡಿಬಿ ಹಗರಣದ ಆರೋಪಿಯಾಗಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ಕಟ್ಟಾ ಸುಬ್ರಮಣ್ಯ ನಾಯ್ಡು ಹಾಗೂ ಅವರ ಮಗ ಕಟ್ಟಾ ಜಗದೀಶ್ ಪ್ರಕರಣ, ರಾಜ್ಯ ಸರಕಾರ ಪ್ರತಿ ನಡೆಯಲ್ಲೂ ಮೂಗು ತೂರಿಸುತ್ತಿರುವ ರಾಜ್ಯಪಾಲರ ಎಚ್ ಆರ್ ಭಾರದ್ವಾಜ್ ಅವರ ಬಗ್ಗೆ ಚರ್ಚೆ ನಡೆಯಲಿದೆ. ಜೊತೆಗೆ ಮುಖ್ಯಮಂತ್ರಿ ಮೇಲೆ ಬಂದಿರುವ ಭೂಹಗರಣ ಹಾಗೂ ಅವರ ಮಕ್ಕಳಿಗೆ ನೀಡಿದ್ದ ನಿವೇಶನಗಳ ಬಗ್ಗೆ ಪಕ್ಷ ನೀಡಿರುವ ವರದಿಯ ಬಗ್ಗೆ ಪರಿಶೀಲನೆ ನಡೆಯಲಿದೆ.
ಮುಂಬರುವ ತಾಪಂ,ಜಿಪಂ ಚುನಾವಣೆಗಳನ್ನು ಗೆಲ್ಲಲೇಬೇಕು ಎಂಬ ಸ್ಥಿತಿ ಬಿಜೆಪಿಗೆ ಉಂಟಾಗಿದ್ದು, ಆ ಬಗ್ಗೆ ಹೆಚ್ಚಿನ ಚರ್ಚೆ ನಡೆಸುವುದು ಪ್ರಮುಖವಾಗಿದೆ. ಹಗರಣದಿಂದ ಕುಖ್ಯಾತಿ ಗಳಿಸಿರುವ ಯಡಿಯೂರಪ್ಪ ನೇತೃತ್ವದ ಸರಕಾರ ಆಕಸ್ಮಾತ್ ಆಗಿ ಜಿಪಂ ಚುನಾವಣೆಯಲ್ಲಿ ಸೋಲುಂಡರೆ, ಪ್ರತಿಪಕ್ಷಗಳು ಸರಕಾರದ ವಿರುದ್ಧ ಇನ್ನಷ್ಟು ಸವಾರಿ ಮಾಡುವು ಸಾಧ್ಯತೆಯೂ ಇದೆ. ಹೀಗಾಗಿ ಬಿಜೆಪಿ ಸರಕಾರಕ್ಕೆ ಈ ಚುನಾವಣೆ ಮಾಡು ಇಲ್ಲವೇ ಮಡಿ ಎಂದರೆ ಸುಳ್ಳಲ್ಲ.












Click it and Unblock the Notifications