ಡಿ 5ರಿಂದ ರಾಷ್ಟ್ರವ್ಯಾಪಿ ಲಾರಿ ಮುಷ್ಕರ ಎಚ್ಚರಿಕೆ

ಹೆದ್ದಾರಿ ಸುಂಕ ಕಡಿತ, ಹೆದ್ದಾರಿಗಳಲ್ಲಿ ಲಾರಿಗಳಿಂದ ಸಂಗ್ರಹಿಸುವ ಟೋಲ್ ನಲ್ಲಿ ಕಡಿತ ಕೂಡ ಲಾರಿ ಮಾಲೀಕರ ಸಂಘದ ಬೇಡಿಕೆಯಲ್ಲಿದೆ. ಹಲವು ಬಾರಿ ನಾವು ಮನವಿಯನ್ನು ಸಲ್ಲಿಸಿದ್ದರೂ ಸರಕಾರ ನಮ್ಮ ಬೇಡಿಕೆಗೆ ಸ್ಪಂದಿಸದ ಕಾರಣ ಮುಷ್ಕರ ನಡೆಸುವ ತೀರ್ಮಾನಕ್ಕೆ ಬಂದಿದ್ದೇವೆ ಎಂದು ಅಖಿಲ ಭಾರತ ಮೋಟಾರ್ ಟ್ರಾನ್ಸ್ ಪೋರ್ಟ್ ಕಾಂಗ್ರೆಸ್ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಟೋಲ್ ಸಮಸ್ಯೆ ಬಗೆಹರಿಸುವ ಬಗ್ಗೆ ಕೇಂದ್ರ ಸರಕಾರ ಆಸಕ್ತಿ ತೋರದೇ ಲಾರಿ ಮಾಲಿಕರನ್ನು ಮಾತುಕತೆಗೂ ಆಹ್ವಾನಿಸದೇ ಅಸಡ್ಡೆ ತೋರಿದೆ. ಹೆದ್ದಾರಿಗಳಲ್ಲಿ ಹೆಚ್ಚು ಟೋಲ್ ಸಂಗ್ರಹ ಮಾಡಲಾಗುತ್ತಿದ್ದು, ಅದನ್ನು ಕಡಿತ ಮಾಡಬೇಕು. ಲಾರಿ ಮಾಲೀಕರ ಮೇಲೆ ದೌರ್ಜನ್ಯ ತಡೆಯಬೇಕು. ಡಿ 5ರಿಂದ ರಾಜ್ಯದಲ್ಲಿಯೂ ಲಾರಿಗಳು ರಸ್ತೆಗೆ ಇಳಿಯುವುದಿಲ್ಲ ಎಂದು ಸಂಘ ತಿಳಿಸಿದೆ.
ಅಶೋಕ್ ಹೇಳಿಕೆ : ಲಾರಿ ಮಾಲೀಕರು ಕೇಂದ್ರ ಸರಕಾರದ ಜತೆ ಮಾತುಕತೆ ನಡೆಸಿ ತಮ್ಮ ಸಮಸ್ಯೆ ಇತ್ಯರ್ಥಪಡಿಸಿಕೊಳ್ಳುವುದು ಸೂಕ್ತವಾದ ಕ್ರಮ. ಅದು ಬಿಟ್ಟು ಮುಷ್ಕರದ ಹಾದಿ ಹಿಡಿಯುವುದು ಬೇಡ. ವರ್ಷಕ್ಕೆ ಐದು ಬಾರಿ ಲಾರಿ ಮಾಲೀಕರು ಮುಷ್ಕರದ ಬ್ಲ್ಯಾಕ್ ಮೇಲ್ ತಂತ್ರ ಅನುಸರಿಸುವ ಬದಲು ಮಾತುಕತೆ ನಡೆಸಿ, ಲಾರಿ ಮಾಲೀಕರ ಬೇಡಿಕೆಯನ್ನು ಬಹುಪಾಲು ಕೇಂದ್ರ ಸರಕಾರ ಈಗಾಗಲೇ ಈಡೇರಿಸಿದೆ. ಪದೇಪದೇ ಮುಷ್ಕರ ನಡೆಸಿದರೆ ಜನರಿಗೆ ತೊಂದರೆಯಾಗುತ್ತದೆ ಎಂದು ಸಾರಿಗೆ ಮತ್ತು ಗೃಹ ಸಚಿವ ಆರ್ ಅಶೋಕ್ ಹೇಳಿಕೆ ನೀಡಿದ್ದಾರೆ.












Click it and Unblock the Notifications