ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಪರೇಷನ್ ಕಮಲಕ್ಕೆ ಮತ್ತೊಂದು ಕೈ ಹುದ್ದರಿ ಬಲಿ

By Prasad
|
Google Oneindia Kannada News

Operation Lotus continues
ಬೆಂಗಳೂರು, ಅ. 19 : ಬಿಜೆಪಿ ಶಾಸಕರ ಅನರ್ಹತೆಗೆ ಸಂಬಂಧಿದಂತೆ ಅಂತಿಮ ತೀರ್ಪು ಬರಲು ಇನ್ನು ಒಂದು ದಿನ ಬಾಕಿ ಇರುವಾಗಲೇ ಬಿಜೆಪಿ 'ಆಪರೇಷನ್ ಕಮಲ'ಕ್ಕೆ ಕೈಹಾಕಿದ್ದು ಕೈಬಣದ ಒಂದು ಹುದ್ದರಿಯನ್ನು ಬಲಿ ತೆಗೆದುಕೊಂಡಿದೆ.

ರಾಜ್ಯ ಕಾಂಗ್ರೆಸ್ ನಾಯಕರೊಂದಿಗೆ ಕಣ್ಣಾಮುಚ್ಚಾಲೆ ಆಡುತ್ತಿದ್ದ ಜಗಳೂರಿನ ಶಾಸಕ ಎಸ್.ವಿ. ರಾಮಚಂದ್ರ ಅವರೇ ಆಪರೇಷನ್ ಮಾಡಿಸಿಕೊಂಡಿರುವವರು. ರಾಮಚಂದ್ರ ಅವರು ವಿಧಾನಸಭೆ ಸಭಾಧ್ಯಕ್ಷ ಕೆಜಿ ಬೋಪಯ್ಯ ಅವರಿಗೆ ರಾಜೀನಾಮೆ ಸಲ್ಲಿಸಿದ್ದು, ಕಾಂಗ್ರೆಸ್ ನ ನಾಯಕರ ಅನುಮಾನಗಳಿಗೆ ಕೊನೆ ಹಾಡಿದ್ದಾರೆ.

ಮತ್ತೊಬ್ಬ ವಿರೋಧ ಪಕ್ಷದ ಶಾಸಕನನ್ನು ತನ್ನ ತೆಕ್ಕೆಗೆ ಸೇರಿಸಿಕೊಳ್ಳುವ ಮೂಲಕ ಹೈಕೋರ್ಟಿನ ಅಂತಿಮ ತೀರ್ಪು ಬರುವ ಮುನ್ನವೇ ಸಂಖ್ಯೆ ಏರಿಸಿಕೊಳ್ಳುವತ್ತ ಬಿಜೆಬಿ ತನ್ನ ಚಿತ್ತ ಹರಿಸಿದೆ. ಬಿಜೆಪಿಯವರೇ ಆದ ಬೋಪಯ್ಯ ಕೂಡಲೆ ರಾಮಚಂದ್ರ ಅವರ ರಾಜೀನಾಮೆಯನ್ನು ಸ್ವೀಕರಿಸಿದ್ದಾರೆ.

ಮೂಲ ಶಾಸಕರಿಗೆ ನಿರಾಸೆ? :
ಭಿನ್ನಮತ ಭುಗಿಲೆದ್ದ ನಂತರ ಹಾಗೂ ಹೀಗೂ ವಿಶ್ವಾಸಮತ ಸಾಬೀತುಪಡಿಸಿ 'ಉಸ್ಸಪ್ಪ' ಅಂತ ಅನ್ನುತ್ತಿರುವ ಬಿಜೆಪಿ ಮತ್ತೆ ಆಪರೇಷನ್ ಕಮಲಕ್ಕೆ ಕೈಹಾಕಿರುವುದು ಅನೇಕ ಮಂತ್ರಿಗಿರಿ ಆಕಾಂಕ್ಷಿಗಳು ಕೆಂಡಕಾರುವಂತೆ ಮಾಡಿದೆ. ಇದಕ್ಕೆ ಕಾರಣ ಆಪರೇಷನ್ ಕಮಲದ ಮುಖಾಂತರ ತೆಕ್ಕೆಗೆ ತೆಗೆದುಕೊಂಡವರಿಗೇ ಮಣೆ ಹಾಕಿ ಸಚಿವ ಸ್ಥಾನ ಕಲ್ಪಿಸಿಕೊಡುತ್ತಿರುವುದು.

ವಿಶ್ವಾಸಮತ ಯಾಚನೆಯಲ್ಲಿ ಪಕ್ಷಕ್ಕೆ ಬೆಂಬಲ ನೀಡಿದ್ದ ಪಕ್ಷೇತರ ಸಚಿವ ವರ್ತೂರು ಪ್ರಕಾಶ್ ಮತ್ತು ಕಮಲ ಸೇರಿಕೊಂಡಿರುವ ಚನ್ನಪಟ್ಟಣದ ಎಂಸಿ ಅಶ್ವತ್ಥ್ ಅವರಿಗೆ ಸಚಿವಸ್ಥಾನದ ಆಮಿಷ ಒಡ್ಡಿರುವುದು ಬಿಜೆಪಿಯ ಮೂಲ ಶಾಸಕರಿಗೆ ನುಂಗಲಾಗದ ಬಿಸಿ ತುಪ್ಪವಾಗಿ ಪರಿಣಮಿಸಿದೆ. ಇದಕ್ಕೆ ಪುಷ್ಟಿಯೆಂಬಂತೆ, ಸಂಪುಟ ವಿಸ್ತರಣೆ ಮಾಡುತ್ತೇನೆಂದು ಹೇಳಿರುವ ಯಡಿಯೂರಪ್ಪನವರು ಮತ್ತೆ ಭಿನ್ನಮತದ ಕಿಡಿ ಹಚ್ಚುತ್ತಿರುವವರಿಗೆ ತಣ್ಣಗೆ ಕೂಡಲು ಹೇಳಿದ್ದಾರೆ. ದೆಹಲಿಯ ಹಿರಿಯರು ಎಲ್ಲವನ್ನೂ ನೋಡುತ್ತಿದ್ದಾರೆ, ಹೀಗಾಗಿ ತೆಪ್ಪಗೆ ಕೂಡಿರಿ ಎಂದು ಹೇಳಿ ತಮ್ಮ ಎಂದಿನ ವರ್ತನೆ ಮುಂದುವರಿಸಿದ್ದಾರೆ.

ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು, ಬಿಜೆಪಿ ಕುದುರೆ ವ್ಯಾಪರಕ್ಕೆ ಕೈಹಾಕಿದ್ದು, ತಾಂಬೂಲದ ಮೇಲೆ ದಕ್ಷಿಣೆ ಇಟ್ಟಂತೆ, ಮಂತ್ರಿಗಿರಿ ಜೊತೆಗೆ 50 ಕೋಟಿ ರು. ಆಮಿಷ ಒಡ್ಡುತ್ತಿದ್ದಾರೆ ಎಂದು ಆರೋಪಿಸಿದ್ದರು. ಇದರಲ್ಲಿ ಶೋಭಾ ಕರಂದ್ಲಾಜೆ ಅವರ ಕೈವಾಡವೂ ಇದೆ ಎಂದು ಹೇಳಿದ್ದರು. ಇದಕ್ಕೆ ಪ್ರತಿಕ್ರಿಯೆಯಾಗಿ, 'ಸಿದ್ದರಾಮಯ್ಯ ಅಯ್ಯೋ ಪಾಪ' ಎಂದು ಶೋಭಾ ಕರಂದ್ಲಾಜೆ ಅವರು ಲೇವಡಿ ಮಾಡಿದ್ದರು.

ಕರ್ನಾಟಕ ಹೈಕೋರ್ಟ್ ನಲ್ಲಿ ಅ.20ರಂದು ಏಕಸದಸ್ಯ ಪೀಠದ ಮುಂದೆ ವಿಚಾರಣೆಗೆ ಬರುತ್ತಿರುವ ಬಿಜೆಪಿ ಶಾಸಕರ ಅನರ್ಹತೆ ಪ್ರಕರಣದ ತೀರ್ಪು ಅನರ್ಹಗೊಂಡವರ ವಿರುದ್ಧ ಬಂದರೆ ಬಿಜೆಪಿ ಸುರಕ್ಷಿತ. ಇಲ್ಲದಿದ್ದರೆ ಆಪರೇಷನ್ ಮುಂದುವರಿಸದೆ ಗತ್ಯಂತರವೇ ಇಲ್ಲ. ಆಪರೇಷನ್ ಕಮಲ ಮುಂದುವರಿಯುವ ಎಲ್ಲ ಸೂಚನೆಗಳಿದ್ದು, ಇನ್ನೂ ಐದಾರು ಕೈ ಪಾಳಯದ ಶಾಸಕರು ಬಿಜೆಪಿ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎಂದು ಶಾಸಕರ ಭವನದ ಗೋಡೆಗಳು ಪ್ರತಿಧ್ವನಿಸುತ್ತಿವೆ.

ಕಾಂಗ್ರೆಸ್ ನಿಂದ ಧರಣಿ : ಇತ್ತೀಚೆಗೆ ಬಂದಿರುವ ವರದಿಯ ಪ್ರಕಾರ, ಎಸ್ ವಿ ರಾಮಚಂದ್ರ ಅವರ ರಾಜೀನಾಮೆಯಿಂದ ಎಚ್ಚೆತ್ತುಕೊಂಡಿರುವ ಕಾಂಗ್ರೆಸ್ ಆಪರೇಷನ್ ಕಮಲವನ್ನು ವಿರೋಧಿಸಿ ಯಡಿಯೂರಪ್ಪ ಅವರ ಮನೆಯ ಮುಂದೆ ಧರಣಿ ನಡೆಸಲು ನಿರ್ಧರಿಸಿದೆ. ಆಪರೇಷನ್ ಕಮಲದ ಅವಶ್ಯಕತೆಯೇ ಇಲ್ಲ ಎಂದು ದೆಹಲಿಯಲ್ಲಿ ಹೇಳಿದ್ದ ಯಡಿಯೂರಪ್ಪನವರು ನೇರವಾಗಿ ಕಾಂಗ್ರೆಸ್ ಬಣಕ್ಕೆ ಕೈಹಾಕಿರುವುದು ಕಾಂಗ್ರೆಸ್ ನಲ್ಲಿ ಭಾರೀ ಆಕ್ರೋಶಕ್ಕೆ ಕಾರಣವಾಗಿದೆ. ಹೊಟೇಲ್ ಚಾನ್ಸರಿಯಲ್ಲಿ ಸಭೆ ನಡೆಸಿದ ನಂತರ ಕಾಂಗ್ರೆಸ್ ನಾಯಕರುಗಳಾದ ಸಿದ್ದರಾಮಯ್ಯ, ಡಿಕೆ ಶಿವಕುಮಾರ್, ಆರ್ ವಿ ದೇಶಪಾಂಡೆ ಮಂತಾದವರು ಮುಖ್ಯಮಂತ್ರಿಗಳ ಮನೆಯ ಮುಂದೆ ಧರಣಿ ನಡೆಸಲಿದ್ದಾರೆ.

ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್ | ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X