ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿಜೆಪಿಗೆ ವರ್ತೂರು ಪ್ರಕಾಶ್ ಬೆಂಬಲ ಘೋಷಣೆ

By Prasad
|
Google Oneindia Kannada News

Varthur Prakash
ಬೆಂಗಳೂರು, ಅ. 13 : ರಾಜಕೀಯ ಅಂದ್ರೆ ಇಷ್ಟೇನೆ. ಇಲ್ಲಿ ಯಾರೂ ಮಿತ್ರರಲ್ಲ, ಯಾರೂ ಶತ್ರುವಲ್ಲ. ನಿನ್ನೆ ಬದ್ಧ ವೈರಿಯಾಗಿದ್ದವರು ಇಂದು ಹೆಗಲಮೇಲೆ ಕೈಹಾಕಿ ನಿಂತಿರುತ್ತಾರೆ ಎಂಬುದಕ್ಕೆ ನಿದರ್ಶನವಾಗಿ ಬಿಜೆಪಿ ಸರಕಾರವನ್ನು ಶತಾಯಗತಾಯ ಬೀಳಿಸಲು ಹೊರಟಿದ್ದ ಕೋಲಾರದ ಪಕ್ಷೇತರ ಶಾಸಕ ವರ್ತೂರು ಪ್ರಕಾಶ್ ಕಾಂಗ್ರೆಸ್ಸಿಗೆ ಕೈಕೊಟ್ಟು ಬಿಜೆಪಿ ಜೊತೆಗೆ ಹ್ಯಾಂಡ್ ಶೇಕ್ ಮಾಡಿದ್ದಾರೆ.

ಒಂದಾನೊಂದು ಕಾಲದಲ್ಲಿ ಸಿದ್ದರಾಮಯ್ಯನವರ ಆತ್ಮೀಯ ಶಿಷ್ಯನಾಗಿದ್ದ ವರ್ತೂರು ಪ್ರಕಾಶ್ ಇಂದು ಬಿಜೆಪಿಯ ನಾಯಕ ಜನಾರ್ದನ ರೆಡ್ಡಿಯ ಆತ್ಮೀಯರಾಗಿದ್ದಾರೆ. ಸಿದ್ದರಾಮಯ್ಯನವರೇ ಮುಂದಿನ ಮುಖ್ಯಮಂತ್ರಿ ಎಂದು ಘೋಷಣೆ ಕೂಗುತ್ತಿದ್ದ ಪ್ರಕಾಶ್ ಈಗ ಸಿದ್ದು ಅವಕಾಶವಾದಿ ಎಂದು ಜರಿಯುತಿದ್ದಾರೆ. ಲೈಫು ಇಷ್ಟೇನೆ ಎಂದು ನಿರಾಶಾವಾದಿಯಾಗಿ ಹಾಡುವವನಿಗೆ ಇಲ್ಲಿ ಅವಕಾಶವಿಲ್ಲ.

ಇಂದು, ಹಠಾತ್ತನೆ ಬಿಜೆಪಿ ಪಾಳಯದಲ್ಲಿ ಕಾಣಿಸಿಕೊಂಡಿರುವ ವರ್ತೂರು ಪ್ರಕಾಶ್ ಅ.14ರ ವಿಶ್ವಾಸಮತ ಕೋರಿಕೆಯಲ್ಲಿ ಬಿಜೆಪಿಗೆ ಬೆಂಬಲ ನೀಡುವುದಾಗಿ ಹೇಳಿ ವಿರೋಧಪಕ್ಷದಲ್ಲಿ ಚಳಿ ಹುಟ್ಟಿಸಿದ್ದಾರೆ. ಗೋಲ್ಡನ್ ಪಾಮ್ ರೆಸಾರ್ಟಿಗೆ ಜನಾರ್ದನ ರೆಡ್ಡಿ ಜೊತೆ ತಲುಪಿರುವ ವರ್ತೂರು ಪತ್ರಿಕಾಗೋಷ್ಠಿಯಲ್ಲಿ ಬಿಜೆಪಿ ತಾವು ನೀಡಿರುವ ಬೆಂಬಲವನ್ನು ಪ್ರಕಟಿಸಲಿದ್ದಾರೆ.

ಒಂದು ಕಡೆ ನಾಳೆ ನಡೆಯಲಿರುವ ಅಧಿವೇಶನದಲ್ಲಿ ಅನರ್ಹರಾಗಿದ್ದ ಪಕ್ಷೇತರರಿಗೆ ಮತದಾನ ಮಾಡುವ ಹಕ್ಕು ಇಲ್ಲ ಎಂದು ಹೈಕೋರ್ಟ್ ಹೇಳಿದ್ದರೆ, ಇನ್ನೊಂದೆಡೆ ಉಳಿದಿದ್ದ ಏಕೈಕ ಪಕ್ಷೇತರ ಶಾಸಕ ಬಿಜೆಪಿ ಬಣ ಸೇರಿಕೊಂಡಿದ್ದಾರೆ. ಜನಾರ್ದನ ರೆಡ್ಡಿ ನಡೆಸಿರುವ 'ಕುದುರೆ ವ್ಯಾಪಾರ' ಇಲ್ಲಿ ಫಲ ನೀಡಿದೆ. ಜೊತೆಗೆ ಕಾಂಗ್ರೆಸ್ ಹೈಕಮಾಂಡ್ ವಿರುದ್ಧ ಸಿಡಿದೆದ್ದಿರುವ ಕಾಂಗ್ರೆಸ್ ಶಾಸಕರು ಸಾಮೂಹಿಕ ರಾಜೀನಾಮೆ ನೀಡುವುದಾಗಿ ಬೆದರಿಸುತ್ತಿರುವುದು ರಾಜ್ಯದ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ.

ಇಂದು ನಡೆದಿರುವ ಎಲ್ಲಾ ಬೆಳವಣಿಗೆಗಳಿಂದ ಜೆಡಿಎಸ್ ನಾಯಕ ಎಚ್ ಡಿ ಕುಮಾರಸ್ವಾಮಿ ಕಂಗೆಟ್ಟಿರುವಂತೆ ಕಾಣಿಸುತ್ತಿದೆ. ಪಕ್ಷೇತರರಿಗೆ ಮತದಾನದ ಹಕ್ಕು ನೀಡಬೇಕೆಂದು ಕೇಳಿದ್ದ ಕುಮಾರ್ ಗೆ ಹೈಕೋರ್ಟ್ ಆದೇಶ ಸಹಜವಾಗಿ ನಿರಾಶೆ ತಂದಿದೆ. ಸಂಜೆ ಅವರು ರಾಜ್ಯಪಾಲರನ್ನು ಭೇಟಿ ಮಾಡಲು ರಾಜಭವನಕ್ಕೆ ಧಾವಿಸಿದ್ದಾರೆ ಎಂದು ತಿಳಿದುಬಂದಿದೆ. ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ ಕೂಡ ರಾಜ್ಯಪಾಲರ ಭೇಟಿಗೆ ಹೋಗಿದ್ದಾರೆ. ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಜೊತೆ ಅವರಿಬ್ಬರು ಏನು ಚರ್ಚಿಸಲಿದ್ದಾರೆ ಎಂಬುದು ತಿಳಿದುಬಂದಿಲ್ಲ.

ದಟ್ಸ್ ಕನ್ನಡ ಫ್ಯಾನ್ ಕ್ಲಬ್ ಸೇರಿರಿ | ಮೊಬೈಲಲ್ಲಿ ಕನ್ನಡ ಸುದ್ದಿ ಓದಿರಿ | ಹೂವಿನಂಗಡಿ 24/7 | ಇಂಗ್ಲಿಷ್ ಲಿಪಿಯಲ್ಲಿ ಕನ್ನಡ ಎಸ್ಎಮ್ಎಸ್

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X