ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಲಿಥಿನ್ ಬ್ಯಾಗ್ ನಿಷೇಧ : ಉಡುಪಿ ಮಾದರಿ

By Prasad
|
Google Oneindia Kannada News

Udupi bans polythene bags
ಬೆಂಗಳೂರು, ಆ. 1 : ಬೆಂಗಳೂರು, ಮೈಸೂರು, ಮಂಗಳೂರಿನಂಥ ದೊಡ್ಡ ನಗರಗಳು ಪರಿಸರದ ಉಳಿವಿಗಾಗಿ ಮಾಡಲಾಗದ ಮಹತ್ ಕಾರ್ಯವನ್ನು ಉಡುಪಿಯಂಥ ಸಣ್ಣ ನಗರ ಮಾಡಿ ತೋರಿಸಿದೆ. ಪರಿಸರಕ್ಕೆ ಕಂಟಕವಾಗಿರುವ ಪಾಲಿಥಿನ್ ಬ್ಯಾಗ್ ಗಳನ್ನು ಉಡುಪಿ ನಗರಾಡಳಿತ ನಿಷೇಧಿಸಿ ಇತರ ನಗರಗಳಿಗೆ ಮೇಲ್ಪಂಕ್ತಿ ಹಾಕಿಕೊಟ್ಟಿದೆ.

ಅಕ್ಷರತೆಯಲ್ಲಿ ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದಿರುವುದು ಪಾಲಿಥಿನ್ ಬ್ಯಾಗುಗಳನ್ನು ನಿಷೇಧಿಸುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಈ ಬ್ಯಾಗ್ ಗಳ ಬಳಕೆಯಿಂದಾಗುವ ದುಷ್ಪರಿಣಾಮಗಳ ಬಗ್ಗೆ ಜಾಗೃತಿಯನ್ನು ಇಲ್ಲಿನ ಜನತೆಯಲ್ಲಿ ಮೂಡಿಸಿದ್ದರಿಂದ ಪಾಲಿಥಿನ್ ಬ್ಯಾಗ್ ಗಳ ನಿಷೇಧ ಸಾಧ್ಯವಾಗಿದೆ. ಆದರೆ, ಇದು ಸುಲಭವಾಗಿರಲಿಲ್ಲ. ಇವುಗಳ ಬಳಕೆಯಿಂದಾಗುವ ಅನಾಹುತಗಳ ಬಗ್ಗೆ ಅನೇಕ ವಿಚಾರ ಸಂಕಿರಣ, ಕಮ್ಮಟಗಳನ್ನು ನಡೆಸಿದ ನಂತರ ನಗರಾಡಳಿತ ಈ ನಿರ್ಧಾರಕ್ಕೆ ಬಂದಿತು ಎಂದು ನಗರದ ಆಯುಕ್ತ ಗೋಕುಲದಾಸ್ ನಾಯಕ್ ಹೇಳಿದ್ದಾರೆ.

40 ಮೈಕ್ರಾನ್ ವರೆಗಿನ ಪಾಲಿಥಿನ್ ಬ್ಯಾಗುಗಳನ್ನು ನಿಷೇಧಿಸಲಾಗಿದೆ. ಇಲ್ಲಿಯವರೆಗೆ ಉಡುಪಿ ನಗರದಾದ್ಯಂತ ಎಲ್ಲೆಂದರಲ್ಲಿ ಉಚಿತವಾಗಿ ನೀಡಲಾಗುತ್ತಿದ್ದ ಪಾಲಿಥಿನ್ ಬ್ಯಾಗುಗಳು ಮಾಡಿದ ಹಾವಳಿಯನ್ನು ಅಭ್ಯಸಿಸಿ ಈ ನಿರ್ಧಾರಕ್ಕೆ ಉಡುಪಿ ಬಂದಿದೆ. ಇದೇ ಮಾದರಿಯನ್ನು ಹಿಂಬಾಲಿಸಲು ಮಂಗಳೂರು ಮತ್ತು ಕಾರವಾರ ನಗರಾಡಳಿತಗಳು ನಿರ್ಧರಿಸಿವೆ.

ಬೆಂಗಳೂರಿನ ಅಧಿಕಾರಿಗಳಿಗೆ ಈ ಬುದ್ಧಿ ಎಂದು ಬರುವುದೋ ಆ ದೇವನೇ ಬಲ್ಲ. ಮಳೆಗಾಲದಲ್ಲಿ ಒಂದು ಸಣ್ಣ ಮಳೆ ಬಂದರೆ ಸಾಕು ಮೋರಿಗಳು ಕಟ್ಟಿಕೊಂಡು ಬೆಂಗಳೂರಿನ ರಸ್ತೆ ಚರಂಡಿಗಳನ್ನು ಒಂದು ಮಾಡುವ ನೀರು ಸೃಷ್ಟಿಸುವ ಆವಾಂತರವನ್ನು ಗಂಭೀರವಾಗಿ ಪರಿಗಣಿಸಿದರೆ ಈ ಸಮಸ್ಯೆಗೆ ಪರಿಹಾರ ದೊರೆತೀತು. ಬೆಂಗಳೂರಿನಂಥ ಬೃಹತ್ ನಗರಗಳಲ್ಲಿ ಪಾಲಿಥಿನ್ ಬ್ಯಾಗುಗಳನ್ನು ಯಶಸ್ವಿಯಾಗಿ ನಿಷೇಧಿಸಿದರೆ ಶೇ.75ರಷ್ಟು ಚರಂಡಿ ತುಂಬಿ ತುಳುಕುವ ಸಮಸ್ಯೆಗೆ ಪರಿಹಾರ ದೊರೆತಂತೆ.

ಇದು ಅಷ್ಟು ಸುಲಭದ ಮಾತಲ್ಲ. ಪಾಲಿಕೆ ಕಠಿಣ ನಿರ್ಧಾರ ತೆಗೆದುಕೊಳ್ಳಬೇಕಾಗುತ್ತದೆ. ಎಲ್ಲಕ್ಕಿಂತ ಹೆಚ್ಚಾಗಿ ಗ್ರಾಹಕರು ಪಾಲಿಥಿನ್ ಬ್ಯಾಗುಗಳ ಮೇಲಿನ ಮೋಹವನ್ನು ತ್ಯಜಿಸಬೇಕಾಗುತ್ತದೆ. ತರಕಾರಿ ಕೊಳ್ಳುವಾಗ, ಸಣ್ಣಪುಟ್ಟ ಸಾಮಗ್ರಿಗಳನ್ನು ಕೊಳ್ಳುವಾಗ ಪಾಲಿಥಿನ್ ಬ್ಯಾಗುಗಳನ್ನು ಕೈಯಲ್ಲಿ ಹಿಡಿಯದೇ ಬೆಂಗಳೂರಿನ ಜನ ಮನೆಗೆ ಮರಳುವುದಿಲ್ಲ.

ಇನ್ನು ಕಟ್ಟಿಕೊಂಡಿರುವ ಬೆಂಗಳೂರಿನ ಚರಂಡಿಗಳು ಚೆನ್ನೈನ ನದಿಯಂತೆ 'ಸುವಾಸನೆ' ಬೀರುತ್ತಿರುವುದು ಈ ಕಾರಣದಿಂದಾಗಿಯೇ. ತ್ಯಜಿಸಲ್ಪಡುವ ಪಾಲಿಥಿನ್ ಬ್ಯಾಗುಗಳು ನೇರವಾಗಿ ಹೋಗಿ ಸೇರುವುದು ಚರಂಡಿಗಳಿಗೇ. ಜನರಲ್ಲಿ ಇದರ ದುಷ್ಪರಿಣಾಮ ಬಗ್ಗೆ ಜಾಗೃತಿ ಮೂಡಿಸುವಲ್ಲಿ ಯಾರೂ ತಲೆ ಕೆಡಿಸಿಕೊಂಡಿಲ್ಲ. ತಿಪ್ಪೆ ಪಾಲಾಗುವ ಬ್ಯಾಗುಗಳು ಬಿಡಾಡಿ ಪ್ರಾಣಿಗಳ ಹೊಟ್ಟೆ ಸೇರಿ ಪ್ರಾಣಕ್ಕೆ ಸಂಚಕಾರ ಒಡ್ಡುತ್ತಿವೆ. ಇನ್ನು ಅವುಗಳನ್ನು ಸುಟ್ಟಾಗ ಬಿಡುಗಡೆಯಾಗುವ ರಾಸಾಯನಿಕ ಕ್ರಿಯೆಯಿಂದ ವಿಷಕಾರಕ ವಾಯು ಬಿಡುಗಡೆಯಾಗುತ್ತಿದೆ.

ಹೀಗೆ ಮಾಡಿದರೆ ಹೇಗೆ?

* ಅಂಗಡಿಗೆ ಹೋಗುವಾಗ ಕೈಚೀಲ ಕೊಂಡೊಯ್ಯಬೇಕು.
* ಬಳಸಲೇಬೇಕಾದಂಥ ಪ್ರಸಂಗ ಬಂದಾಗ, ಬಳಸಿ ಒಂದೆಡೆ ಸೇರಿಸಿ ಹಳೆ ಪೇಪರಿನವರಿಗೆ ನೀಡಬೇಕು.
* ತಿಪ್ಪೆಗೆ ಬೇಕೆಂದ ಹಾಗೆ ಎಸೆಯುವುದನ್ನು ನಿಲ್ಲಿಸುವುದು.
* ಅಂಗಡಿಗಳಲ್ಲಿ ಪಾಲಿಥಿನ್ ಬ್ಯಾಗ್ ಗಳನ್ನು ನಿರಾಕರಿಸಿ.
* ಪಾಲಿಥಿನ್ ಬ್ಯಾಗುಗಳಿಗೆ ಆಗ್ರಹಿಸಲೇಬೇಡಿ.
* ಚರಂಡಿಗೆ ಎಸೆಯುವುದನ್ನು ಬಿಟ್ಟುಬಿಡಿ.
* ಸಾಧ್ಯವಾದಲ್ಲೆಲ್ಲ ನಾವೇ ಇತರರಲ್ಲಿ ಜಾಗೃತಿ ಮೂಡಿಸಬೇಕು.
* ಆಡಳಿತ ನಿಷೇಧಿಸಿದರೆ ಹೃದಯದಿಂದ ಸ್ವಾಗತಿಸಬೇಕು.
* ಪರಿಸರ ಮಾಲಿನ್ಯದ ಬಗ್ಗೆ ಕಾಳಜಿಯಿರಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X