ಅಭಿಮಾನಿಗಳನ್ನು ಕೆಣಕಿದ ರೂನಿ 'ಎಫ್' ಪದ

ತನಗಿಂತ ದುರ್ಬಲವಾಗಿರುವ ಅಲ್ಜೀರಿಯಾವನ್ನು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೊದಲ ಬಾರಿಗೆ ಎದುರಿಸಿದರೂ ಇಂಗ್ಲೆಂಡ್ ಎದುರಾಳಿ ತಂಡವನ್ನು ಭೇದಿಸಿ ಗೋಲು ಗಳಿಸಲು ಇಂಗ್ಲೆಂಡ್ ವಿಫಲವಾಗಿದ್ದು ಅಭಿಮಾನಿಗಳನ್ನು ಕೆರಳಿಸಿತ್ತು. ಪಂದ್ಯದ ನಂತರ ಸ್ಟೇಡಿಯಂನಲ್ಲಿದ್ದ ಅಭಿಮಾನಿಗಳು ಇಂಗ್ಲೆಂಡ್ ಆಟಗಾರರ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು.
ಅಭಿಮಾನಿಗಳ ಮನಸ್ಸಿಗೆ ಆದ ಗಾಯಕ್ಕೆ ಉಪ್ಪು ಸುರಿದಂತೆ ಇಂಗ್ಲೆಂಡ್ ನ ಪ್ರಮುಖ ಆಟಗಾರ ವೇನ್ ರೂನಿ, 'ನಮ್ಮ ಬೆಂಬಲಿಗರಿಗೇ ನಮ್ಮ ಮೇಲೆ ಅಭಿಮಾನವಿಲ್ಲ' ಎಂದು ಹೇಳಿ ಕ್ಯಾಮೆರಾದೆದಿರು 'ಎಫ್' ಪದ ಬಳಸಿದ್ದು ಫುಟ್ಬಾಲ್ ಪ್ರೇಮಿ ಇಂಗ್ಲೆಂಡಿಗರನ್ನು ಮತ್ತಷ್ಟು ಕೆಣಕಿತು.
ರೂನಿ ವಿರುದ್ಧ ರೊಚ್ಚಿಗೆದ್ದ ಅಭಿಮಾನಿಗಳು ಸ್ಟೇಡಿಯಂ ಹೊರಗಡೆ ಪ್ರತಿಭಟಿಸಿದ್ದಾರೆ. ಕೆಲವರು ಭದ್ರ ರಕ್ಷಣೆಯನ್ನು ಭೇದಿಸಿ ಇಂಗ್ಲೆಂಡ್ ಸ್ಟಾರ್ ಆಟಗಾರ ಡೆವಿಡ್ ಬೆಕೆಮ್ ಇದ್ದ ಡ್ರೆಸ್ಸಿಂಗ್ ರೂಮಿಗೆ ನುಗ್ಗಲು ಯತ್ನಿಸಿ ತಮ್ಮ ಆಕ್ರೋಷವನ್ನು ಹೊರಗೆಡಹಿದ್ದಾರೆ. ಆದರೆ, ಭದ್ರತಾ ಸಿಬ್ಬಂದಿ ಅವರನ್ನು ತಡೆದಿದ್ದಾರೆ. ಕೆಲ ಹೊತ್ತಿನಲ್ಲೇ ಬ್ರಿಟನ್ ರಾಜಕುಮಾರರಾದ ಪ್ರಿನ್ಸ್ ವಿಲಿಯಂಸ್ ಮತ್ತು ಪ್ರಿನ್ಸ್ ಹ್ಯಾರಿ ಡ್ರೆಸ್ಸಿಂಗ್ ರೂಮಿಗೆ ಬರುವವರಿದ್ದರು.
ದಯನೀಯ ಸ್ಥಿತಿಯಲ್ಲಿರುವ ಇಂಗ್ಲೆಂಡ್ ಈಗ 'ಸಿ' ಗುಂಪಿನಲ್ಲಿ ಅಗ್ರಸ್ಥಾನ ಗಳಿಸಿರುವ ಸ್ಲೊವೇನಿಯಾ ವಿರುದ್ಧ ಪೋರ್ಟ್ ಎಲಿಜಬೆತ್ ನಲ್ಲಿ ಬುಧವಾರ ನಡೆಯಲಿರುವ ಪಂದ್ಯದಲ್ಲಿ ಗೆಲ್ಲಲೇಬೇಕಿದೆ.












Click it and Unblock the Notifications