ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಧರ ಸ್ಮಾರಕಕ್ಕೆ ಹೈಕೋರ್ಟ್ ಹಸಿರು ನಿಶಾನೆ

By Prasad
|
Google Oneindia Kannada News

National Military Memorial Park
ಬೆಂಗಳೂರು, ಜೂ. 4 : ದೇಶದಲ್ಲಿ ಪ್ರಪ್ರಥಮವಾಗಿ ನಿರ್ಮಾಣವಾಗುತ್ತಿರುವ ಸ್ವಾತಂತ್ರ್ಯೋತ್ತರ ಹುತಾತ್ಮ ಯೋಧರ ಸ್ಮಾರಕಕ್ಕೆ ಕರ್ನಾಟಕ ಉಚ್ಚ ನ್ಯಾಯಾಲಯ ಹಸಿರು ನಿಶಾನೆ ನೀಡಿದೆ.

ನ್ಯಾ. ಮಂಜುಳಾ ಚೆಲ್ಲೂರ್ ಮತ್ತು ನ್ಯಾ. ಶಾಂತನಗೌಡರ್ ಅವರನ್ನೊಳಗೊಂಡ ವಿಭಾಗೀಯ ಪೀಠ, ಬೆಂಗಳೂರಿನ ಇಂದಿರಾ ಗಾಂಧಿ ಸಂಗೀತ ಕಾರಂಜಿ ಉದ್ಯಾನವನದಲ್ಲಿ ಕರ್ನಾಟಕದ ಹುತಾತ್ಮ ಯೋಧರ ಸ್ಮಾರಕ ನಿರ್ಮಾಣಕ್ಕೆ ಅನುಮತಿ ನೀಡಿ ಮಹತ್ವದ ತೀರ್ಪು ನೀಡಿದೆ. ಸರಕಾರವೇ ಮುಂದಾಗಿ ಯೋಧರಿಗಾಗಿ ದೇಶದಲ್ಲಿ ಪ್ರಥಮಬಾರಿಗೆ ಸ್ಮಾರಕ ನಿರ್ಮಿಸುತ್ತಿರುವುದು ಗಮನಾರ್ಹ ಅಂಶ. ಇದು ದೇಶದ ಮತ್ತು ಬೆಂಗಳೂರಿನ ಹೆಮ್ಮೆ ಎಂದು ಹೈಕೋರ್ಟ್ ಹೇಳಿದೆ.

ದೇಶಕ್ಕಾಗಿ ಪ್ರಾಣತೆತ್ತ ಯೋಧರಿಗಾಗಿ ಸ್ಮಾರಕ ನಿರ್ಮಾಣ ಮಾಡುವ ಕಾರ್ಯ ದೇಶದಲ್ಲಿ ಎಲ್ಲೂ ನಡೆದಿಲ್ಲ. ಇಂದಿನ ಪೀಳಿಗೆಗೆ ಮಡಿದ ನಿಜವಾದ ಹೀರೋಗಳ ಬಗ್ಗೆ ತಿಳಿಸಿಕೊಡಲು ಮತ್ತು ಅವರ ತ್ಯಾಗ, ಸಾಹಸಗಳನ್ನು ನೆನಪಿಸಿಕೊಡಲು ರಾಷ್ಟ್ರೀಯ ಮೆಮೋರಿಯಲ್ ಪಾರ್ಕ್ ಅಗತ್ಯ ಎಂದು ಸ್ಮಾರಕ ನಿರ್ಮಾಣಕ್ಕೆ ರಾಜ್ಯಸಭಾ ಸದಸ್ಯ ರಾಜೀವ್ ಚಂದ್ರಶೇಖರ್ ಮುಂದಾಳತ್ವ ವಹಿಸಿದ್ದರು. ಇದಕ್ಕೆ ರಾಜ್ಯ ಸರಕಾರ ಕೂಡ ಬೆಂಬಲ ಸೂಚಿಸಿತ್ತು. ಎರಡು ವರ್ಷಗಳ ಹಿಂದೆ ಅಂದಿನ ರಾಜ್ಯಪಾಲರಾಗಿದ್ದ ರಾಮೇಶ್ವರ ಠಾಕೂರ್ ಶಿಲಾನ್ಯಾಸ ನೆರವೇರಿಸಿದ್ದರು.

ಆದರೆ, ಸ್ಮಾರಕ ನಿರ್ಮಾಣದಿಂದ ಪಾರ್ಕಿನಲ್ಲಿದ್ದ ಅಮೂಲ್ಯವಾದ ಮರಗಳನ್ನು ಕಡಿಯಲಾಗುತ್ತಿದೆ, ಪರಿಸರವನ್ನು ಹಾಳುಗೆಡವಲಾಗುತ್ತಿದೆ ಎಂದು ಅನೇಕ ಪರಿಸರ ಪ್ರೇಮಿಗಳು ವಿರೋಧದ ಕೂಗೆಬ್ಬಿಸಿದ್ದರು. ಸ್ಮಾರಕ ನಿರ್ಮಾಣ ನಿಲ್ಲಿಸಬೇಕೆಂದು ಕೃಷ್ಣ ಅಪಾರ್ಟ್ ಮೆಂಟ್ ನಿವಾಸಿಗಳು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದರು. ಸ್ಮಾರಕ ನಿರ್ಮಾಣವನ್ನು ವಿರೋಧಿಸದಿದ್ದರೂ ನಗರದಲ್ಲಿ ನಿರ್ಮಿಸಿ ಪರಿಸರ ಹಾಳು ಮಾಡಬಾರದೆಂದು ಮನವಿ ಮಾಡಿತ್ತು. ಆದರೆ, ನಗರದ ಹೃದಯ ಭಾಗದಲ್ಲಿಯೇ ಇರುವುದರಿಂದ ಜನರಿಗೆ ಅನುಕೂಲವಾಗಲಿದೆ ಮತ್ತು ಕೇವಲ ನಾಲ್ಕೇ ಮರಗಳನ್ನು ಕಡಿಯುವುದಾಗಿ ಸ್ಮಾರಕ ನಿರ್ಮಾಣ ಟ್ರಸ್ಟ್ ಸ್ಪಷ್ಟೀಕರಣ ನೀಡಿತ್ತು.

ವಾದ ಮತ್ತು ಪ್ರತಿವಾದಗಳನ್ನು ಆಲಿಸಿದ್ದ ನ್ಯಾಯಾಲಯ ಸ್ಮಾರಕ ನಿರ್ಮಾಣ ಮಾಡಬಾರದೆಂಬ ವಾದದಲ್ಲಿ ಹುರುಳಿಲ್ಲವೆಂದು ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ತಳ್ಳಿಹಾಕಿದೆ, ಸ್ಮಾರಕ ನಿರ್ಮಾಣಕ್ಕೆ ಒಪ್ಪಿಗೆ ನೀಡಿದೆ. ಹಿತಾಸಕ್ತಿ ಅರ್ಜಿಯಿಂದಾಗಿ ಕುಂಟುತ್ತ ಸಾಗಿದ್ದ ಸ್ಮಾರಕ ನಿರ್ಮಾಣ ಕಾಮಗಾರಿ ಇನ್ನು ವೇಗ ಪಡೆಯಲಿದೆ. ಹುತಾತ್ಮ ಯೋಧರ ನೆನಪಿಗಾಗಿ ಏಕಶಿಲಾ 'ವೀರಗಲ್ಲು' ತಲೆಯೆತ್ತಲಿದೆ. ಹೈಕೋರ್ಟ್ ಒಪ್ಪಿಗೆ ಸಿಕ್ಕಿದ್ದಕ್ಕಾಗಿ ನಿರ್ಮಾಣಕ್ಕಾಗಿ ಟೊಂಕಕಟ್ಟಿದ್ದ ಅನೇಕ ಹಿರಿಯ ಮಿಲಿಟರಿ ಅಧಿಕಾರಿಗಳು ಸಂತಸ ವ್ಯಕ್ತಪಡಿಸಿದ್ದಾರೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X