Get Updates
Get notified of breaking news, exclusive insights, and must-see stories!

ಬಾಡಿಗೆ ಗಲಭೆ : ಮುತಾಲಿಕ್ ದೇಶದ್ರೋಹಿಯೇ?

ಯಾರನ್ನ ನಂಬಬೇಕು ಸ್ವಾಮಿ ? ಭಾರತೀಯ ಸಂವಿಧಾನದ ಮೌಲ್ಯಗಳನ್ನು ಎತ್ತಿಹಿಡಿಯುವ ಮೂಲಕ ಸಮಾಜದ ರಕ್ಷಣೆ ಮಾಡುತ್ತೇನೆ ಎಂದು ಪ್ರಮಾಣ ವಚನ ಸ್ವೀಕರಿಸಿದ ಸಚಿವನೊಬ್ಬ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ನಡೆಸುತ್ತಾನೆ. ಖಾವಿ ಧರಿಸಿ ಜನರಿಗೆ ಆಧ್ಯಾತ್ಮಿಕತೆಯನ್ನು ಸಾರಬೇಕಿದ್ದ ದೇವಮಾನವನೊಬ್ಬ ಚೆಂದುಳ್ಳಿಯರೊಂದಿಗೆ ಕಾಮಕ್ರೀಡೆಗೆ ಇಳಿಯುತ್ತಾನೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಉನ್ನತ ಸ್ಥಾನದಲ್ಲಿದ್ದ ವಯೋವೃದ್ದಿ ರಾಜ್ಯಪಾಲರೊಬ್ಬರು ಹದಿಹರೆಯದ ಬೆಲೆವಣ್ಣುಗಳೊಂದಿಗೆ ರಾಜಭವನದಲ್ಲೇ ಸಿಕ್ಕಿ ಬೀಳುತ್ತಾನೆ. ಖಾಕಿ, ಖಾದಿ, ಖಾವಿಗಳ ಹಣೆ ಬರಹ ಇಷ್ಟೆ ಬಿಡಿ. ಎಂದು ಸುಮ್ಮನಾಗುವ ಹೊತ್ತಿಗೆ ಹಿಂದೂತ್ವಕ್ಕೆ ಬರಸಿಡಿಲು ಬಡಿದಿದೆ.

ನಿಮಗೆ ಈಗಾಗಲೇ ಗೊತ್ತಾಗಿರಬಹುದು. ಹೌದು, ಉಗ್ರ ಹಿಂದುತ್ವವನ್ನು ಪ್ರತಿಪಾದಿಸುವ ಶ್ರೀರಾಮಸೇನೆ ಸಂಘಟನೆ ಬಾಡಿಗೆ ಸಂಘಟನೆಯೇ ? ರೊಕ್ಕ ಕೊಟ್ಟರೆ ರಾಜ್ಯದ ಯಾವ ಭಾಗದಲ್ಲಾದರೂ ಕೋಮುಗಲಭೆ ಎಬ್ಬಿಸುತ್ತಾರೆಯೇ ? ಸೇನೆಯ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಪುಡಾರಿಗಳ ಮುಖಂಡನೇ ? ಹಿಂದು ವಿರೋಧ ಕೆಲಸ ಮಾಡಿಸುವವರು ಅವರೇ, ಅದನ್ನು ವಿರೋಧಿಸಿ ಪ್ರತಿಭಟನೆಗೆ ಮುಂದಾಗುವವರು ಇದೇ ಮುತಾಲಿಕ್ ಪಟಾಲಮ್ಮೇ ? ಮಂಗಳೂರು ಪಬ್, ಮೈಸೂರು, ಶಿವಮೂಗ್ಗ ಮತ್ತು ಹಾಸನ ಸೇರಿ ರಾಜ್ಯದ ಅನೇಕ ಕಡೆಗಳಲ್ಲಿ ನಡೆದಿರುವ ಕೋಮುಗಲಭೆಗಳು ಪೂರ್ವ ನಿಯೋಜಿತ ಸಂಚೇ ? ಸೂಕ್ಷ್ಮ ಪ್ರದೇಶಗಳಲ್ಲಿ ಗಲಭೆ ಎಬ್ಬಿಸಲು ಶ್ರೀರಾಮಸೇನೆಗೆ ಗುತ್ತಿಗೆ ಕೊಟ್ಟರೆ ಹೇಳಿದ ದಿನಾಂಕದಂದು ದೊಂಬಿ ರೆಡಿ ? ಛೇ ಯಾರನ್ನು ನಂಬಬೇಕು ಹೇಳಿ ? ಬಾಂಬ್ ಇಡುವ ಭಯೋತ್ಪಾದಕರು, ದೊಂಬಿ, ಕೋಮುಗಲಭೆ ಎಬ್ಬಿಸುವ ಮುತಾಲಕ್ ಏನಾದರೂ ವ್ಯತ್ಯಾಸವಿದೆಯೇ ?

ರಾಜಕಾರಣಿಗಳು ಮತ್ತು ಪೊಲೀಸರ ಮೇಲೆ ಜನರ ವಿಶ್ವಾಸವನ್ನು ಕಳೆದುಕೊಂಡು ಅನೇಕ ದಿನಗಳಾಗಿವೆ. ಇದಕ್ಕೆ ಸಾಕ್ಷಿ ಸಮೇತ ನೂರೆಂಟು ಕಾರಣಗಳನ್ನು ನೀಡಬಹುದು. ಆದರೆ, ಖಾವಿ ಮೇಲಿನ ನಂಬಿಕೆಯನ್ನು ನಮ್ಮ ಜನ ಇನ್ನೂ ಕಳೆದುಕೊಂಡಿಲ್ಲ. ಅವನ್ಯಾರೂ ನಿತ್ಯಾನಂದ ಸ್ವಾಮಿ ರಾಸಲೀಲೆ ನಡೆಸಿದ ಅಂದ ಮಾತ್ರಕ್ಕೆ ರಾಜ್ಯ ಹಾಗೂ ದೇಶದಲ್ಲಿರುವ ಸಾವಿರಾರು ಶ್ರೀಗಳನ್ನು ಹಾಗೆ ನೋಡುವುದು ಸರಿಯಲ್ಲ. ಇಲ್ಲಿ ಯಾವ ಮಠಗಳು ಹೆಸರೂ ಬೇಡ, ಆದರೆ, ಪರಂಪರೆಯ ಮೂಲಕ ಅಸ್ತಿತ್ವದಲ್ಲಿರುವ ಹಲವಾರು ಮಠಗಳು ಧಾರ್ಮಿಕ, ಶೈಕ್ಷಣಿಕ ಕ್ಷೇತ್ರಗಳಲ್ಲಿ ಗಮನಾರ್ಹ ಸಾಧನೆ ಮಾಡಿವೆ. ಅದನ್ನೂ ಎಂತವರೂ ಒಪ್ಪಲೇಬೇಕು.

ಇಷ್ಟೆ ನಂಬಿಕೆ ಮೇಲೆ ಹಿಂದೂ ಎನಿಸಿಕೊಂಡಿರುವ ಕೋಟ್ಯಂತರ ಜನರು ಹಿಂದು ಸಂಘಟನೆಗಳು ಬಗ್ಗೆ ಅಪಾರ ವಿಶ್ವಾಸ ಹೊಂದಿದ್ದಾರೆ. ಆ ಸಂಘಟನೆಗಳು ಮಾಡುವ ಎಲ್ಲ ಕೆಲಸಕ್ಕೂ ಬೆಂಬಲ ಸೂಚಿಸದೆ ಇರಬಹುದು. ಆದರೆ, ಹಿಂದೂತ್ವ ಪ್ರತಿಪಾದನೆಗೆ ಬೆಂಬಲವನ್ನಂತೂ ನೀಡಿದ್ದಾರೆ ಹಾಗೂ ನೀಡುತ್ತಿದ್ದಾರೆ. ಆದರೆ, ಹಿಂದೂತ್ವದ ಹೆಸರಿನಲ್ಲಿ ಸ್ವಾರ್ಥಕ್ಕಾಗಿ, ದುಡ್ಡಿಗಾಗಿ, ತಾವು ದೊಡ್ಡವರಾಗಲು ಹಿಂದೂತ್ವವನ್ನು ಅಸ್ತ್ರವಾಗಿ ಬಳಸಿಕೊಳ್ಳುತ್ತಿರುವುದಲ್ಲದೇ, ಅದರಿಂದ ಕೋಟಿ ಕೋಟಿ ದುಡ್ಡಿ ಬಾಚುತ್ತಿರುವುದು ಖಂಡನೀಯ ಹಾಗೂ ಅಕ್ಷಮ್ಯ.

ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶದ ಅತ್ಯಂತ ಶಿಸ್ತಿನ ಸಂಘಟನೆ. ಇಂತಹ ಸಂಸ್ಥೆಯಿಂದ ಬಂದಿರುವ ಪ್ರಮೋದ್ ಮುತಾಲಿಕ್ ಗೆ ಗಟ್ಟಿ ತಳಪಾಯವೂ ಇದೆ. ಮಾತಿನಲ್ಲಿ ಚತುರ ಬೇರೆ, ಇಂತಹ ಮುತಾಲಿಕ್ ಕೆಲ ವರ್ಷಗಳ ಹಿಂದೆ ಸಂಘ ಪರಿವಾರದಿಂದ ದೂರವಾಗಿ ತಮ್ಮದೇ ಆದ ಶ್ರೀರಾಮಸೇನೆ ಎಂಬ ಸಂಘಟನೆ ಕಟ್ಟಿ ಬೆಳೆಸುವ ಮೂಲಕ ಅನೇಕ ವಿವಾದಗಳನ್ನೂ ಸೃಷ್ಟಿಸಿಕೊಂಡಿದ್ದಾರೆ. ಮಂಗಳೂರಿನ ಪ್ರಸಾದ್ ಅತ್ತಾವರ್ ಎಂಬ ಕ್ರಿಮಿನಲ್ ಹಿನ್ನೆಲೆಯುಳ್ಳ ಮನುಷ್ಯ ಕೈಗೆ ಸಂಘಟನೆ ನೀಡಿದ್ದು, ಆತನಿಗೆ ಭೂಗತ ದೊರೆ ರವಿ ಪೂಜಾರಿಯ ಬೆಂಬಲ ? ಬಿಡಿ ಅದೇನೇ ಇರಲಿ,

ಆದರೆ, ಹೆಡ್ ಲೈನ್ಸ್ ಟುಡೇ ಮತ್ತು ತೆಹಲ್ಕಾ ಪತ್ರಿಕೆ ವರದಿ ಮಾಡಿರುವಂತೆ ದುಡ್ಡಿಗಾಗಿ ಪ್ರಮೋದ್ ಮುತಾಲಿಕ್ ಗಲಭೆ ಎಬ್ಬಿಸುವುದು ಸತ್ಯವೇ ? ಮಾಧ್ಯಮಗಳ ಬಳಿ ಇರುವ ವಿಡಿಯೋ ಫೂಟೇಜ್ ಗಳಲ್ಲಿ ಇರುವುದು ನಿಜವಾಗಿಯೂ ಪ್ರಮೋದ್ ಮುತಾಲಕ್ ಅವರೇ ? ಪ್ರಮೋದ್ ಮುತಾಲಿಕ್ ಅವರೇ ಸಂಭಾಷಣೆಯಲ್ಲಿ ತೊಡಗಿರುವುದು ನಿಜ ಎಂದು ಸಾಬೀತಾದರೆ, ಅವರಿಗೆ ಎಂತಹ ಶಿಕ್ಷೆಯಾಗಬೇಕೆ ? ಕ್ಷಣಕಾಲ ಯೋಚಿಸದೆ ಶ್ರೀರಾಮಸೇನೆ ಸಂಘಟನೆಯನ್ನು ನಿಷೇಧಿಸಬೇಕೆ ?
ಮಾಧ್ಯಮಗಳಲ್ಲಿ ವರದಿ ಬಂದ ಕೂಡಲೇ ಪ್ರತಿಕ್ರಿಯೆ ನೀಡಿರುವ ಮುತಾಲಿಕ್, ಇದೊಂದು ಮೀಡಿಯಾ ಲಾಬಿ. ನನ್ನ ಹಾಗೂ ನನ್ನ ಸಂಘಟನೆಯ ಏಳ್ಗೆ ಸಹಿಸಲಾರದೇ ಕೆಲವರು ನಡೆಸಿರುವ ಷಡ್ಯಂತ್ರ. ನಾನು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಸಿದ್ಧ. ಸಿಬಿಐ ಆದರೂ ಸೈ, ಸಿಓಡಿ ಆದರೂ ಸೈ. ದೇಶಕ್ಕಾಗಿ ನಾನು ಪ್ರಾಣ ಕೊಡುವೆ. ಇಂತಹ ನೀಚ ಕೃತ್ಯಕ್ಕೆ ಇಳಿಯಲಾರೆ. ಆರೋಪ ಸಾಬೀತಾದರೆ ಬಹಿರಂಗವಾಗಿ ನನ್ನನ್ನು ಗಲ್ಲಿಗೇರಿಸಿ ಎಂದು ಅವರು ಸ್ಪಷ್ಟಪಡಿಸಿದ್ದಾರೆ.

ಮುತಾಲಿಕ್ ಗೂ ಬಿಜೆಪಿ, ಸಂಘ ಪರಿವಾರಕ್ಕೂ ಸಂಬಂಧವಿಲ್ಲ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಧ್ಯಮಗಳ ಬಳಿ ಇರುವ ವಿಡಿಯೋ ಫೂಟೇಜ್ ಗಳನ್ನು ತರಿಸಿ ಪರೀಕ್ಷೆ ನಡೆಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ವಿ ಎಸ್ ಆಚಾರ್ಯ ಹೇಳಿದ್ದಾರೆ. ಬೆಳಗಾವಿ ಪೊಲೀಸರು ಮುತಾಲಿಕ್ ವಿರುದ್ಧ ಕಾನೂನು ಕ್ರಮ ಕೈಗೊಳ್ಳುತ್ತಾರೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ತಿಳಿಸಿದ್ದಾರೆ. ಯಥಾ ಪ್ರಕಾರ ಪ್ರತಿಪಕ್ಷಗಳು ಮುತಾಲಿಕ್ ಅವರನ್ನು ಬಂಧಿಸಿ, ಕ್ರಮ ಜರುಗಿಸಿ ಎಂದು ಒತ್ತಾಯಿಸಿವೆ. ಮತಾಲಿಕ್ ತಪ್ಪೇ ಮಾಡಿದ್ದರೆ, ಶ್ರೀರಾಮಸೇನೆ ಸಂಘಟನೆಯನ್ನು ನಿಷೇಧಿಸಬೇಕು. ಪ್ರಕರಣಕ್ಕೆ ಸಂಬಂಧಿಸಿದಂತೆ ಆರೋಪಿಗಳನ್ನು ಬಂಧಿಸಿ ಕಾನೂನಿನಡಿ ಕ್ರಮ ಕೈಗೊಳ್ಳಬೇಕು. ಕೊನೆಯದಾಗಿ ಹೇಳುವುದಾದರೆ, ನಾಡು ನುಡಿ ಧರ್ಮ ದೇಶವನ್ನು ಪ್ರತಿಬಿಂಬಿಸುವ ಸಂಘಟನೆಗಳ ಬಗ್ಗೆ ಎಂದಿಗೂ ವಿಶ್ವಾಸ ಕಡಿಮೆಯಾಗುವುದಿಲ್ಲ. ಆದರೆ, ಧರ್ಮ ಹೆಸರಲ್ಲಿ ಅಧರ್ಮದ ಹಾದಿ ಹಿಡಿದಿದ್ದರೆ ಅಂತವರಿಗೆ ಶಿಕ್ಷೆ ಖಂಡಿತಾ ಆಗಲೇಬೇಕು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+