• search

ಲಿಂಗಾಯತ ತಾಲಿಬಾನ್‌ಗಳಿಗೆ ಕೆಲ ಪ್ರಶ್ನೆಗಳು

By * ಲಿಂಗಣ್ಣ ಸತ್ಯಂಪೇಟೆ, ಶಹಾಪುರ
Subscribe to Oneindia Kannada
For Quick Alerts
ALLOW NOTIFICATIONS
For Daily Alerts
  Linganna Satyampete
  ಶಹಾಪುರ, ಏ. 20 : ಲಿಂಗಾಯತ ಸಮುದಾಯದ ಎರಡು ಬೃಹತ್ ಸಂಸ್ಥೆಗಳಾದ ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶಿವಯೋಗ ಮಂದಿರಗಳು ಜಂಟಿಯಾಗಿ ಆಚರಿಸಿದ ಶತಮಾನೋತ್ಸವ ಸಮಾರಂಭದಲ್ಲಿ ಗದುಗಿನ ತೋಂಟದಾರ್ಯಮಠದ ಸಿದ್ಧಲಿಂಗಸ್ವಾಮಿಗಳ ಅವರ ಕಾರಿಗೆ ಕಲ್ಲು ತೂರಿದ ಘಟನೆ, ಅತ್ಯಂತ ಅಮಾನವೀಯ ಹಾಗೂ ಖಂಡನೀಯ.

  ಏಕೆಂದರೆ, ಸದರಿ ಸಂಸ್ಥೆಗಳೆರಡು ಸೇರಿ ಆಚರಿಸಿದ ಶತಮಾನೋತ್ಸವ ಸಮಾರಂಭಕ್ಕೆಂದು ಸಭೆಗೆ ಆಗಮಿಸಿದ ಶ್ರೋತೃಗಳು ಕೇವಲ ಮುನ್ನೂರು ಮಾತ್ರ! ಆದರೆ ಹಾಕಿದ ಪೆಂಡಾಲಿಗೆ ಕೊಟ್ಟ ಹಣ 50 ಲಕ್ಷ. ಮಾಡಲಾದ ಆಸನ ವ್ಯವಸ್ಥೆ 40 ರಿಂದ 50 ಸಾವಿರವಂತೆ, ಮುಖ್ಯ ವಕ್ತಾರರಾಗಿ ಹೋಗಿದ್ದ ತೋಂಟದಾರ್ಯರಿಗೂ ಇಷ್ಟೊಂದು ದೊಡ್ಡ ಪೆಂಡಾಲು. 40-50 ಸಾವಿರ ಖುರ್ಚಿಗಳು! ಸಭೆಯಲ್ಲಿ ಸೇರಿದ್ದ ಜನ ಕೇವಲ ಮನ್ನೂರು ನಾನೂರು!! ಇದು ಯಾವ ಪುರುಷಾರ್ಥಕ್ಕೆ? ಅಂತ ಅವರಿಗೂ ಅನ್ನಿಸಿದ್ದರೆ ಅದರಲ್ಲಿ ಅಂಥ ತಪ್ಪೇನಿದೆ? ಈ ಮಾತನ್ನೆ ಅವರು ಅಂದಿನ ಸಭೆಯಲ್ಲಿ ಆಡಿದ್ದರೆ ಅದರಲ್ಲಿ ಯಾವ ಅನೌಚಿತ್ಯವಿದೆ?

  ಸಾಲದ್ದಕ್ಕೆ ನೂರು ವರ್ಷಗತಿಸಿದ್ದರು ಈ ಸಂಸ್ಥೆಗಳು ಮಾಡಿದ ಕಮಾಯಿ ಏನು ? ಕೊನೆಯ ಪಕ್ಷ ಲಿಂಗಾಯತರ ಒಳ ಪಂಗಡಗಳನ್ನು ತೆಗೆದು ಹಾಕಿ, ಇಡೀ ಲಿಂಗಾಯತ ಸಮುದಾಯ ಒಂದು ಎಂಬುದನ್ನಾದರೂ ಮಾಡಿ ತೋರಿಸಿದವೆ ? ಈ ಎರಡು ಸಂಸ್ಥೆಗಳು ಸೇರಿ, ಲಿಂಗಾಯತ ಒಳಪಂಗಡಕ್ಕೆ ಸೇರಿದ ಎರಡು ಬೇರೆ ಬೇರೆ ಕುಟುಂಬಗಳ ನೆಂಟಸ್ತಿಕೆ ಮೂಡಿಸಿದ ಒಂದೇ ಒಂದು ಉದಾಹರಣೆಯಾದರೂ ಈ ನೂರು ವರ್ಷಗಳ ಅವಧಿಯಲ್ಲಿ ಇದೆಯೆ ?

  ಈ ಸಂಸ್ಥೆಗಳೆರಡು ಕೂಡಿ ಒಂದೇ ಒಂದು ಶಿಕ್ಷಣ ಸಂಸ್ಥೆ ಅಥವಾ ಒಂದೇ ಒಂದು ಹಾಸ್ಟೆಲ್, ಆಸ್ಪತ್ರೆ, ಒಂದೇ ಒಂದು ಔದ್ಯೋಗಿಕ ಸಂಸ್ಥೆ ಇದಾವುದೂ ಬೇಡ, ವ್ಯವಹಾರದ ದೃಷ್ಟಿಯಿಂದಲಾದರೂ ಒಂದು ಬ್ಯಾಂಕು ಇತ್ಯಾದಿಯನ್ನು ಸ್ಥಾಪಿಸಿವೆಯೆ ? ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬೆರಳೆಣಿಕೆಯಷ್ಟು ಜನ ಪೈಗಳಿದ್ದಾರೆ. ಆದರೆ ರಾಜ್ಯದ ತುಂಬ ಅವರ ಬ್ಯಾಂಕುಗಳಿವೆ. ವೈಶ್ಯ ಜನಾಂಗ ಇರುವುದು ಒಂದು ಹಿಡಿಯಷ್ಟು. ಆದರೆ ಪ್ರತಿ ಜಿಲ್ಲೆಯಲ್ಲೂ ಎರಡು ಮೂರು ವೈಶ್ಯಬ್ಯಾಂಕುಗಳಿವೆ. ಈ ಸಂಸ್ಥೆಗಳ ಒಂದು ಹಣಕಾಸು ಸಂಸ್ಥೆ ಕೂಡ ಇಲ್ಲವಲ್ಲ ಯಾಕೆ ? ವೀರಶೈವ ಮಹಾಸಭೆಯ ಸ್ಥಾಪನೆಯ ಮುಖ್ಯ ಉದ್ದೇಶವೇನಾಗಿದೆಯೆಂದರೆ ಅದರ ಪ್ರಾಣಾಳಿಕೆಯೇ ಹೇಳುವಂತೆ ಇವ ನಮ್ಮವ, ಇವ ನಮ್ಮವ ಎಂದು ಎಲ್ಲರನ್ನೂ ಅಪ್ಪಿಕೊಂಡು ವೀರಶೈವ ಧರ್ಮವನ್ನು ವಿಶ್ವಧರ್ಮವನ್ನಾಗಿ ಮಾಡುವುದಾಗಿದೆ. ಈ ಉದ್ದೇಶ ಈಗ ಈಡೇರಿದೆಯೆ ? ಕನಿಷ್ಟ ಇದು ಈಗ ಒಂದು ಊರಿನ, ಒಂದು ಓಣಿಯ ಧರ್ಮವಾಗಿಯಾದರೂ ಉಳಿದಿದೆಯೆ ?

  ಅದರಂತೆ ಶಿವಯೋಗ ಮಂದಿರ ಸ್ಥಾಪನೆಯ ಮುಖ್ಯ ಪ್ರಣಾಳಿಕೆ ಏನು ಹೇಳುತ್ತದೆಂದರೆ ಈ ಧರ್ಮದ ಮುಖ್ಯ ತತ್ವಗಳಾದ, ಅಷ್ಟಾವರಣ, ಪಂಚಾಚಾರ, ಷಟ್ ಸ್ಥಲಗಳನ್ನು ಹೇಳಿಕೊಡುವುದರ ಜೊತೆಗೆ ಮನುಷ್ಯ ಸಮಾನತೆ, ಲಿಂಗ ಸಮಾನತೆ, ಜಾತಿ ವಿನಾಶ ಮುಂತಾದ ಆಧುನಿಕ ಜೀವನ ಮೌಲ್ಯಗಳನ್ನು ಪ್ರಚುರಪಡಿಸಲು ಅಗತ್ಯವಾದ ನೂರು ಸಾವಿರ ಸಂಖ್ಯೆಯ ವಟುಗಳನ್ನು ಸಿದ್ಧಗೊಳಿಸುವುದು.

  ಈ ಉದ್ದೇಶದಲ್ಲಿ ಕೂದಲೆಳೆಯಷ್ಟಾದರೂ ಸಾಧನೆ ಆಗಿದೆಯೆ ? ಶಿವಯೋಗ ಮಂದಿರದ ನೂರು ವರ್ಷಗಳ ಇತಿಹಾಸದಲ್ಲಿ ಅಯ್ಯನೋರ ಕುಲದಲ್ಲಿ ಹುಟ್ಟಿದವರನ್ನು ಮಾತ್ರ ತೆಗೆದುಕೊಂಡು, ಒಳಪಂಗಡಕ್ಕೆ ಸೇರಿದ ಬಣಜಿಗ, ಪಂಚಮಸಾಲಿ, ಸಾದರ, ನೊಣಬ, ಕುಂಬಾರ, ಹಡಪದ, ಕಂಬಾರ, ಗಾಣಿಗ, ಸಜ್ಜನ ಮುಂತಾದವರನ್ನು ಯಾಕೆ ಸೇರಿಸಿಕೊಂಡಿಲ್ಲ ? ಹೇಳುವುದು ಆಚಾರ. ತಿನ್ನೋದು ಬದನೆಕಾಯಿ ಎಂಬಂತೆ ನಡೆದುಕೊಂಡು ಬಂದ ಈ ಮುದಿ ಸಂಸ್ಥೆಗಳಿಗೆ ಅಂಟಿಕೊಂಡ ಮುದಿ ಹದ್ದುಗಳು ಯುವಕರಿಗಾಗಿ ಜಾಗ ಖಾಲಿ ಮಾಡಬೇಕು - ಎಂದು ತೋಂಟದಾರ್ಯರು ಅಂದು ಪ್ರಶ್ನಿಸಿದ್ದರೆ ಅದರಲ್ಲಿ ಅಸತ್ಯವೇನಿದೆ ?

  ಶಿವಯೋಗ ಮಂದಿರವನ್ನೇನು, ಹಾನಗಲ್ ಕುಮಾರ ಸ್ವಾಮಿಗಳೊಬ್ಬರೆ ಸ್ಥಾಪನೆ ಮಾಡಿದರೆ ? ಅದರ ನಿಜವಾದ ಮೂದಲಿಗರೆಂದರೆ ಅರಟಾಳು ರುದ್ರಗೌಡರು, ಲಿಂಗರಾಜ ದೇಸಾಯರು, ಗಿಲಗಂಚಿ ಗುರುಸಿದ್ಧಪ್ಪನವರು. ಒಂಟಿ ಮುರಿ ಲಕಮನಗೌಡರು. ವಾರದ ಮಲ್ಲಪ್ಪನವರು, ಮಾತ್ರವಲ್ಲ, ಇವರೆಲ್ಲರಿಗಿಂತ ಮೊಟ್ಟ ಮೊದಲು ಈ ದಿಸೆಯಲ್ಲಿ ಯೋಚನೆ ಮಾಡಿದ್ದು ಚೆನ್ನಪ್ಪಗೌಡ ಕೊಂಗವಾಡರು.

  ಇವರು ಧಾರವಾಡದ ಯಾವುದೋ ಒಂದು ಕಚೇರಿಯಲ್ಲಿ ಗುಮಾಸ್ತರಾಗಿ ಕೆಲಸ ಮಾಡುತ್ತಿದ್ದರು. ಬೆಂಗಳೂರಿನ ಪುಟ್ಟಣ್ಣ ಶೆಟ್ಟಿ ಮುಂತಾದವರು, ತಮ್ಮ ಇಡೀ ಆಸ್ತಿಯನ್ನೇ ಲಿಂಗಾಯತ ಸಮುದಾಯಕ್ಕೆ ಧಾರೆ ಎರೆದ ಮಹನೀಯರು. ಈ ಮಹನೀಯರೆಲ್ಲ ಸೇರಿ ತಮ್ಮ ಜೊತೆಗೆ ಒಬ್ಬ ಸ್ವಾಮಿಗಳಿರಲಿ ಎಂದು ಹಾನಗಲ್ ಕುಮಾರ ಸ್ವಾಮಿಗಳನ್ನು ಜೊತೆಗೂಡಿಸಿಕೊಂಡರೆ ಈ ಸ್ವಾಮಿಗಳು ಆಗ ಅದಕ್ಕೆಲ್ಲ ಕೊಟ್ಟದ್ದೆಷ್ಟು ? ಕೇವಲ ನೂರು ರೂಪಾಯಿ!

  ಇದು ಹೇಗಾದರಿರಲಿ, ಅಖಿಲ ಭಾರತ ವೀರಶೈವ ಮಹಾಸಭೆ ಮತ್ತು ಶಿವಯೋಗ ಮಂದಿರಗಳೆರಡಕ್ಕೆ ನೂರು ತುಂಬಿದ ವೇಳೆಯಲ್ಲಿ ಕೇವಲ ಹಾನಗಲ್ ಕುಮಾರಸ್ವಾಮಿಗಳೊಬ್ಬರೇ ಈಗ ನೆನಪಾಗಿ ಉಳಿದವರೆಲ್ಲ ಮರವೆಗೆ ಉಪೇಕ್ಷೆಗೆ ಒಳಗಾಗಿದ್ದಾರಲ್ಲ ಯಾಕೆ ? ಶಿವಯೋಗ ಮಂದಿರವೇನು ಕೇವಲ ಜಂಗಮ ಜಾತಿಯವರಿಗೇ ಸೇರಿದ್ದೇನು? ಇದನ್ನು ತೋಂಟದಾರ್ಯ ಜಗದ್ಗುರುಗಳೊಬ್ಬರೇ ಅಲ್ಲ, ನಾಡಿನ ಸಮಸ್ತರೆಲ್ಲ ಕೇಳುತ್ತೇವೆ ಮತ್ತು ಅವರ ಕಾರಿನ ಮೇಲೆ ಕಲ್ಲು ಎಸೆದ ಲಿಂಗಾಯತ ತಾಲಿಬಾನ್ ಗಳನ್ನು ಸರಕಾರ ದಸ್ತಗಿರಿ ಮಾಡಬೇಕು.

  ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

  Oneindia ಬ್ರೇಕಿಂಗ್ ನ್ಯೂಸ್,
  ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

  X
  We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more