ಪಬ್-ವೈನ್ ಸೆಂಟರ್‌ಗಳಿಗೆ ಅಪ್ರಾಪ್ತರ ಪ್ರವೇಶ ನಿಷೇಧಕ್ಕೆ ಹೈಕೋರ್ಟ್ ಸೂಚನೆ; ಐಡಿ ಪರಿಶೀಲಿಸಲು ಸಲಹೆ
ಬೆಂಗಳೂರು: ಕರ್ನಾಟಕ ರಾಜ್ಯ ಹೈಕೋರ್ಟ್ ನಿರ್ದೇಶನ ಬೆನ್ನಲ್ಲೆ ರಾಜ್ಯಾದ್ಯಂತ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿಗೆ ಪಬ್ ಹಾಗೂ ಬ್ರೂವರೀಸ್ (ವೈನ್ ಸೆಂಟರ್) ಗಳಿಗೆ ಪ್ರವೇಶ ನಿರ್ಬಂಧಿಸುವ ಕುರಿತು ಮಹತ್ವದ ಚರ್ಚೆಗಳು ಆಗುತ್ತಿದೆ. ಪ್ರಕರಣವೊಂದರ ವಿಚಾರಣೆ ನಡೆಸಿ, ತೀರ್ಪು ಕಾಯ್ದಿರಿಸಿದ ನ್ಯಾಯಪೀಠವು ಬೆಂಗಳೂರು ನಗರ ಪೊಲೀಸ್ ಆಯುಕ್ತರಿಗೆ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದೆ.
ಬೆಂಗಳೂರು ಪೊಲೀಸ್ ಆಯುಕ್ತರು ನಗರದಲ್ಲಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ವೈನ್ ಸೆಂಟರ್ (ಬ್ರೂವರೀಸ್) ಹಾಗೂ ಪಬ್‌ಗಳಿಗೆ ಪ್ರವೇಶಿಸುವುದನ್ನು ತಡೆಯಲು ಕಠಿಣ ಕ್ರಮ ಜಾರಿಗೊಳಿಸುವಂತೆ ಬುಧವಾರ ಮೌಖಿಕ ನಿರ್ದೇಶನ ನೀಡಿದೆ. ಹತ್ತನೇ ತರಗತಿ ಬಾಲಕನ ಸಾವಿನ ಪ್ರಕರಣದಲ್ಲಿ ಹೈಕೋರ್ಟ್ ಈ ರೀತಿ ಮೌಖಿಕವಾಗಿ ತಿಳಿಸಿದೆ.

ಪಬ್, ವೈನ್ ಸೆಂಟರ್‌ಗಳಿಗೆ ಬರುವ ಅಪ್ರಾಪ್ತರ ಆಧಾರ್ ಕಾರ್ಡ್ ಅಥವಾ ಇನ್ನಿತರ ಗುರುತಿನ ಚೀಟಿಯನ್ನು ಪರಿಶೀಲಿಸುವುದು ಕಡ್ಡಾಯ. ನಿರ್ಲಕ್ಷ್ಯ ತೋರಿದರೆ ಪರವಾನಿಗೆ ರದ್ದುಗೊಳಿಸಲಾಗುವುದು ಎಂದು ಬೆಂಗಳೂರು ನಗರ ಪೊಲೀಸ್ ಆಯುಕ್ತ ಕಟ್ಟುನಿಟ್ಟಿನ ಎಚ್ಚರಿಕೆ ನೀಡಬೇಕೆಂದು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರು ತಿಳಿಸಿದರು.
ಪ್ರಕರಣದ ಹಿನ್ನೆಲೆ ಏನು?
ರಾಜರಾಜೇಶ್ವರಿ ನಗರದ ಬ್ರೂವರೀಸ್‌ನ ಪಾಲುದಾರ ವಿ.ಚಿಟ್ಟಿ ಬಾಬು ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಬಾಲ ನ್ಯಾಯ (ಮಕ್ಕಳ ಆರೈಕೆ ಮತ್ತು ರಕ್ಷಣೆ) ಕಾಯ್ದೆ ಮತ್ತು ಕರ್ನಾಟಕ ಅಬಕಾರಿ ಕಾಯ್ದೆ ಅಡಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಅನ್ನು ರದ್ದುಗೊಳಿಸುವಂತೆ ಕೋರಿದ್ದರು. ಈ ಅರ್ಜಿ ವಿಚಾರಣೆ ವೇಳೆ ನಡೆಸಿದ ಆದೇಶವನ್ನು ಕಾಯ್ದಿರಿಸಿದ ಹೈಕೋರ್ಟ್ ಈ ಮೇಲಿನಂತೆ ಮೌಖಿಕ ನಿರ್ದೇಶನ ನೀಡಿತು.
ವಿದ್ಯಾರ್ಥಿ ಸಾವು ಬೆನ್ನಲ್ಲೆ ಕ್ರಮಕ್ಕೆ ಸೂಚನೆ
15 ವರ್ಷದ 10 ನೇ ತರಗತಿಯ ವಿದ್ಯಾರ್ಥಿ ಕಳೆದ ಜನವರಿ 31 ರಂದು ಮೃತಪಟ್ಟಿದ್ದರು. ಈ ಬಾಲಕ ತಂದೆ ತಾಯಿಗಳಿಗೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿದ್ದರು. ಪೊಲೀಸ್ ತನಿಖೆ ಪ್ರಕಾರ, ಶಾಲೆಯ ಬೀಳ್ಕೊಡುಗೆ ಸಮಾರಂಭದ ಬಳಿಕ ಮೃತ ವಿದ್ಯಾರ್ಥಿ ಸೇರಿ ಸಹಪಾಠಿಗಳು ಪಬ್‌ಗೆ ತೆರಳಿದ್ದಾರೆ. ಅದಾದ ನಂತರ ಪೋಷಕರಿಗೆ ಹೆದರಿ ಪ್ರಾಣ ಕಳೆದುಕೊಂಡಿದ್ದಾನೆ ಎನ್ನಲಾಗಿದೆ. ನಿಯಮಗಳಡಿ ಆರ್‌ಆರ್ ನಗರ ವೈನ್ ಸೆಂಟರ್ ವಿರುದ್ಧ ಪ್ರಕರಣ ದಾಖಲಾಗಿದೆ.
ಅರ್ಜಿದಾರರ ಪರ ವಾದಿಸಿದ ವಕೀಲ ಶರತ್ ಎಸ್ ಗೌಡ, ಸದರಿ ಅಪ್ರಾಪ್ತ ವಯಸ್ಕನಿಗೆ ಸಂಸ್ಥೆ ಮದ್ಯ ನೀಡಿಲ್ಲ. ಈ ಸಹಪಾಠಿಗಳ ಗುಂಪು ಹೊರಗಿನಿಂದ ಎಣ್ಣೆ ತರಿಸಿಕೊಂಡಿದೆ. ಸಂಸ್ಥೆ ಮದ್ಯದ ಎಲ್ಲ ನಿಯಮಗಳನ್ನು ಪಾಲಿಸುತ್ತಲೇ ಬಂದಿದೆ. 18 ವರ್ಷದೊಳಗಿನ ಯಾರಿಗಾದರೂ ಸೇವೆಯನ್ನು ನಿಷೇಧಿಸುವ ಸೂಚನೆಗಳನ್ನು ಪ್ರದರ್ಶಿಸಲಾಗಿದೆ ಎಂದು ಸಮರ್ಥಿಸಿಕೊಂಡರು.
ಅರ್ಜಿದಾರರು ವೈನ್ ಸೆಂಟರ್ ಪಾಲುದಾರರು. ಮೃತ ಬಾಲಕ ರೆಸ್ಟೋರೆಂಟ್‌ನಲ್ಲಿದ್ದಾಗ ಹಾಜರಿದ್ದ ಸಿಬ್ಬಂದಿ ಮತ್ತು ಇತರರನ್ನು ಪೊಲೀಸರು ಹೊಣೆಗಾರರನ್ನಾಗಿ ಮಾಡಬೇಕೆಂದರು. ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ ಎನ್ ಜಗದೀಶ ಅವರು, ಅರ್ಜಿದಾರರ ಪರ ವಾದವನ್ನು ಆಕ್ಷೇಪಿಸಿದರು. ತನಿಖೆ ಇನ್ನೂ ನಡೆಯುತ್ತಿದೆ. ಅಗತ್ಯವಿದ್ದರೆ ಪೊಲೀಸರು ಹೆಚ್ಚುವರಿ ಆರೋಪಗಳನ್ನು ಸೇರಿಸಬಹುದು ಎಂದು ಹೇಳಿದರು. ರೆಸ್ಟೋರೆಂಟ್‌ಗಳು ಮತ್ತು ಪಬ್‌ಗಳು ತಮ್ಮ ಆವರಣದಲ್ಲಿ ಮಕ್ಕಳು ಮದ್ಯ ಸೇವನೆ ತಡೆಯುವುದು ನಮ್ಮೆಲ್ಲರ ಜವಾಬ್ದಾರಿ ಎಂದರು.












Click it and Unblock the Notifications