ಅರಬ್ ರಾಷ್ಟ್ರದಲ್ಲಿ ಲುಂಗಿಗೆ ಸಂಚಕಾರ

ಸಾರ್ವಜನಿಕವಾಗಿ ಸಂಚರಿಸುವಾಗ ದೇಹದ ಯಾವುದೇ ಭಾಗ ಕಾಣಿಸಬಾರದು ಎಂಬುದು ಲುಂಗಿಯ ನಿಷೇಧದ ಹಿಂದಿನ ಕಾರಣ. ಸಾರ್ವಜನಿಕವಾಗಿ ಅಡ್ಡಾಡುವಾಗ ತೊಡರುಗಾಲು ಹಾಕುವ ಲುಂಗಿಯನ್ನು ಮೊಳಕಾಲ್ಮೇಲೆ ಎತ್ತಿ ಅಡ್ಡಾಡುವ ಪರಿ ಅಧಿಕಾರಿಗಳ ಕೆಂಗಣ್ಣಿಗೆ ಗುರಿಯಾಗಿದೆ. ಕೆಲದಿನಗಳ ಹಿಂದೆ ಸಾರ್ವಜನಿಕವಾಗಿ ಲುಂಗಿಯಲ್ಲಿ ಕಾಣಿಸಿಕೊಂಡಿದ್ದ ಏಷ್ಯಾದ ಯುವಕನೊಬ್ಬನನ್ನು ಬಂಧಿಸಿ ವಿಚಾರಣೆಗೆ ಗುರಿಪಡಿಸಲಾಗಿತ್ತು.
ಆದರೆ ಈ ನಿಷೇಧ ಅರಬ್ ರಾಷ್ಟ್ರಗಳಲ್ಲಿ ವಾಸಿಸುವ ಏಷ್ಯಾದ ನಿವಾಸಿಗಳಲ್ಲಿ ಅಸಮಾಧಾನವನ್ನು ಹುಟ್ಟುಹಾಕಿದೆ. ಮನೆಯಲ್ಲಿ ಮಾತ್ರ ತೊಡುವ, ಸಾರ್ವಜನಿಕವಾಗಿ ಲುಂಗಿಯಲ್ಲಿ ಕಾಣಿಸಿಕೊಳ್ಳದ ಅರಬ್ ರಾಷ್ಟ್ರದ ನಾಗರಿಕರು ಕೂಡ ನಿಷೇಧಾಜ್ಞೆಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಲುಂಗಿ ಸೊಂಟದ ಕೆಳಗಿನ ಅಂಗವನ್ನು ಸಂಪೂರ್ಣ ಮುಚ್ಚುತ್ತದೆ, ಇದೇನು ಅಸಭ್ಯ ಉಡುಗೆಯಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಲುಂಗಿಯ ಎರಡೂ ತುದಿಗಳು ಸ್ವತಂತ್ರವಾಗಿರುವ ಮತ್ತು ಎರಡೂ ತುದಿಗಳನ್ನು ಹೊಲಿದಿರುವ ಲುಂಗಿಯನ್ನು ತೊಡುವುದು ವಾಡಿಕೆ. ಆದರೆ, ಬಂಧಿತ ವ್ಯಕ್ತಿ ಎರಡೂ ತುದಿಗಳನ್ನು ಜೋಡಿಸಿರದ ಲುಂಗಿಯನ್ನು ತೊಟ್ಟಿದ್ದನೆಂದು ಕಾಣುತ್ತದೆ. ಹಾಗಾಗಿ ಪೊಲೀಸರು ಈ ಕ್ರಮ ಕೈಗೊಂಡಿರಬಹುದು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
ಏನೇ ಆಗಲಿ, ಲೊಂಗೈ, ಲುಂಗೀ, ಪಾಸೋ, ತಮೇನ್, ಮಾಕಾವಿಸ್, ಮುಂಡು ಎಂದೆಲ್ಲ ಕರೆಯಲಾಗುವ ಲುಂಗಿ ಇಂದಿನ ಆಧುನಿಕ ಯುಗದಲ್ಲಿ ಕೇವಲ ದೈನಂದಿನ ತೊಡುಗೆಯಾಗಿ ಉಳಿದಿಲ್ಲ. ಲುಂಗಿ ಫ್ಯಾಷನ್ ಲೋಕಕ್ಕೂ ಕಾಲಿಟ್ಟಿದೆ. ಸೈಕೋ ಚಿತ್ರದ ಸಂಗೀತ ನಿರ್ದೇಶನದಿಂದ ವಿಶ್ವಖ್ಯಾತರಾಗಿರುವ ಕನ್ನಡಿಗ ರಘು ದೀಕ್ಷಿತ್ ತಮ್ಮ ಎಲ್ಲ ಸ್ಟೇಜ್ ಶೋಗಳಲ್ಲಿ ಧಂ ಮಾರೋ ಧಂ ಶೈಲಿಯ ಲುಂಗಿಯನ್ನೇ ತೊಡುತ್ತಾರೆ. ಇದು ಕೇವಲ ಪುರುಷರ ಐಡೆಂಟಿಟಿಯಾಗಿರದೆ ಕೆಲ ರಾಷ್ಟ್ರಗಳಲ್ಲಿ ಹೆಂಗಸರೂ ಅನುಕೂಲಕ್ಕೆ ತಕ್ಕಂತಿರುವ ಲುಂಗಿಯನ್ನು ತೊಡುತ್ತಾರೆ.
ಹೆಚ್ಚಾಗಿ ದಕ್ಷಿಣ ಭಾರತೀಯರು ಮಾತ್ರವಲ್ಲ, ಪಾಕಿಸ್ತಾನ್, ಸಿಂಗಪುರ, ಸೋಮಾಲಿಯಾ, ಇಂಡೋನೇಷ್ಯಾ, ಓಮನ್, ಯೇಮನ್ ಮುಂತಾದ ರಾಷ್ಟ್ರಗಳ ಯುವಕರು ಲುಂಗಿಯನ್ನು ತೊಡುತ್ತಾರೆ. ಅರಬ್ ರಾಷ್ಟ್ರಗಳಲ್ಲಿ ಹೆಚ್ಚಾಗಿ ವಾಸಿಸುವ ಮಲಯಾಳಿ ಮತ್ತು ತಮಿಳರು ಲುಂಗಿಯ ಮೇಲೇ ಹೆಚ್ಚು ಅವಲಂಬಿತ. ಸುಮಾರು ಹತ್ತು ವರ್ಷಗಳ ಹಿಂದೆಯೇ ಅಸಭ್ಯ ತೊಡುಗೆಯ ವಿರುದ್ಧ ಅರಬ್ ರಾಷ್ಟ್ರ ಕಾನೂನು ಹೊರಡಿಸಿತ್ತು. ಈಗ ಲುಂಗಿಯ ಮೇಲೆ ಯುಎಇ ಕೆಂಗಟ್ಟು ಬಿಟ್ಟಿದೆ.












Click it and Unblock the Notifications