ಜೂ. 30 : ನಂಬರ್ ಪೋರ್ಟಬಿಲಿಟಿ ಶುರು ?
ಕಳೆದ ವರ್ಷ ಡಿಸೆಂಬರ್ 31 ಕ್ಕೆ ನಂಬರ್ ಪೋರ್ಟಬಿಲಿಟಿ ಆರಂಭವಾಗುತ್ತದೆ ಎಂದು ಸರಕಾರ ಹೇಳಿತ್ತು. ಅದರೆ, ವಿವಿಧ ಕಾರಣಗಳಿಂದ 2010ರ ಮಾರ್ಚ್ 31 ರೊಳಗೆ ಈ ಸೇವೆ ಆರಂಭಿಸುವುದಾಗಿ ಹೇಳಿತ್ತು. ಇದೀಗ ಮತ್ತೆ ತಾಂತ್ರಿಕ ನೆಪವೊಡ್ಡಿ ಜೂನ್ 30ಕ್ಕೆ ನಂಬರ್ ಪೋರ್ಟೆಬಿಲಿಟಿ ಆರಂಭಿಸುವುದಾಗಿ ಸರಕಾರ ಘೋಷಿಸಿದೆ.
ನಂಬರ್ ಪೋರ್ಟೆಬಿಲಿಟಿ ಅಂದರೆ, ಮೊಬೈಲ್ ಕಂಪನಿ ಬದಲಾದರೆ, ಸೆಲ್ ಫೋನ್ ಸಂಖ್ಯೆ ಬದಲಾಗುವ ಆತಂಕವಿಲ್ಲ. ಯಾವುದೇ ಕಂಪನಿಯ ಸಿಮ್ ಕಾರ್ಡ್ ಹೊಂದಿದ್ದರೂ ಮೊದಲಿದ್ದ ಸಂಖ್ಯೆಯೇ ಉಳಿಯಲಿದೆ. ಮೊಬೈಲ್ ನಂಬರ್ ಪೋರ್ಟಬಿಲಿಟಿ ಸೌಲಭ್ಯ ಒದಗಿಸಲು ಟೆಲ್ಕಾರ್ಡಿಯಾ ಟೆಕ್ನಾಲಜೀಸ್ ಸಂಸ್ಥೆಯ ಅಂಗ ಸಂಸ್ಥೆ ಎಂ ಎನ್ ಪಿ ಗೆ ಕೇಂದ್ರ ದೂರ ಸಂಪರ್ಕ ಇಲಾಖೆ ಈಗಾಗಲೇ ಅನುಮತಿ ನೀಡಿದೆ.
ಕರ್ನಾಟಕ, ತಮಿಳುನಾಡು, ಆಂಧ್ರಪ್ರದೇಶ ಮತ್ತು ಕೋಲ್ಕತ್ತಾ ನಗರದಲ್ಲಿ ಮೊದಲು ಈ ಸೇವೆ ಕಲ್ಪಿಸಲಾಗುವುದು. ಟೆಲ್ಕಾರ್ಡಿಯಾ ಸಂಸ್ಥೆಯು ವಿಶ್ವಾದ್ಯಂತ ಈ ಸೇವೆ ನೀಡುತ್ತಿದ್ದು ಭಾರತದಲ್ಲೂ ಉತ್ತಮ ಸೇವೆ ನೀಡುವ ವಿಶ್ವಾಸವಿದೆ ಎಂದು ಕಂಪನಿ ಸಿಇಓ ರಿಚರ್ಡ್ ಜಾಕೋಲೆಫ್ ತಿಳಿಸಿದ್ದಾರೆ. ಕೇಂದ್ರ ದೂರ ಸಂಪರ್ಕ ಇಲಾಖೆ ಹತ್ತು ವರ್ಷದ ಅವಧಿಗೆ ಅನುಮತಿ ನೀಡಿದೆ. ಆಯಾ ಮೊಬೈಲ್ ಕಂಪನಿ ಗಳೊಂದಿಗೆ ಒಡಂಬಡಿಕೆ ಮಾಡಿಕೊಳ್ಳಲಾಗುವುದು ಎಂದು ಅವರು ತಿಳಿಸಿದ್ದಾರೆ.