ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಗ್ರಾಮೀಣ ಭಾಗಕ್ಕೆ ಕೈಗಾರಿಕಾ ಘಟಕ ಅಗತ್ಯ

By * ಕೆ.ಆರ್.ಸೋಮನಾಥ್
|
Google Oneindia Kannada News

Raith Samavesha, Shivamogga
ಶಿವಮೊಗ್ಗ,ಮಾ.27: ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಜನತೆಗೆ ಉದ್ಯೋಗಾವಕಾಶ ನೀಡಲು ಗ್ರಾಮೀಣ ಮಟ್ಟದಲ್ಲಿ ಐದಾರು ಗ್ರಾಮಗಳನ್ನು ಸೇರಿಸಿ ಒಂದು ಕೈಗಾರಿಕಾ ಘಟಕದ ಸ್ಥಾಪನೆಯಾಗಬೇಕಿದ್ದು, ಇದು ದೇಶಾದ್ಯಂತ ವಿಸ್ತರಿಸಬೇಕಿದೆ ಎಂದು ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಪ್ರೊ: ಹೆಚ್.ಎಸ್.ದೊರೆಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.

ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ವತಿಯಿಂದ ನಗರದ ಬಾಲರಾಜ್‌ಅರಸ್ ರಸ್ತೆಯಲ್ಲಿ ಡಿಸಿಸಿಬ್ಯಾಂಕ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ರಾಜ್ಯ ಮಟ್ಟದ ಅಧ್ಯಯನ ಶಿಬಿರ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ದೇಶ, ರಾಜ್ಯ, ಹಳ್ಳಿಗಳ ವಿಚಾರವನ್ನು ಸಮಸ್ತವಾಗಿ ತಿಳಿದು ಸಂಘಟನೆಗೊಳ್ಳಲು ಇಂತಹ ಶಿಬಿರಗಳು ಅಗತ್ಯವಾಗಿವೆ. ಗ್ರಾಮೀಣ ಜನರ ಸಮಸ್ಯೆಗಳನ್ನು ಬಗೆಹರಿಸಲು ಪರ್ಯಾಯ ವ್ಯವಸ್ಥೆ ಮಾಡಬೇಕಿದ್ದು, ರೈತರ ಬೆಳೆಗಳಿಗೆ ವೈಜ್ಞಾನಿಕ ಬೆಲೆ ನಿಗದಿಯಾಗಬೇಕೆಂದು ತಿಳಿಸಿದರು.

ರೈತರು ಜಮೀನುಗಳಲ್ಲಿ ನಿಲ್ಲುವಂತಾಗಬೇಕು. ದೇಶಕ್ಕೆ ಅಗತ್ಯವಾದ ಆಹಾರವನ್ನು ಉತ್ಪಾದಿಸುವಂತಾಗಲು ವೈಜ್ಞಾನಿಕ ಬೆಲೆ ನಿಗದಿ ಅತ್ಯಗತ್ಯ. ಆದರೂ ಜಮೀನುಗಳನ್ನು ಕೈಗಾರಿಕೋದ್ಯಮಕ್ಕೆ ಬಳಸಲಾಗುತ್ತಿದೆ. ರೈತರ ವ್ಯವಸಾಯ ಭೂಮಿಯನ್ನು ಕಬಳಿಸಲಾಗುತ್ತಿದೆ. ಅಮೆರಿಕದ ಬಂಡವಾಳ ಶಾಹಿಗಳು ದೇಶೀಯ ಚಿಕ್ಕ ಹಿಡುವಳಿದಾರರಿಗೆ ಪರಿಹಾರ ಕೊಟ್ಟು ಅವರ ಅಲ್ಪ ಜಮೀನುಗಳನ್ನು ವಶಪಡಿಸಿಕೊಳ್ಳಲು ಕುತಂತ್ರ ಹೂಡಿದ್ದಾರೆ. ನಂತರ ವಶಪಡಿಸಿಕೊಂಡ ಭೂಮಿಯನ್ನು 50,100, 150 ಎಕರೆಗಳಂತೆ ಮಾಡಿ ತಮಗೆ ಅಗತ್ಯವಾದ ಬೆಳೆಗಳನ್ನು ಬೆಳೆಯುವಂತೆ ಸಲಹೆ ನೀಡಿ ತಮ್ಮ ದೇಶಕ್ಕೆ ಆಮದು ಮಾಡಿಕೊಳ್ಳು ವಂತಹ ಕಾರ್ಯಕ್ಕೆ ಮುಂದಾಲಿದ್ದು, ಇಲ್ಲಿನ ಜನರಿಗೆ ಯಾವುದೇ ಉಪಯೋಗವಾಗುವುದಿಲ್ಲ.

ವ್ಯವಸಾಯ ಪ್ರಧಾನವಾದ ನಮ್ಮ ದೇಶದಲ್ಲಿ ಆಹಾರಕ್ಕಾಗಿ ಬೇರೆ ಬೇರೆ ದೇಶಗಳ ಮುಂದೆ ಕೈ ಚಾಚುವುದು ಅವಮಾನ. ಅಗತ್ಯವಾದ ಆಹಾರವನ್ನು ಇಲ್ಲಿಯೇ ಬೆಳೆದು ಕೊಳ್ಳುವಂತಾಗಬೇಕು. ನಮ್ಮ ಸರ್ಕಾರಗಳಿಗೆ ಆತ್ಮಾಭಿಮಾನವಿಲ್ಲ. ಆತ್ಮಾಭಿಮಾನ ಶೂನ್ಯ ಸರ್ಕಾರ ನಮ್ಮದಾಗಿದೆ. ಪ್ರತಿಯೊಂದನ್ನೂ ಇತರ ದೇಶಗಳಿಂದ ಆಮದು ಮಾಡಿಕೊಳ್ಳಲಾಗುತ್ತಿದ್ದು, ಇಲ್ಲಿನ ರೈತರು ಸಂಕಷ್ಟಪಡುವಂತಾಗಿದೆ ಎಂದು ವಿಷಾದವ್ಯಕ್ತಪಡಿಸಿದರು.

ಗ್ರಾಮೀಣ ಭಾಗದ ಜನರಿಗೆ ಉದ್ಯೋಗಾವಕಾಶ ನೀಡಬೇಕಿದ್ದು, ಉದ್ಯೋಗ ಖಾತ್ರಿ ಯೋಜನೆಯಡಿ ಕೇವಲ ನೂರು ದಿನಗಳು ಮಾತ್ರ ಕೆಲಸ ಕೊಡುತ್ತೇವೆ ಎಂದು ಹೇಳುತ್ತಾರೆ. ಆದರೆ ಉಳಿದ 265 ದಿನ ಕೃಷಿ ಕಾರ್ಮಿಕರು ಹಸಿವು ಪಡಬೇಕೆ ಎಂದು ಪ್ರಶ್ನಿಸಿದರು.
ಅಭಿವೃದ್ಧಿಗಾಗಿ ಕೋಟಿ ಕೋಟಿ ಹಣ ಸುರಿಯಲಾಗುತ್ತಿದೆ. ಆದರೆ, ರೈತರ ಪ್ರಗತಿಗೆ ಶಾಶ್ವತವಾದ ಪರಿಹಾರದ ಯೋಜನೆ ಮಾಡಿದ್ದಾರೆಯೇ? ಹೀಗೆಯೇ, ಸಮಸ್ಯೆ ಮುಂದುವರೆದರೆ ಹೊಟ್ಟೆಗಿಲ್ಲದ ಜನರು ಕ್ರಾಂತಿ ಎದ್ದಾರು ಜೋಕೆ. ಹೋರಾಟಗಳು ಹುಡುಗಾಟವಾಗಬಾರದು. ನ್ಯಾಯ ಸಿಗುವವರೆಗೂ ಸೋಲದೆ ಮುನ್ನಡೆಯುವಂತಾಗಬೇಕು. ಪ್ರಸ್ತುತ ರೈತಸಂಘ ಶಕ್ತಿಯುತವಾಗಿದ್ದು, ಅವಕಾಶ ಸಿಕ್ಕರೆ ಆಡಳಿತದ ಚುಕ್ಕಾಣಿ ಹಿಡಿಯುವಂತಾಗಬೇಕು ಎಂದು ಆಶಿಸಿದರು.

ರೈತರು ಆಹಾರ ಪದಾರ್ಥ ಬೆಳೆಯುವುದನ್ನು ಬಿಟ್ಟು ವಾಣಿಜ್ಯ ಬೆಳೆಗಳಿಗೆ ಮಹತ್ವ ನೀಡುತ್ತಿದ್ದಾರೆ. ಅವರಿಗೆ ಸರಿಯಾದ ಮಾರ್ಗದರ್ಶನ ನೀಡಿ ದೇಶಕ್ಕೆ ಅಗತ್ಯವಾದ ಆಹಾರದ ಬೆಳೆಗಳನ್ನು ಬೆಳೆಯಲು ಮನವೊಲಿಸಬೇಕು ಎಂದ ಅವರು, ಭೂಮಿ ಸೇವೆ ಮಾಡುತ್ತೇವೆಂದವರಿಗೆ ಭೂಮಿಯನ್ನು ನೀಡುವಂತಹ ಯೋಜನೆಗಳು ಬರಬೇಕು. ಹಿಂದೆ ಅರಸರ ಕಾಲದಲ್ಲಿ ಕ್ರಾಂತಿಕಾರಕ ಬದಲಾವಣೆಗಳು ಆಗಿದ್ದು, ಇನಾಮ್ತಿ ರದ್ದು ಹಾಗೂ ಭೂಮಿಯ ಪರಿಮಿತಿ ನಿಗದಿ ಮಾಡುವಂತಹ ಶಾಸನಗಳು ಜಾರಿಗೆ ತರಲಾಗಿತ್ತು. ಗೇಣಿ ಪದ್ಧತಿ ಶೇ.80 ರಷ್ಟು ಪ್ರಗತಿಯನ್ನು ಸಾಧಿಸಿತ್ತು. ಅಂತೆಯೇ, ಈಗಲೂ ಕೂಡ ಅಗತ್ಯವಾದವರಿಗೆ ಭೂಮಿ ನೀಡಿ ವ್ಯವಸಾಯ ಮಾಡಲು ಅನುವು ಮಾಡಿಕೊಡಬೇಕೆಂದು ಸಲಹೆ ನೀಡಿದರು.

ರೈತ ಮುಖಂಡರಾದ ಶೋಭಾ ಸುಂದರೇಶ್ ಮಾತನಾಡಿ, ಗೋಹತ್ಯೆ ನಿಷೇಧ ಕಾಯ್ದೆ ಜಾರಿ ಮತ್ತು ಮಹಿಳೆಯರಿಗೆ ಮೀಸಲಾತಿ ದೊರೆತಿರುವುದು ಹರ್ಷದಾಯಕ. ರೈತರು ಇನ್ನೂ ಹೆಚ್ಚಿನ ರೀತಿಯಲ್ಲಿ ಸಂಘಟಿತರಾಗಿ ಅಭಿವೃದ್ಧಿಯನ್ನು ಸಾಧಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ರೈತ ಸಂಘದ ಅಧ್ಯಕ್ಷ ಕೆ.ಎಸ್.ಪುಟ್ಟಣ್ಣಯ್ಯ ವಹಿಸಿದ್ದರು. ಮಹಾಪ್ರಧಾನ ಕಾರ್ಯದರ್ಶಿ ಹೆಚ್.ಆರ್.ಬಸವರಾಜಪ್ಪ, ಖಜಾಂಚಿ ಡಾ|.ಬಿ.ಎಂ.ಚಿಕ್ಕಸ್ವಾಮಿ, ಉಪಾಧ್ಯಕ್ಷ ಡಾ|.ವೆಂಕಟರೆಡ್ಡಿ, ಕಾರ್ಯದರ್ಶಿ ವೀರಸ್ವಾಮಿ, ಮುಖಂಡ ಚಾಮರ ಮತ್ತಿತರರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X