ವಿಡಿಯೋದಲ್ಲಿ ಇದ್ದದ್ದು ನಾನೇ : ಸ್ವಾಮಿ ನಿತ್ಯಾನಂದ

ಲೈಂಗಿಕ ವಿಡಿಯೋದಲ್ಲಿ ನಾನಿಲ್ಲ, ನನ್ನ ರಂಜಿತಾ ನಡುವೆ ಏನಿಲ್ಲ ಏನಿಲ್ಲ ಎಂದು ಭಕ್ತರ ಮೇಲೆ ಆಣೆಯಿಟ್ಟು ಹೇಳಿದ್ದ ಬಿಡದಿಯ ನಿತ್ಯಾನಂದ ಧ್ಯಾನಪೀಠದ ಸ್ವಾಮಿಜಿ ಖಾಸಗಿ ಟಿವಿಯೊಂದಕ್ಕೆ ನೀಡಿದ ಸಂದರ್ಶನದಲ್ಲಿ ಲೈಂಗಿಕ ವಿಡಿಯೋದಲ್ಲಿ ಇರುವುದು ತಾನೇ ಮತ್ತು ತನ್ನ ಜೊತೆ ಇರುವುದು ರಂಜಿತಾಳೆ ಎಂದು ಪ್ರಥಮ ಬಾರಿಗೆ ಒಪ್ಪಿಕೊಂಡಿದ್ದಾನೆ.
ಕೆಲ ದಿನಗಳ ಹಿಂದೆ, ವಿಡಿಯೋದಲ್ಲಿ ಕಾಣಿಸಿಕೊಂಡಿದ್ದ ನಿತ್ಯಾನಂದ, ವಿಡಿಯೋದಲ್ಲಿರುವುದು ನಾನಲ್ಲ. ಅದರ ಸತ್ಯಾಸತ್ಯತೆ ತಿಳಿಯಲು ಸಿಡಿಯನ್ನು ಲಂಡನ್ನಿಗೆ ಕಳಿಸಿಕೊಡಬೇಕು ಎಂದು ಹೇಳಿದ್ದ. ಈಗ ತಾನು ಹೇಳಿದ ಹೇಳಿಕೆಗೇ ವಿರುದ್ಧವಾಗಿ ರಾಸಲೀಲೆಯಲ್ಲಿ ಇರುವುದು ತಾನೇ ಎಂದು ಹೇಳಿ ಎಲ್ಲ ಊಹಾಪೋಹಗಳಿಗೆ ತೆರೆಎಳೆದಿದ್ದಾನೆ.
ರಂಜಿತಾ ಹಿಂದೆ ನನ್ನ ಶಿಷ್ಯೆ ಆಗಿದ್ದಳು, ಇಂದು ಆಗಿದ್ದಾಳೆ ಮತ್ತು ಎಂದೆಂದಿಗೂ ನನ್ನ ಶಿಷ್ಯೆಯಾಗಿರುತ್ತಾಳೆ. ಬಹಳ ಕಾಲದಿಂದ ಅವಳು ನನ್ನ ಸೇವೆ ಮಾಡುತ್ತಿದ್ದಾಳೆ, ಅದನ್ನು ನಾನು ಅಲ್ಲಗಳೆಯುವುದಿಲ್ಲ. ವಿಡಿಯೋದಲ್ಲಿ ಇರುವುದು ನಾವಿಬ್ಬರೆ. ನನಗೂ ವೈಯಕ್ತಿಕ ಜೀವನವೆಂಬುದಿದೆ. ಅನೈತಿಕವಾಗಿ ಚಿತ್ರೀಕರಿಸಿದ ಖಾಸಗಿ ಜೀವನವನ್ನು ಬಿತ್ತರಿಸಿ ಮಾಧ್ಯಮಗಳು ನನ್ನ ಮಾನ ಹರಾಜು ಹಾಕಲು ನೋಡುತ್ತಿವೆ ಎಂದು ಸಂದರ್ಶನದಲ್ಲಿ ನಿತ್ಯಾನಂದ ಹೇಳಿದ್ದಾನೆ.
ನಾನು ಕೆಲ ಕಾಲ ಅಸ್ವಸ್ಥನಾಗಿದ್ದೆ. ಆಗ ರಂಜಿತಾಳೇ ನನ್ನ ಶುಶ್ರೂಶೆ ಮಾಡಿದಳು. ಔಷಧಿ ತೆಗೆದುಕೊಳ್ಳುತ್ತಿದ್ದರಿಂದ ವಿಡಿಯೋ ಚಿತ್ರೀಕರಿಸಿದಾಗ ನಾನು ಅರೆಪ್ರಜ್ಞಾವಸ್ಥೆಯಲ್ಲಿದ್ದೆ. ಆಗ ಸಂಚಿನಿಂದ ವಿಡಿಯೋ ಚಿತ್ರೀಕರಿಸಲಾಗಿದೆ ಮತ್ತು ತಿರುಚಲಾಗಿದೆ. ಇದು ಖಂಡಿತ ಸಮರ್ಥನೀಯವಲ್ಲ ಎಂದು ನಿತ್ಯಾನಂದ ಹೇಳಿದ್ದಾನೆ.
ನನಗೆ ಯಾವುದೇ ಬಗೆಯ ವಾಂಛೆ ಅಥವಾ ಎಲ್ಲವೂ ನನ್ನದಾಗಿರಬೇಕೆಂಬ ಹಪಾಹಪಿಯಿಲ್ಲ. ನನಗೆ ಯಾವುದೇ ವ್ಯಕ್ತಿಯ ಅವಶ್ಯಕತೆಯೂ ಇಲ್ಲ. ಆದರೆ, ಜೀವನದ ನಾನಾ ಆಯಾಮಗಳನ್ನು ಕಲಿಯುತ್ತಿದ್ದೇನೆ. ಎಲ್ಲೂ ತಲೆಮರೆಸಿಕೊಂಡಿಲ್ಲ. ಕಾನೂನಿನಿಂದ ದೂರ ಓಡಿಹೋಗುವುದೂ ಇಲ್ಲ ಎಂದು ನಿತ್ಯಾನಂದ ಮಂದಸ್ಮಿತನಾಗಿ ಹೇಳಿಕೊಂಡಿದ್ದಾನೆ.
ನಿತ್ಯಾನಂದ ಮತ್ತು ರಂಜಿತಾಳ ರಾಸಲೀಲೆಯ ವಿಡಿಯೋ ಬಿತ್ತರವಾಗುತ್ತಿದ್ದಂತೆ ಬಿಡದಿಯ ಆಶ್ರಮಕ್ಕೆ ದಾಳಿಯಿಟ್ಟಿದ್ದ ಭಕ್ತಜನರು ಆಶ್ರಮವನ್ನು ಧ್ವಂಸ ಮಾಡಿದ್ದರು. ತಲೆಮರೆಸಿಕೊಂಡಿರುವ ನಿತ್ಯಾನಂದ ತನ್ನ ಅಂತರ್ಜಾಲ ತಾಣದಲ್ಲಿ ನೀಡಲಾದ ವಿಡಿಯೋಗಳಲ್ಲಿ ಮತ್ತು ಖಾಸಗಿ ಸಂದರ್ಶನಗಳಲ್ಲಿ ಮಾತ್ರ ಕಾಣಿಸಿಕೊಳ್ಳುತ್ತಿದ್ದಾನೆ. ಇನ್ನು ಕೆಲವೇ ದಿನಗಳಲ್ಲಿ ಬೆಂಗಳೂರಿಗೆ ಬಂದು ಎಲ್ಲ ಆರೋಪಗಳಿಗೆ ಉತ್ತರ ನೀಡುವುದಾಗಿ ಹೇಳಿದ್ದಾನೆ.











Click it and Unblock the Notifications