ಸಿಇಟಿ: ಶೇ.50:50 ಅನುಪಾತದಲ್ಲಿ ಸೀಟು ಹಂಚಿಕೆ

ಈ ಬಾರಿಯೂ ಸರಕಾರ ಹಾಗೂ ಕಾಮೆಡ್ ಕೆ ಪ್ರತ್ಯೇಕವಾಗಿ ಸಿಇಟಿ ನಡೆಸಲಿವೆ. ಉನ್ನತ ಶಿಕ್ಷನ ಸಚಿವ ಅರವಿಂದ ಲಿಂಬಾವಳಿ ಹಾಗೂ ಖಾಸಗಿ ಕಾಲೇಜುಗಳ ಆಡಳಿತ ಮಂಡಳಿ ಪ್ರಮುಖರು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಶುಕ್ರವಾರ ನಡೆಸಿದ ಸಭೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದಾರೆ.
ಹೊಸ ಒಪ್ಪಂದದ ಪ್ರಕಾರ ಸರಕಾರ ಶೇ.50 ಸೀಟುಗಳನ್ನು ತುಂಬಲಿದೆ. ಮಿಕ್ಕ ಸೀಟುಗಳಿಗೆ ಕಾಮೆಡ್ ಕೆ ಪರೀಕ್ಷೆ ನಡೆಸುತ್ತದೆ. ಅಲ್ಪ ಸಂಖ್ಯಾತರ ವಿಭಾಗದಲ್ಲಿ ಶೇ.45 ಸೀಟಿಗೆ ಸಿಇಟಿ ಅನ್ವಯವಾಗಲಿದೆ. ಉಳಿದ ಶೇ.55ರಷ್ಟು ಸೀಟುಗಳು ಮ್ಯಾನೇಜ್ ಮೆಂಟ್ ಗೆ ಲಭ್ಯವಾಗಲಿವೆ.
ಬಡ ಪ್ರತಿಭಾವಂತರ ಶುಲ್ಕವನ್ನು ಹೆಚ್ಚಿಸುವಂತೆ ಆಡಳಿತ ಮಂಡಳಿ ಪಟ್ಟು ಹಿಡಿದಿತ್ತು. ವಿದ್ಯಾರ್ಥಿಗಳ ಹಿತ ಕಾಯುವಲ್ಲಿ ಸರಕಾರ ಯಶಸ್ವಿಯಾಗಿದ್ದು ಶುಲ್ಕವನ್ನು ರು.15 ಸಾವಿರಕ್ಕೆ ನಿಗದಿಗೊಳಿಸಿದೆ. ಪಿಯುಸಿ ಪೂರಕ ಪರೀಕ್ಷೆಯಲ್ಲಿ ಉತ್ತೀರ್ಣರಾದವರೂ ಸಿಇಟಿ ಬರೆಯಬಹುದು. 65 ದಿನಗಳಲ್ಲಿ 3ಸುತ್ತಿನಲ್ಲಿ ಸಿಇಟಿ ಪ್ರಕ್ರಿಯೆ ಪೂರ್ಣಗೊಳ್ಳಲಿದೆ ಎಂದು ಅರವಿಂದ ಲಿಂಬಾವಳಿ ತಿಳಿಸಿದರು.
ಕುಟುಂಬದ ವಾರ್ಷಿಕ ಆದಾಯ ರು.2 ಲಕ್ಷಕ್ಕಿಂತಲೂ ಕಡಿಮೆ ಇರುವ ಪ್ರತಿಭಾವಂತ ವಿದ್ಯಾರ್ಥಿಗಳ ಸಿಇಟಿ ರ‌್ಯಾಂಕ್ 20 ಸಾವಿರಕ್ಕೆ ನಿಗದಿಗೊಳಿಸಲಾಗಿದೆ. ಈ ವಿದ್ಯಾರ್ಥಿಗಳು ರು.15 ಸಾವಿರ ಶುಲ್ಕವನ್ನು ಭರಿಸಬೇಕಾಗುತ್ತದೆ. ಉಳಿದ ರು.10 ಸಾವಿರವನ್ನು ಮ್ಯಾನೇಜ್ ಮೆಂಟ್ ಗೆ ಸರಕಾರ ಭರಿಸಲಿದೆ ಎಂದು ಸಚಿವರು ತಿಳಿಸಿದರು.












Click it and Unblock the Notifications