ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದೇವೇಗೌಡ, ಯಡಿಯೂರಪ್ಪ ಮಾತುಕತೆ 'ನೈಸ್'

By Rajendra
|
Google Oneindia Kannada News

H D Devegowda
ಬೆಂಗಳೂರು, ಜ.30: ನೈಸ್ ವಿವಾದ ತಾರಕಕ್ಕೇರಿದ ನಂತರ ಇದೇ ಮೊದಲ ಬಾರಿಗೆ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಅವರು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರನ್ನು ಶನಿವಾರ ಸಂಜೆ 4.30ಕ್ಕೆ ಸರಿಯಾಗಿ ಭೇಟಿ ಮಾಡಿದರು. ತಮ್ಮನ್ನು ವಾಚಾಮ ಗೋಚರ ನಿಂದಿಸಿದ್ದ ದೇವೇಗೌಡರನ್ನು ಪುಷ್ಪಗುಚ್ಛ ನೀಡುವುದರೊಂದಿಗೆ ಯಡಿಯೂರಪ್ಪ ತಮ್ಮ ಗೃಹ ಕಚೇರಿ ಕೃಷ್ಣಾಗೆ ಸ್ವಾಗತಿಸಿದರು. ರಾಜ್ಯ ರಾಜಕೀಯದಲ್ಲಿ ಐತಿಹಾಸಿಕ ರಾಜಕೀಯ ಬೆಳವಣಿಗೆಯೊಂದು ದಾಖಲಾಯಿತು.

ದೇವೇಗೌಡರು ನೈಸ್ ವಿರುದ್ಧ ಬೀದಿಗಿಳಿದು ಹೋರಾಟ ಮಾಡಿದ್ದು, ಸತ್ಯಾಗ್ರಹ ಮಾಡಿದ್ದು ಆಯ್ತು. ರಾಜ್ಯಪಾಲರನ್ನು ಭೇಟಿ ಮಾಡಿದ್ದು ಆಯ್ತು. ಇದೀಗ ನೇರವಾಗಿ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ನೈಸ್ ಕುರಿತ ಹಳೆಯ ಕಡತಗಳನ್ನೇ ದೇವೇಗೌಡರು ಸಮಾಲೋಚನೆಯಲ್ಲಿ ಮುಂದಿಟ್ಟರು.

ಮುಖ್ಯಮಂತ್ರಿಗಳ ಜೊತೆ ಒಂದೂವರೆ ಗಂಟೆಗಳ ಚರ್ಚೆಯ ಬಳಿಕ ದೇವೇಗೌಡರು ಹೇಳಿದ್ದು,ಮುಖ್ಯಮಂತ್ರಿಗಳು ನಮ್ಮ ಎಲ್ಲ ಸಮಸ್ಯೆಗಳನ್ನು ಸಮಾಧಾನದಿಂದ ಆಲಿಸಿದರು. ನೈಸ್ ಕುರಿತ ಎಲ್ಲ ದಾಖಲೆಗಳನ್ನು ಅವರಿಗೆ ನೀಡಲಾಯಿತು. ಸುಪ್ರೀಂಕೋರ್ಟ್ ನ ನಿರ್ದೇಶನದ ಪ್ರಕಾರ ಕ್ರಮ ಕೈಗೊಳ್ಳುವ ಭರವಸೆಯನ್ನು ಮುಖ್ಯಮಂತ್ರಿಗಳು ನೀಡಿದರು ಎಂದು ತಿಳಿಸಿದರು.

ಸಿಪಿಐ(ಎಂ) ಮುಖಂಡ ಜಿ ಎನ್ ನಾಗರಾಜ್ ಮಾತನಾಡುತ್ತಾ, ನೈಸ್ ನ ಮೂಲ ಒಪ್ಪಂದ ಉಲ್ಲಂಘನೆಯಾಗಿದೆ. ಜೆ ಎಚ್ ಪಟೇಲ್ ಮತ್ತು ಎಸ್ ಎಂ ಕೃಷ್ಣ ಅವರ ಸರಕಾರದ ಅವಧಿಯಲ್ಲಿ ಮೂಲ ಒಪ್ಪಂದವನ್ನು ಮತ್ತಷ್ಟು ಉಲ್ಲಂಘನೆ ಮಾಡಲಾಯಿತು. ಯಡಿಯೂರಪ್ಪ ಸರಕಾರ ಮೂಲ ಒಪ್ಪಂದ ಉಲ್ಲಂಘನೆಯನ್ನು ಕೈಬಿಡಬೇಕು ಎಂದು ಮುಖ್ಯಮಂತ್ರಿಗಳಿಗೆ ಸೂಚಿಸಿದ್ದಾಗಿ ತಿಳಿಸಿದರು.

ಕಳೆದ 25 ದಿನಗಳಿಂದ ನೈಸ್ ವಿರುದ್ಧ ದೇವೇಗೌಡರು ರೈತರೊಂದಿಗೆ ಸೇರಿ ನಡೆಸಿದ ಹೋರಾಟ, ಪ್ರತಿಭಟನೆ ಇಂದು ನಿರ್ಣಾಯಕ ಹಂತ ತಲುಪಿ ನೈಸಾಗಿ ಮುಗಿಯಿತು. ಮುಖ್ಯಮಂತ್ರಿಗಳ ನಿವಾಸದ ಎದುರು ಪ್ರತಿಭಟನೆ ಮಾಡುವುದಾಗಿ ಗೌಡರು ಸರಕಾರಕ್ಕೆ ಎಚ್ಚರಿಕೆ ನೀಡಿದ್ದರು. ಈ ಹಿನ್ನೆಲೆಯಲ್ಲಿ ದೇವೇಗೌಡರನ್ನು ಯಡಿಯೂರಪ್ಪ ಚರ್ಚೆಗೆ ಆಹ್ವಾನಿಸಿದ್ದರು.

ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡುವುದಕ್ಕೂ ಮುನ್ನ ದೇವೇಗೌಡರು ಮಧ್ಯಾಹ್ನ 1 ಗಂಟೆಗೆ ರಾಜ್ಯಪಾಲ ಭಾರದ್ವಾಜ್ ಅವರನ್ನು ಭೇಟಿ ಮಾಡಿ ಮನವಿ ಪತ್ರ ಸಲ್ಲಿಸಿದ್ದರು. ರಾಜ್ಯಪಾಲರಿಗೆ ಸಲ್ಲಿಸಿದ ನೈಸ್ ಕಡತಗಳನ್ನು ಮುಖ್ಯಮಂತ್ರಿಗಳಿಗೂ ಸಲ್ಲಿಸಿದರು.

ಮುಖ್ಯಮಂತ್ರಿಗಳ ಗೃಹ ಕಚೇರಿ ಕೃಷ್ಣಾದಲ್ಲಿ ಚರ್ಚೆ ನಡೆಯುತ್ತಿದ್ದರೆ ಹೊರಗೆ ರೈತರು ಪ್ರತಿಭಟನೆಗೆ ಇಳಿದಿದ್ದರು. ನಮ್ಮನ್ನು ಮಾತುಕತೆ ಬಿಡಿ ಎಂದು ಪೊಲೀಸರೊಂದಿಗೆ ಮಾತಿನ ಚಕಮಕಿ ನಡೆಯಿತು. ನಿಜವಾದ ಭೂಮಿ ಕಳೆದುಕೊಂಡ ರೈತರು ನಾವು ಎಂದು ಅವರು ಅಸಹನೆ ವ್ಯಕ್ತಪಡಿಸುತ್ತಿದ್ದರು.

ಸಚಿವರಾದ ಕಟ್ಟಾ ಸುಬ್ರಹ್ಮಣ್ಯ ನಾಯ್ಡು, ಆರ್ ಅಶೋಕ್, ಸುರೇಶ್ ಕುಮಾರ್, ಉಮೇಶ್ ಕತ್ತಿ, ಡಿಬಿ ಚಂದ್ರೇಗೌಡ ಮುಂತಾದವರು ಸಮಾಲೋಚನೆಯಲ್ಲಿ ಉಪಸ್ಥಿತರಿದ್ದರು. ದೇವೇಗೌಡರ ಜೊತೆ ಸಿಪಿಎಂ ಮುಖಂಡರಾದ ಜಿ ಎನ್ ನಾಗರಾಜ್, ಶ್ರೀರಾಮರೆಡ್ಡಿ ಸೇರಿದಂತೆ ಹಲವು ರೈತ ಮುಖಂಡರು ಚರ್ಚೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X