ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಶ್ವತ್ಥ್ ರಾಜ್ ಅಲ್ಲ, ವಿಷ್ಣುನೂ ಅಲ್ಲ

|
Google Oneindia Kannada News

ಮೈಸೂರು ಜ. 18 : ಕನ್ನಡ ಚಿತ್ರರಂಗದಲ್ಲಿ ಜಾಸ್ತಿ ಸಂಭಾವನೆ ಪಡೆಯುವ ನಾಯಕ ನಟರಿಗೆ ಸಿಗುವಷ್ಟು ಮರ್ಯಾದೆ ಪೋಷಕ ನಟರಿಗೆ ಸಿಗದು ಎಂಬ ಅಂಶಕ್ಕೆ ಇಂದು ಮೈಸೂರು ನಗರ ಮತ್ತೆ ಸಾಕ್ಷಿಯಾಯಿತು. ಅಭಿಮಾನಿಗಳ ಹಕ್ಕೊತ್ತಾಯವಿಲ್ಲ, ಗಲಾಟೆಯಿಲ್ಲ, ಬೆಂಕಿ ಹಚ್ಚಲಿಲ್ಲ, ಕಲಾವಿದರು ಮತ್ತು ಸರಕಾರದ ನಡುವೆ ಸಂಧಾನ ಮಾತುಕತೆಗಳು ನಡೆಯಲಿಲ್ಲ. ಅಂತೂ ನಮ್ಮ ಚಾಮಯ್ಯ ಮೇಷ್ಟ್ರು ಎಂದೇ ಖ್ಯಾತರಾಗಿದ್ದ ಹಿರಿಯ ಕಲಾವಿದ ಕರಗದಹಳ್ಳಿ ಸುಬ್ಬರಾಯ ಅಶ್ವತ್ಥ್ ಅವರ ಅಂತ್ಯಕ್ರಿಯೆ ಇಲ್ಲಿನ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರುವ ಪ್ರಶಾಂತ ಹಿಂದೂ ರುದ್ರಭೂಮಿಯಲ್ಲಿ ಸೋಮವಾರ ಸಂಜೆ ಶಾಂತವಾಗಿ ನೆರವೇರಿತು.

ಕನ್ನಡ ಚಿತ್ರರಂಗದಲ್ಲಿ ಐದು ದಶಕಗಳ ಕಾಲ ಸೇವೆ ಸಲ್ಲಿಸಿ ಸುಮಾರು 370 ಚಿತ್ರಗಳಲ್ಲಿ ತಂದೆಯಾಗಿ, ಮಾವನಾಗಿ, ಖಳನಾಗಿ, ಅಸಹಾಯಕ ಅಣ್ಣನ ಪಾತ್ರ ನಿರ್ವಹಿಸಿದ್ದ ಕೆ ಎಸ್ ಅಶ್ವತ್ಥ್ ಎಂಬ ಹಿರಿಯ ಕಲಾವಿದನಿಗೆ ಸಿಗಬೇಕಾದ ಗೌರವ ಸಿಕ್ಕಿತೇ ? 40 ವರ್ಷಗಳ ಕನ್ನಡಿಗರಿಗೆ ಮನರಂಜನೆ ಒದಗಿಸಿದ್ದ ಮೇರು ಕಲಾವಿದನಿಗೆ ಸಿಗಬೇಕಾದ ಮಾನ್ಯತೇ ಸಿಗಲಿಲ್ಲವೇ ? ಎಂಬ ಪ್ರಶ್ನೆ ಅನೇಕರನ್ನು ಕಾಡಿತು. ಅವರ ಕಾಲದ ನಂತರ ಅವರನ್ನು ನೆನಪಿಟ್ಟುಕೊಳ್ಳುವುದಾದರೂ ಹೇಗೆ ? ಚಿತ್ರರಂಗದ ಯಜಮಾನ ಮುನುಷ್ಯರೊಬ್ಬ ತೀರಿ ಹೋದಾಗ ರಾಜ್ಯ ಚುಕ್ಕಾಣಿ ಹಿಡಿದ ವ್ಯಕ್ತಿಗೆ ಅಂದರೆ ನಿಮ್ಮ ಪ್ರೀತಿಯ ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಅವರಿಗೆ ಖುದ್ದಾಗಿ ಅಂತಿಮ ನಮನ ಸಲ್ಲಿಸಬೇಕು ಎಂಬ ಇಚ್ಛೆ ಬರಲಿಲ್ಲವೆ!

ಒಬ್ಬ ನಟ ತೀರಿ ಹೋದಾಗ ಇದೇ ಸರಕಾರ ಎದ್ದು ಬಿದ್ದೂ ಓಡಿ ಹೋಗಿ ತಾಸುಗಟ್ಟಲೇ ಕಾದು ಕುಳಿತು ಅಂತ್ಯಕ್ರಿಯೆ ಮಾಡಿ ಮುಗಿಸುತ್ತದೆ. ಆತನ ಸಲುವಾಗಿ ವಿಶೇಷ ಪ್ಯಾಕೇಜ್ ಗಳನ್ನು ಘೋಷಣೆ ಮಾಡುತ್ತದೆ. ಆತನ ಹೆಸರಿನಲ್ಲಿ ಪ್ರಶಸ್ತಿಗಳನ್ನು ನೀಡುತ್ತೇವೆ ಎಂದು ವಾಗ್ದಾನ ಮಾಡುತ್ತದೆ. ಅಭಿಮಾನಿಗಳ ಹಾಗೂ ಹಿತೈಷಿಗಳ ಒತ್ತಡಕ್ಕೆ ಮಣಿದು ಸ್ಟುಡಿಯೋಗಳಲ್ಲಿ ಎಕರೆಗಟ್ಟಲೇ ಜಾಗ ನೀಡಿ ಗೌರವಿಸುತ್ತದೆ. ಇದೆಲ್ಲವೂ ನಟಸಾರ್ವಭೌಮ ಡಾ ರಾಜ್ ಕುಮಾರ್, ಡಾ ವಿಷ್ಣುವರ್ಧನ್ ವಿಷಯದಲ್ಲಿ ಆಗಿದೆ. ಅದು ತಪ್ಪಲ್ಲ ಬಿಡಿ. ಇನ್ನೊಂದು ವಿಚಾರವೆಂದರೆ, ಅಭಿಮಾನಿಗಳ ಸಂಘ ಇದ್ದರೆ, ಒಬ್ಬ ನಟನಿಗೆ ಈ ಪರಿಯ ಮಾನ ಸಂಮಾನಗಳು ಲಭ್ಯ, ಆದರೆ, ನಮ್ಮಲ್ಲಿ ಪೋಷಕರ ನಟರಿಗೆ ಯಾರೂ ಅಷ್ಟು ಮಹತ್ವ ಕೊಡುವುದಿಲ್ಲ.

ರಾಜ್ ಮತ್ತು ವಿಷ್ಣು ಮಹಾನ್ ನಟರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ, ಕೆ ಎಸ್ ಅಶ್ವತ್ಥ್ ಅವರು ಅಭಿನಯದಲ್ಲಿ ಯಾರಿಗೇನು ಕಮ್ಮಿ ಇದ್ದರು ಎನ್ನುವುದೇ ನಮ್ಮ ಪ್ರಶ್ನೆ. 370 ಚಿತ್ರಗಳಲ್ಲಿ ನಟಿಸಿದ ಪ್ರಬುದ್ಧ ಕಲಾವಿದನನ್ನು ಸರಕಾರ ಕಡೆಗಣಿಸಿತು ಎನ್ನುವುದು ಖೇದಕರ ಸಂಗತಿ. ಅಶ್ವತ್ಥ್ ಅವರನ್ನು ಸುಮ್ಮನೆ ಪ್ರೀತಿಸುತ್ತಿದ್ದ ಅವರ ಅಭಿಮಾನಿಗಳ ಬಳಗದಲ್ಲಿ ಇಂತಹದ್ದೊಂದು ಅಸಮಾಧಾನ ಮಡುಗಟ್ಟಿರುವುದು ಅಂತ್ಯ ಸಂಸ್ಕಾರ ವೇಳೆಯಲ್ಲಿ ಕಂಡುಬಂದಿತು. ಹಿರಿಯ ನಟನಿಗೆ ನಿಜಕ್ಕೂ ಸಿಗಬೇಕಾದ ಗೌರವ ಸಿಗಲಿಲ್ಲ ಎಂಬುದೇ ಅವರ ಅಭಿಮಾನಿಗಳ ನೋವು.

ರಾಜ್ ಕುಮಾರ್ ಅವರನ್ನು ಕಂಠೀರವ ಸ್ಟುಡಿಯೋದಲ್ಲಿ , ವಿಷ್ಣುವರ್ಧನ್ ಅವರನ್ನು ಅಭಿಮಾನಿ ಸ್ಟುಡಿಯೋದಲ್ಲಿ ಅಂತ್ಯಕ್ರಿಯೆ ನಡೆಸಲಾಯಿತು. ಆದರೆ, ಅಶ್ವತ್ಥ್ ಅವರನ್ನು ಮೈಸೂರಿನ ಚಾಮುಂಡಿ ಬೆಟ್ಟದ ತಪ್ಪಿಲಿನಲ್ಲಿರುವ ಚಿತಾಗಾರವೊಂದರಲ್ಲಿ ಅಂತ್ಯಕ್ರಿಯೆ ನಡೆಸಿದ್ದು ಯಾವ ನ್ಯಾಯ? ಅಶ್ವತ್ಥ್ ಅವರ ಕಲೆ, ಅವರಲ್ಲಿನ ಕಲಾವಿದನಿಗೆ ಗೌರವ ಕೊಡಬೇಕಿತ್ತು. ಮೈಸೂರಿನಲ್ಲಿ ಸರಕಾರಿ ಒಡೆತನದ ಪ್ರಿಮಿಯರ್ ಸ್ಟುಡಿಯೋದಲ್ಲಿ ಅವರ ಅಂತ್ಯಕ್ರಿಯೆ ನಡೆಸಿದ್ದರೆ ಎಲ್ಲೋ ಒಂದು ಕಡೆ ನ್ಯಾಯದ ತಕ್ಕಡಿ ನೆಟ್ಟಗೆ ನಿಲ್ಲುತ್ತಿತ್ತು.

ಅಭಿಮಾನಿಗಳು ನಮ್ಮ ಚಾಮಯ್ಯ ಮೇಷ್ಟ್ರು ಎಂದು ಹೆಮ್ಮೆಯಿಂದ ಹೇಳಿಕೊಳ್ಳಬಹುದಿತ್ತು. ಆದರೆ, ಇದಾವುದನ್ನು ಸರಕಾರ ಮಾಡಲಿಲ್ಲ. ಹೋಗಲಿ, ಕಲಾವಿದರ ಸಂಘ, ವಾಣಿಜ್ಯ ಮಂಡಳಿ ಹೀಗೆ ನೂರೆಂಟು ಸಂಘ ಸಂಸ್ಥೆಗಳನ್ನು ಮಾಡಿಕೊಂಡಿರುವ ಚಿತ್ರರಂಗದ ಹಿರಿಯರಿಗಾದರೂ ಈ ಬಗ್ಗೆ ಗಮನ ಹರಿಸದಿರುವುದು ವಿಪರ್ಯಾಸದ ಸಂಗತಿ.

ಅಂತ್ಯಕ್ರಿಯೆ ಸಮಯದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ಗೈರಿನಲ್ಲಿ ಕೈಗಾರಿಕೆ ಸಚಿವ ಮುರುಗೇಶ ನಿರಾಣಿ ಸರಕಾರದ ಪರವಾಗಿ ಅಂತಿಮ ನಮನ ಸಲ್ಲಿಸಿದರು. ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಉದ್ಯಾನವನಕ್ಕೆ ಅಶ್ವತ್ಥ್ ಅವರ ಹೆಸರಿಡುವುದಾಗಿ ಕಂಠೀರವ ಸ್ಟುಡಿಯೋದ ಅಧ್ಯಕ್ಷ ಗಿರೀಶ್ ಮಟ್ಟೆಣ್ಣವರ್ ಘೋಷಿಸಿದರು. ಹಿರಿಯ ಕಲಾವಿದನ ಕಲಾ ಸೇವೆಗೆ ಇಷ್ಟು ಸಾಕೇ ? ಇದನ್ನು ಮುಖ್ಯಮಂತ್ರಿಯೇ ಘೋಷಣೆ ಮಾಡಬಹುದಿತ್ತಲ್ಲ ?

ಒಟ್ಟಿನಲ್ಲಿ ಸರಕಾರ ತಾರತಮ್ಯ ಮಾಡಿರುವುದು ಸತ್ಯ. ಏನೇ ಆಗಲಿ ಹಿರಿಯ ಚೇತನ ಅಶ್ವತ್ಥ್ ನಮ್ಮಗಲಿದ್ದಾರೆ. ಅವರ ಅತ್ಮಕ್ಕೆ ಶಾಂತಿ ಸಿಗಲಿ. ರಾಜ್ ಕುಮಾರ್, ವಿಷ್ಣುವರ್ಧನ್ ಅವರಿಗೆ ಕಂಠೀರವ ಮತ್ತು ಅಭಿಮಾನ್ ಸ್ಟುಡಿಯೋದಲ್ಲಿ ಜಾಗ ಕೊಟ್ಟಿರುವ ಬಗ್ಗೆ ಪ್ರಶ್ನಿಸುವ ಲೇಖನ ಇದಲ್ಲ. ಅಶ್ವತ್ಥ್ ಅವರಿಗೂ ಇಂತಹ ಗೌರವ ಸಿಗಬೇಕಿತ್ತು ಎನ್ನುವ ತರ್ಕ ಮಂಡಿಸುವುದಷ್ಟೇ ಆಗಿದೆ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X