ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾವೇರಿ ಜಿಲ್ಲೆ ನೆರೆಪರಿಹಾರ ಪಕ್ಷಿನೋಟ

By Staff
|
Google Oneindia Kannada News

Revenue minister Karunakar Reddy
ಹಾವೇರಿ, ನ.21 : ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದವರಿಗೆ ಪರಿಹಾರ ನೀಡುವ ವಿಷಯಗಳ ಕುರಿತಂತೆ ಆಯಾ ತಾಲೂಕಿನ ತಹಶೀಲ್ದಾರರು ಹಾನಿ ಆಗಿರುವ ವಿವರ ಅಂದಾಜು ನಷ್ಟ ಪರಿಹಾರ ವಿತರಣೆ ಕುರಿತ ಮಾರ್ಗದರ್ಶಿ ಸೂತ್ರ ಕುರಿತು ಮಾಹಿತಿ ಹೊಂದಿರಬೇಕು. ಪ್ರತಿಯೊಬ್ಬ ಸಂತ್ರಸ್ತರಿಗೆ ಬೇಗನೇ ನ್ಯಾಯಯುತ ಪರಿಹಾರ ಮುಟ್ಟಿಸುವ ಸಾಮಾಜಿಕ ಜವಾಬ್ದಾರಿಯನ್ನು ನಿರ್ವಹಿಸಬೇಕು ಎಂದು ರಾಜ್ಯ ಕಂದಾಯ ಸಚಿವರಾದ ಜಿ.ಕರುಣಾಕರರೆಡ್ಡಿ ಕರೆ ಕೊಟ್ಟಿದ್ದಾರೆ.

ಹಾವೇರಿಯ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಶುಕ್ರವಾರ ಜರುಗಿದ ಜಿಲ್ಲೆಯಲ್ಲಿನ ಪ್ರಕೃತಿ ವಿಕೋಪ ಹಾಗೂ ಪರಿಹಾರ ನೀಡಿಕೆ ಕುರಿತ ಪ್ರಗತಿಯನ್ನು ಪರಿಶೀಲಿಸಿ ಅವರು ಮಾತನಾಡುತ್ತಿದ್ದರು. ಪ್ರಕೃತಿ ವಿಕೋಪ ಸಂದರ್ಭದಲ್ಲಿ ಹಾನಿಗೊಳಗಾದ ಸಾರ್ವಜನಿಕ ಆಸ್ತಿಪಾಸ್ತಿಗಳ ಪರಿಶೀಲನೆ, ದುರಸ್ತಿ ಕಾಮಗಾರಿಗಳು ಗುಣಮಟ್ಟದಿಂದ ಕೂಡಿರುವ ಹಾಗೂ ನಿಗದಿತ ಸಮಯದಲ್ಲಿ ಪೂರ್ತಿಗೊಳಿಸುವ ಪ್ರಕ್ರಿಯೆಯನ್ನು ಆಗಾಗ ಪರಿಶೀಲಿಸಬೇಕು ಎಂದು ಸಚಿವರು ತಹಶೀಲ್ದಾರರುಗಳಿಗೆ ಸೂಚಿಸಿದರು.

ಪರಿಹಾರ ನೀಡುವಿಕೆ ರಾಜ್ಯಸರ್ಕಾರದ ಜವಾಬ್ದಾರಿಯಿದ್ದು,ಅದರ ವಿತರಣೆ ಸಂದರ್ಭದಲ್ಲಿ ಅರೆಮನಸ್ಸಿನಿಂದ ಕಾರ್ಯನಿರ್ವಹಿಸದೆ, ಪರಿಹಾರ ನೀಡುವಿಕೆ ಉದ್ದೇಶ ಈಡೇರಿಸಿ ಸಂತ್ರಸ್ತರಿಗೆ ಪರಿಹಾರ ಮುಟ್ಟಿದೆ ಎನ್ನುವ ಭಾವನೆ ಇರುವಂತೆ ನೋಡಿಕೊಳ್ಳಿ. ಲೋಕೋಪಯೋಗಿ ಹಾಗೂ ಜಿ.ಪಂ.ಇಂಜನಿಯರಿಂಗ್ ಇಲಾಖೆಗಳು ಪರಿಹಾರ ಕಾಮಗಾರಿಗಳಲ್ಲಿ ಕುಡಿಯುವ ನೀರು, ರಸ್ತೆ ಸಂಪರ್ಕ ಮುಂತಾದವುಗಳಿಗೆ ಪ್ರಥಮ ಆದ್ಯತೆ ನೀಡಿ ಕಾಮಗಾರಿಗಳನ್ನು ಬೇಗನೆ ಮುಗಿಸಬೇಕೆಂದು ಕರುಣಾಕರ ರೆಡ್ಡಿ ಸೂಚನೆ ಕೊಟ್ಟರು.

ಪ್ರಕೃತಿ ವಿಕೋಪದಡಿ ಪ್ರಸಕ್ತ ಸಾಲಿನಲ್ಲಿ ಜಿಲ್ಲೆಗೆ 46 ಕೋಟಿ ರೂ.ಅನುದಾನ ಈವರೆಗೆ ನೀಡಲಾಗಿದೆ. ಇದರಲ್ಲಿ 43 ಕೋಟಿ ರೂ. ವೆಚ್ಚವಾಗಿದ್ದು,ಉಳಿದ 2.98 ಕೋಟಿ ರೂ.ಗಳಲ್ಲಿ ಪರಿಹಾರ ಕಾಮಗಾರಿಗಳಿಗೆ ಇನ್ನೂ 2.46 ಕೋಟಿ ರೂ.ಬಿಡುಗಡೆ ಮಾಡಬೇಕಿದೆ ಎಂದು ಸಭೆಯಲ್ಲಿ ತಿಳಿಸಲಾಯಿತು.

ಅತೀವೃಷ್ಟಿ ಪರಿಹಾರ ಕಾರ್ಯಗಳಿಗೆ ತಾಲೂಕಾವಾರು ಬಿಡುಗಡೆಮಾಡಿದ ಅನುದಾನ ಇಂತಿದೆ. ಹಾವೇರಿ 6.75 ಕೋಟಿ, ರಾಣೇಬೆನ್ನೂರು 7 ಕೋಟಿ, ಬ್ಯಾಡಗಿ 3.35 ಕೋಟಿ, ಹಿರೇಕೆರೂರು5.65 ಕೋಟಿ, ಸವಣೂರು 4.69 ಕೋಟಿ, ಶಿಗ್ಗಾಂವ 4.87 ಕೋಟಿ ಹಾಗೂ ಹಾನಗಲ್ಲ ತಾಲೂಕಿಗೆ 2.63 ಕೋಟಿ ರೂ. ಹಂಚಿಕೆ ಮಾಡಲಾಗಿದೆ.

ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಎಚ್.ಜಿ.ಶ್ರೀವರ, ಶಾಸಕರುಗಳಾದ ನೆಹರೂ ಓಲೇಕಾರ, ಜಿ.ಶಿವಣ್ಣ, ಕಂದಾಯ ಇಲಾಖೆ ಕಾರ್ಯದರ್ಶಿಗಳಾದ ಜಿ.ನಾರಾಯಣಸ್ವಾಮಿ, ಜಿ.ಪಂ.ಅಧ್ಯಕ್ಷೆ ಶಾರದಾ ಹಾದಿಮನಿ, ಜಿಪಂ ಮುಖ್ಯಕಾರ್ಯನಿರ್ವಾಹಣಾಧಿಕಾರಿ ಎಂ.ಎಸ್.ಚೆನ್ನಪ್ಪಗೌಡರ ಉಪಸ್ಥಿತರಿದ್ದರು.

(ದಟ್ಸ್ ಕನ್ನಡ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X