ನವ ಗ್ರಾಮಗಳ ಮೂಲ ಸೌಲಭ್ಯಗಳಿಗೆ ಆದ್ಯತೆ
ಬೆಳಗಾವಿ,ನ. 4 : ನೆರೆ ಹಾವಳಿಯಿಂದ ತೊಂದರೆಗೊಳಗಾಗುತ್ತಿರುವ ಗ್ರಾಮಗಳನ್ನು ಸ್ಥಳಾಂತರಿಸುವ ಪ್ರಕ್ರಿಯೆ ಈಗ ಚಾಲ್ತಿಯಲ್ಲಿದ್ದು, ನವಗ್ರಾಮಗಳಲ್ಲಿ ಎಲ್ಲ ಮೂಲಭೂತ ಸೌಲಭ್ಯಗಳನ್ನು ಅಭಿವೃದ್ಧಿಪಡಿಸಲಾಗುವದೆಂದು ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ರಾಮದುರ್ಗ ತಾಲೂಕಿನ ರಂಕಲಕೊಪ್ಪ, ಚಿಕ್ಕಮೂಲಂಗಿ ಮತ್ತು ಲಿಂಗದಾಳ ಗ್ರಾಮಗಳ ಸ್ಥಳಾಂತರಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡುತ್ತಿದ್ದ ಅವರು ನವಗ್ರಾಮಗಳಲ್ಲಿ ಕುಡಿಯುವ ನೀರು, ವಿದ್ಯುತ್, ರಸ್ತೆಗಳಂತಹ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುವ ಜೊತೆಗೆ ಶಾಲೆ, ಕಾಲೇಜುಗಳನ್ನು ಸಹ ಪ್ರಾರಂಭಿಸಲಾಗುವುದೆಂದು ಹೇಳಿದರು.
ಸಂತ್ರಸ್ತ ಜನರ ಸಂಕಷ್ಟಗಳ ಪರಿಹಾರಕ್ಕೆ ರಾಜ್ಯ ಸರಕಾರ ಎಲ್ಲ ಕ್ರಮಗಳನ್ನು ಕೈಗೊಂಡಿದೆ. ನವಗ್ರಾಮಗಳಲ್ಲಿ ಮನೆಗಳನ್ನು ನಿರ್ಮಿಸಲು ರಾಜ್ಯದಲ್ಲಿರುವ ವಿವಿಧ ಮಠಾಧೀಶರು ಹಾಗೂ ಉದ್ದಿಮೆದಾರರು ಹೆಚ್ಚಿನ ಸಹಾಯ ಹಾಗೂ ಸಹಕಾರವನ್ನು ನೀಡುತ್ತಿದ್ದು, ಸಂತ್ರಸ್ತರು ಯಾವುದೇ ಭಯ ಹಾಗೂ ಭೀತಿಗೆ ಒಳಪಡಬೇಕಾದ ಅವಶ್ಯಕತೆಯಿಲ್ಲ ಎಂದು ಹೇಳಿದರು.
ನೆರೆ ಪರಿಹಾರ ಕಾರ್ಯದಲ್ಲಿ ಕೇಂದ್ರ ಸರಕಾರ ನೀಡುತ್ತಿರುವ ಸಹಕಾರಕ್ಕೆ ತಮ್ಮ ಮೆಚ್ಚುಗೆಯನ್ನು ವ್ಯಕ್ತಪಡಿಸಿದ ಮುಖ್ಯಮಂತ್ರಿಗಳು ನವೆಂಬರ್ 5 ಹಾಗೂ 6 ರಂದು ದೆಹಲಿಗೆ ಭೇಟಿ ನೀಡಿ ಪ್ರಧಾನಮಂತ್ರಿಗಳನ್ನು ಭೇಟಿಯಾಗಿ ನೆರೆ ಪರಿಹಾರ ಕಾರ್ಯಗಳ ಬಗ್ಗೆ ವಿವರಗಳನ್ನು ಒದಗಿಸುವುದರ ಜೊತೆಗೆ ನೆರೆ ಗ್ರಾಮಗಳ ಭೇಟಿಗೆ ಆಗಮಿಸುವಂತೆ ಮನವಿ ಮಾಡುವುದಾಗಿ ತಿಳಿಸಿದರು.
(ದಟ್ಸ್ ಕನ್ನಡ ವಾರ್ತೆ)